Saturday, April 29, 2006

ಲಾಡೆನ್ನೂ, ಚಿಂಪಾಂಜಿಯೂ, ಅಸತ್ಯಾನಂದರೂ...

"20 ಚಿಂಪಾಂಜಿ ಜತೆ ಲಾಡೆನ್ ಪರಾರಿ" ಎಂಬ ಸುದ್ದಿ ಕನ್ನಡಪ್ರಭದಲ್ಲಿ ರಾ...ರಾ...ಜಿಸುತ್ತಿತ್ತು. ಅಯ್ಯೋ ಶಿವ್ನೇ, ಲಾಡೆನ್‌ಗೆ ಅಂಜಿ ಚಿಂಪಾಂಜಿಗಳು ಅಥವಾ ಅಮೆರಿಕನ್ನರು ಪರಾರಿ ಕೀಳಬೇಕಾದ್ದು ಸಹಜ, ಆದ್ರೆ ಲಾಡೆನ್ನೇ ಪರಾರಿ ಆಗಿದ್ದಾನಲ್ಲ ಎಂದು ಆಫ್ಘಾನ್ ಬೆಟ್ಟಗುಡ್ಡಗಳಲ್ಲೆಲ್ಲಾ ಮನಸು ಶೋಧಿ(ಕಿ)ಸಹತ್ತಿತ್ತು!! ಅನುಮಾನ ಬಂದು ಮತ್ತೊಮ್ಮೆ ಹೆಡ್ಡಿಂಗ್ ನೋಡಿದೆ. ಇಲ್ಲಾ ಅದು "20 ಚಿಂಪಾಂಜಿ ಜತೆ ಲಾಡೆನ್ 'ಪರ'ರೀ" ಎಂದು ಇದ್ದಿರಬೇಕು ಎಂಬ ಪರಾಲೋಚನೆ ಸುಳಿದು ಸುರುಳಿ ಸುತ್ತಹತ್ತಿತ್ತು. ಅಷ್ಟರಲ್ಲಿ ನನ್ನ ನಂಬುಗೆಯ ಉಪಸಂಹಾರಕ/'ಪ್ರೋ'ವರ್ತಕ/ಸದ್ದುಗಾರ ಸ್ವನಕಲೀ ಕಿಟ್ಟಿ ಕೆಂಡಾಮಂಡಲವಾಗಿ.... "ಸ್ವಾಮೀ ಸಂಪಾದಕ ಬುದ್ಧೀ, ಮೊದಲು ಓದಿ ನೀವು ಸುದ್ಧಿ..." ಎಂದು ಗುದ್ದು ನೀಡಿದ. ಸುದ್ದಿ ಓದಿದಾಗ, ಲಾಡೆನ್‌ನಷ್ಟೇ ಪ್ರಖಾರವಾಗಿ ಚಿಂಪಾಂಜಿಗಳು ಹಲ್ಲೆ ನಡೆಸಿದ್ದು ಕಂಡು ಅಮೆರಿಕನ್ ಲಾ ಈಸ್ ಇನ್ ಲಾ'ಡೆನ್' ಎಂಬುದು ಸ್ಪಷ್ಟವಾಗಹತ್ತಿತ್ತು.

ಸುದ್ದಿಮೂಲ ಹುಡುಕುತ್ತಾ ಡಾಮಿನಿಕನ್ ಟುಡೇ ತಲುಪಿದಾಗ ಅದರಲ್ಲಿದ್ದ ಚಿಂಪಾಂಜಿ ಕಂಡು ಅಂಜಿಕೆಯಿಂದ ಹಿಂತೆಗೆದೆ. ಇಲ್ಲಿರುವ ಚಿಂಪಾಂಜಿಯನ್ನು ಎಲ್ಲೋ ನೋಡಿದಹಾಗಿದೆಯಲ್ಲ ಎಂದೆನಿಸಿತು. ಸ್ವನಕಲಿ ಕಿಟ್ಟಿಗೆ ನನ್ನ ಅನುಮಾನ ಗೊತ್ತಾಯಿತೇನೋ ತಲೆ ಗಿರ್ರನೇ ತಿರುಗಿಸುತ್ತಾ 'ನೆಟ್'ಲೆಲ್ಲಾ ಸುತ್ತಾಡಿ ಅ'ಭೂತ'ಪೂರ್ವ ಮಾಹಿತಿ ಕಲೆಹಾಕಿದ.

ಅಸತ್ಯ ಮೂಲ: ಅವನ ಮಾಹಿತಿಯಂತೆ, ಅಮೆರಿಕನ್ನರ ಜೀವ ತಿಂದ ಚಿಂಪಾಂಜಿಗಳಲ್ಲಿ ಒಂದು ನೆಟ್‌ನಲ್ಲಿ ಗೂಡು ಕಟ್ಟಿಕೊಂಡಿದೆಯಂತೆ. ಅದು ಬ್ಲಾಗಿನ ಮೇಲೆ ಬ್ಲಾಗಿನ ಮೇಲೆ ಧಾಳಿ ನಡೆಸುತ್ತಲೇ ಬ್ಲಾಗ್'ಹರಣ' ಮಾಡುತ್ತಿದೆಯಂತೆ. ಅದು ಇರುವ ಗೂಡು ತೋರಿಸು ಎಂದು ಕಿಟ್ಟಿಯನ್ನು ಕೇಳಿದಾಗ ಅವ ನನ್ನನ್ನು ಆ ಸ್ಥಳಕ್ಕೇ ಕರೆದೊಯ್ದ. ಎಲಾ ಇದರಾ... ಇಷ್ಟುದಿನ ಅಸತ್ಯದ ಅಮಲಿನಲ್ಲೇ ಸಿಕ್ಕಕ್ಕಲ್ಲೆಲ್ಲಾ ಕಿತಾಪತಿ(ಕಿತ್ತು ಫಜೀತಿ) ಮಾಡುತ್ತಿದ್ದ ಬೊಗಳೆ ಪಂಡಿತರ ಫೋಟೋ ಮತ್ತು ತಪ್ಪಿಸಿಕೊಂಡ ಚಿಂಪಾಂಜಿಯ ಫೋಟೋ ಒಂದೇ ರೀತಿಯದಾಗಿತ್ತು.


ಈಗ ಸತ್ಯದ ಅರಿವಾಗತೊಡಗಿದೆ. ಬ್ಲಾಗ್ ಸ್ಪರ್ಧೆಯಲ್ಲಿ ನನ್ನೊಂದಿಗೆ ಸರಿಸಮಾನವಾಗಿ ಇದ್ದ (ಆರಂಭದಲ್ಲಿ ಮಾತ್ರ) ಅಸತ್ಯಾನಂದರು ಬರುಬರುತ್ತಾ ಮಾನವಾತೀತ ಶಕ್ತಿಯೊಂದಿಗೆ ದಾಪುಗಾಲು ಹಾಕುತ್ತಾ ನೆಗೆದೋಡಿದ್ದು (ಈಗಲೂ ಓಡುತ್ತಿದೆ) ಕಂಡು ನನಗೆ ಆಶ್ಚರ್ಯವಾಗಿತ್ತು. ಯಾರಿಗೂ ಅಂಜದೆ ದಾಂಧಲೆ ಮಾಡುವುದರ ಇಂದೆ ಈ 'ದೈತ್ಯ'ಶಕ್ತಿ ಇದೆ ಎಂಬದು ಈಗ ಕನ್ಪರ್ಮ್ಡ್...

ತಲೆಬುಡ ಎನ್ನದೇ ಮೈಪರಚಿಕೊಳ್ಳುತ್ತಿದ್ದೀರಿ ಎಂದು ನನ್ನನ್ನು ಹಣಕಿಸುತ್ತಿರುವಿರಾ? ತಾಳಿ, ನನ್ನ ನಂಬುಗೆಯ ಸ್ವನಕಲಿಯು ಎಂದಿಗೂ ಸಾಕ್ಷಿ ಇಲ್ಲದೆ ನಕಲಿ ಮಾಡಲಾರನು. 20 ಚಿಂಪಾಂಜಿಗಳು ತಪ್ಪಿಸಿಕೊಂಡ ಸುದ್ದಿ ಪತ್ರಿಕೆಗಳಲ್ಲಿ ಬಂದ ತತ್‌ಕ್ಷಣವೇ ಬೊಗಳೆ ಪಂಡಿತರು ಎರಡು ದಿನ ರಜೆಹಾಕಿ ಅಜ್ಞಾತವಾಸಕ್ಕೆ ತೆರಳಿದ್ದಾರೆ. ನನ್ನ ಸಾಕ್‌ಷೀ ಸಾಕಲ್ಲವೇ? ವನವಾಸದಲ್ಲಿರಬೇಕಾಗಿದ್ದ ಅವರು ಅಜ್ಞಾತವಾಸಕ್ಕಾಗಿ ಯಾವ ವನಕ್ಕೆ ಹೋಗಿದ್ದಾರೋ ಪರಿಶೀಲಿಸಿ ವರದಿ ಸಲ್ಲಿಸಲು ಸ್ವನಕಲಿಗೆ ಆದೇಶ ನೀಡಿದ್ದೇನೆ.

ಓದುಗರ ಗಮನಕ್ಕೆ: ಮೇ 1ರ ಕಾರ್ಮಿಕರ ದಿನಾಚರಣೆ ಪ್ರಯುಕ್ತ 'ಮಿಕ'ಗಳ ಭೇಟೆಗಾಗಿ ತೆರಳುತ್ತಿದ್ದೇನಾದ್ದರಿಂದ ಮೇ 2 ರಂದು ನಿಮ್ಮನ್ನು ಭೇಟಿಯಾಗುತ್ತೇನೆ. ಅಲ್ಲಿಯವರೆಗೆ ಗುಡ್‌ಬಾಯ್.

Thursday, April 27, 2006

ಬೇಡ ಬೇಡ ನಮಗೆ ಕನ್ನಡ ಬೇಡ

ಭಾರಿಸು ಕನ್ನಡ ಡಿಂಡಿಮವಾ
ಓ ಕರ್ನಾಟಕ ಹೃದಯ ಶಿವಾ


ಶಿವ ಶಿವಾ... ಈ ಡಂಗುರ ಕೇಳಿ ಕೇಳಿ ಮನಸು ಕಂಗಾಲಾಗಿದೆ. ಈ ಡಂಗುರ ಕೇಳುವ ಅಲ್ಪಸಂಖ್ಯಾತರಲ್ಲಿ ನಾನೂ ಒಬ್ಬನಿರುವುದರಿಂದ 'ಅಲ್ಪ'ಸಂಖ್ಯಾತ ಸಹಜ ಭೀತಿ ನನ್ನನ್ನಾವರಿಸುತ್ತದೆ. ಈ 'ವಿಷಾಲಯ' ಹೃದಯದಲ್ಲಿ ಕನ್ನಡಕ್ಕೆ ಸ್ಥಾನ ಕೊಟ್ಟರೆ ಅದಕ್ಕೆ ವಿಷಪ್ರಾಶನ ಮಾಡಿ ಕೊಲೆ ಮಾಡಿದಂತಾಗುತ್ತದೆ ಎಂಬ 'ಅಲ್ಪ' ಭೀತಿ ಎದುರಾಗಿ ಹೃದಯದಿಂದ ಕನ್ನಡವನ್ನು ಕಿತ್ತುಹಾಕಬೇಕೆಂದಿದ್ದೇನೆ. ನನ್ನ ಹೃದಯದಿಂದಷ್ಟೇ ಅಲ್ಲ ವಿಷಾನಿಲಯ ಕನ್ನಡಿಗರೆಲ್ಲರ ಹೃದಯಕ್ಕೆ 'ಕನ್ನ' ಹಾಕಿ ಕನ್ನಡವನ್ನು ಮುಕ್ತಗೊಳಿಸಬೇಕೆಂದಿದ್ದೇನೆ.

ಕನ್ನಡ ಡಿಂಡಿಮ ಕೇಳಿ ಕೇಳಿ ಕಿವಿ ಕಿವುಡಾಗಿ ಬೆಪ್ಪು 'ಬೆರಣಿ'ಗಣ್ಣು ತೇಲಿಸುತ್ತಿದ್ದಾಗ, 'ಆಂಗ್ಲ' ದಂಡ ಹಿಡಿದು 'ಸಾಫ್ಟ್' ಆಗಿ ಮೇಲೇರಿದ 'ಕನ್ನ'ಡ ಮಿತ್ರರು ನನ್ನ ಕಾಲರ್ ಹಿಡಿದೆಳೆದು ಪಿಂಡ ದಂಡ ಎಂದೆಲ್ಲಾ 'ಹಾರ್ಡ್' ಆಗಿ ಕೊರೆದು ತಲೆ ತೂತು ಮಾಡುವುದರಲ್ಲಿದ್ದರು. ಅಷ್ಟರಲ್ಲಿ 'ಎಚ್ಚರ'ಗೊಂಡೆ. ಸರಿ, ನಾನೂ ಮೇಲೇರಬೇಕು, ಆಂಜನೇಯನಂತೆ ಸೀಮೋಲಂಘನ ಮಾಡಬೇಕೆಂದು ನಿರ್ಧರಿಸಿ 'ಹಾರ್ಡ್' ಆಗಿ ಪ್ರಯತ್ನಿಸಿ ನೋಡಿದೆ. ಹೂಂ...ಹೂಂ... ಬಿಲ್ ಕುಲ ನಿನಗೆ ಸಾಧ್ಯವಿಲ್ಲ ಎಂದು ಕಪಾಳ ಮೋಕ್ಷದ ಏಟು ನೀಡಿ ಸೀಮೆ ಬಿಟ್ಟೇ ಓಡಿಸಿದರು. ಕೆನ್ನೆ ಊದಿಸಿಕೊಂಡ ಆಂಜನೇಯನಾದೆ.

ಕರ್ನಾಟಕದಲ್ಲಿ ಉಸಿರಾಡಲು ಕನ್ನಡ ದೇವತೆಗೇ ಕಷ್ಟವಾಗಿರುವಾಗ ಆಕೆಯ ಉಸಿರು ನಂಬಿ ಬದುಕುತ್ತಿರುವ ನನ್ನಂತಹ ಬಡಪಾಯಿ ಕತೆ ಏನಾಗಬೇಕು? ಬೇಡವೇ ಬೇಡ ಕನ್ನಡ ಎಂದು ಭಂಡ ಧೈರ್ಯ ಮಾಡಿ ಆಂಗ್ಲ ದೇವತೆಯ ಒಲಿಸಿಕೊಳ್ಳಲು ಇದ್ದಬದ್ದ ವ್ರತ ಮಾಡಲು ನಿರ್ಧರಿಸಿದೆ. ಮನಸಿನಲ್ಲಿ ಕನ್ನಡ ದೇವತೆಯನ್ನು ಇರಿಸಿಕೊಂಡು ನನ್ನ ಪೂಜಿಸುತ್ತಿರುವೆಯಾ ಎಂದು ಆ ಆಂಗ್ಲ ದೇವತೆ ಮತ್ಸರದಿಂದ ನನಗೆ ಶಾಪವಿತ್ತಳೋ ಏನೋ ನನ್ನ ವ್ರತವೆಲ್ಲಾ ವ್ಯರ್ಥವಾದವು.

ನನಗಂತೂ ಆ ದೇವತೆ ಒಲಿಯಲಿಲ್ಲ. ನನ್ನ ಕೆಳ ತಲೆಮಾರಿನವರು ಈ ರೀತಿಯ ಬಾಧೆ ಅನುಭವಿಸಬಾರದೆಂದು ದೃಢನಿಶ್ಚಯ ಮಾಡಿದ್ದೇನೆ. ಇಂದಿನ ಜಾಗತೀಕರಣದಲ್ಲಿ ಇಂಗ್ಲೀಷ್ ನಮಗೆ ಅನ್ನದಾತೆ. ಹಸಿದುಹೋಗಿರುವ ನಮಗೆ ಅನ್ನದಾತೆಯೇ ಮುಖ್ಯ. ಊಟಕ್ಕಿಲ್ಲದ ಉಪ್ಪಿನಕಾಯಿ ಇದ್ದರೆಷ್ಟು ಬಿಟ್ಟರೆಷ್ಟು.

ಮನೆಯಲ್ಲಿಯಾಗಲೀ ಅಥವಾ ಶಾಲೆಯಲ್ಲಿಯಾಗಲೀ ಇಂಗ್ಲೀಷ್ ಮಾತನಾಡುವಿಕೆಗೆ ಪ್ರೋತ್ಸಾಹವಿರಬೇಕು. ಇಲ್ಲದಿದ್ದರೆ ನಮಗೆ ಇಂಗ್ಲೀಷ್ ಸರಿಯಾಗಿ ಸಿದ್ಧಿಸದು. ಕೊಡಗಿನ ಎಷ್ಟೋ ಮನೆಗಳಲ್ಲಿ ಇಂಗ್ಲೀಷ್ ಇಂದು ಮನೆಮಾತಾಗಿರುವಂತೆಯೇ ಕರ್ನಾಟಕದ ಪ್ರತೀ ಮನೆಗಳಲ್ಲೂ (ಗ್ರಾಮಗಳೂ ಸೇರಿ) ಇಂಗ್ಲೀಷ್ ನೆಲೆಸಬೇಕು. 'ಹೊಟ್ಟೆಗೆ ಇಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವೇಕೆ?' ಎಂಬ ಸಾಕ್ಷಾತ್ಕಾರದಂತೆ ನಮ್ಮ ಹೊಟ್ಟೆಗೆ ಅನ್ನ ನೀಡುವ ಇಂಗ್ಲೀಷ್ ಅನ್ನು ಮಾತ್ರವೇ ಬಳಸೋಣ. ಸಾಧ್ಯವಾದರೆ, ಸಮಯವಿದ್ದರೆ, ವ್ಯವದಾನವಿದ್ದರೆ ಕನ್ನಡ ನೋಡೋಣ.

ಪ್ರಪಂಚದ ಹಲವಾರು ಭಾಷೆಗಳು ಈಗಾಗಲೇ ಜನರ ನಾಲಗೆಯಿಂದ ತಪ್ಪಿಸಿಕೊಂಡು ಮುಕ್ತವಾಗಿವೆ. ಆ ಮುಕ್ತವಾಹಿನಿಗೆ ಕನ್ನಡವನ್ನೂ ಸೇರಿಸಿ ಕೃತಾರ್ಥರಾಗೋಣ. ಬನ್ನಿ ಎಲ್ಲರೂ ಬನ್ನಿ ನನ್ನೊಂದಿಗೆ ಕೈಜೋಡಿಸಿ. ಕರ್ನಾಟಕದ(ಅಥವಾ ಭಾರತದ) ಪ್ರತೀ ವ್ಯಕಿಯ ಮನೆಮಾತು ಇಂಗ್ಲೀಷ್ ಆಗುವುದರತ್ತ ಆಂಗ್ಲಾಂದೋಲನ ನಡೆಸೋಣ,... ಕನ್ನಡವನ್ನು ಮುಕ್ತಗೊಳಿಸೋಣ....

Monday, April 24, 2006

ರಂಜನೀ ಟ್ಯೂಮರಿಗೂ ಪ್ರ'ಮೋದ' ಲೀವರಿಗೂ...

ವಿಶ್ವಾದ್ಯಂತ ಓದುಗರ ಕಾಂವ್ ಕಾಂವ್ ದೃಷ್ಟಿಗೆ ಬಿದ್ದಿರುವ ನನ್ನ ನೆಚ್ಚಿನ ಬ್ಲಾಗ್ bug ಬೊಗಳೆ ಪಂಡಿತರು ಯದ್ವಾತದ್ವ ಗುಂಡುಹೊಡೆದು 'ನೆಟ್'ಟರಿನಲ್ಲಿ ಮಿಂದಿದ್ದಾರೆ. ಅವರ proಮೋದಕ್ಕೆ ಬಲಿಯಾದದ್ದು ಪ್ರಮೋದ್ ಮಹಾಜನ್ ಅವರ ಜೀವನ್ಮರಣ 'ಹೋರಾಟ'ಕ್ಕೆ ಚಾಲನೆ ನೀಡಿದ ಪ್ರವೀಣ. ಪ್ರವೀಣನು 'ಗುಂಡು'ಹಾಕಿಕೊಂಡು ಗುಂಡು ಹೊಡೆದ ಎಂದು ನಮ್ಮ ಅಸತ್ಯಾನ್ವೇಷಿಗಳು ತೆಗೆದ ರಗಳೆ ನೋಡಿ ಭಯಭೀತರಾಗಿದ್ದ ಪ್ರವೀಣಸತಿಯು ತಡೆಯಲಾರದೆ ಬಾಯಿಬೀಗ ತೆರೆದು ತಮ್ಮ ಪತಿಯು ಮಾನಸಿಕವಾಗಿ ಅಸ್ವಸ್ಥರಾಗಿದ್ದರು ಎಂದು ಹೇಳಿ ತಲೆ ಕೆಡಿಸಿದ್ದಾರೆ.

ಪ್ರಮೋದರಿಗೆ ಗುಂಡೇಟು ಬಿದ್ದೊಡನೆಯೇ ನಮ್ಮ ಚೆನ್ನೈನ ಅ'ಪರ'ಅಭಿಮಾನಿಗಳು ಹರ್ಷೋಚಿತ್ತರಾಗಿದ್ದರು. ದಂಗಾಗಿ ವಿಚಾರಿಸಿದಾಗ ಕಂಡುಬಂದ ವಿಚಾರಕ್ಕೆ ಮತ್ತಷ್ಟು ದಂಗಾಗಬೇಕಾಯಿತು. ತಮಿಳು ಚಿತ್ರಾನ್ನದ ಅನಾಶಕ್ತ ದೊರೆ ರಂಜನೀಕಾಂಡರ ಒಂದು ಚಿತ್ರದ ಪ್ರಸಂಗವೊಂದನ್ನು ಪರಿಪರಿಯಾಗಿ ಬೇಡವೆಂದರೂ ಕೇಳದೆ ಸ್ವಾ'ರಹಸ್ಯ'ವಾಗಿ ಬಣ್ಣಿಸಿದರು...

ಆ ಚಿತ್ರದಲ್ಲಿ,...ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದ ರಂಜನೀ ತಲೆಗೆ ಗುರಿ ಇಟ್ಟು ದುಷ್ಟರು ಗಂಡು ಹಾರಿಸಿದ್ದರು. ಒಂದು ಗುಂಡು ನೇರವಾಗಿ ರಂಜನೀ ತಲೆಯನ್ನು ಭೇದಿಸಿ ಹೊರ ಬಂದಿತ್ತು. ಪ್ರೇಕ್ಷಕರ 'ವಿಷ'ನಾದ ಇನ್ನೇನು ಹೊರಬರಬೇಕು ಅಷ್ಟರಲ್ಲಿ ವಿಸ್ಮಯ ನಡದೇಹೋಗಿತ್ತು. ದುಷ್ಟರ ಗುಂಡು ರಂಜನೀ ತಲೆಯನ್ನು ಹೊಕ್ಕು ಹೊರಬಂದಾಗ ಒಂದೇ ಬರಲಿಲ್ಲ-ತನ್ನೊಂದಿಗೆ ಟ್ಯೂಮರ್ ಅನ್ನೂ ಕದ್ದೊಯ್ದಿತ್ತು. ಹೋದ್ಯಾ ಪೀಡೆ ಎಂದು ಮು'ಗುಳ್ಳೆ'ನಗೆ ಬೀರುತ್ತಾ ರಂಜನೀ ರಂಜಿಸುತ್ತಿದ್ದರೆ ಪ್ರೇಕ್ಷಕರು ಗಿಂಜಿದ ಹಲ್ಲಿಗೆ ಥಿಯೇಟರಿನಲ್ಲಿದ್ದ ಇದ್ದಬದ್ದ ಬೆಳಕೂ ಮಾಯವಾಗಿ ಕಗ್ಗತ್ತಲಾಯಿತಂತೆ.

ರಂಜನೀಕಾಂಡರ ಮಿದುಳಿನ ಮರ್ಮ ಅ(ಹ)ರಿಯಲು ಹಾರಿಸಿದ್ದ ಗುಂಡು ಮಿದುಳುಗಡ್ಡೆಯನ್ನೇ ಹೊತ್ತುಬಂದದ್ದು ಹೇಗೆ? ಘಟನೆಯನ್ನು ಕೂಲಂ'ಕಸ'ವಾಗಿ ವಿಚಾರಿಸಿದಾಗ ತಿಳಿದುಬಂದದ್ದೇನೆಂದರೆ, ರಜನೀ ಮಿದುಳಿನಲ್ಲಿ ಟ್ಯೂಮರ್ ಬಿಟ್ಟು ಬೇರೆ ಏನೂ ಇಲ್ಲದ್ದರಿಂದ ಪಾಲಿಗೆ ಬಂದದ್ದೇ ಪಂಚಾ'ಮೃತ' ಎಂದು ಆ ಗುಂಡು ಆಂಜನೇಯನಂತೆ ಮಿದುಳುಗಡ್ಡೆಯನ್ನೇ ಹೊತ್ತಬಂದಿತಂತೆ.

ರಂಜನೀಕಾಂಡರ ಮಿದುಳು ಗುಡ್ಡೆಗೂ ಪ್ರಮೋದರಿಗೆ ತಗುಲಿದ ಗುಂಡಿಗೂ ಎತ್ತಣದಿಂದೆತ್ತಣ ಸಂಬಂಧವಯ್ಯಾ ಎಂದು ಕೇಳಿದೆ. ರಜನೀಯ ಬ್ರೈನ್ ಟ್ಯೂಮರ್ ಅನ್ನು ನಿವಾರಿಸಿದ ಹಾಗೆಯೇ ಪ್ರಮೋದರ ದೇಹ ಹೊಕ್ಕ ಗುಂಡು ಲಿವರ್, ಕಿಡ್ನಿ ಮೊದಲಾದ ಭಾಗಗಳನ್ನು ಆಪರೇಷನ್ ಮಾಡಿ ಅವರಿಗಿದ್ದ ಪೀಡೆಗಳನ್ನು ತೊಲಗಿಸಿದೆ ಆ 'ಸಿನಿ'ಕ ಪ್ರಿಯ ಮಿತ್ರ ವೃಂದ ಹಲ್ಕಿರಿದಿತ್ತು.

Monday, April 17, 2006

ನರ"ಮೇಧಾ" ಬಚಾವೋ


ರಾಜ್‌ಕುಮಾರ್ ಅವರ ಸಚ್ಚರಿತ ಪುಟದ ಅಂತ್ಯದಲ್ಲಿ ನರಮೇಧದ ಮೂಲಕ ಸಂಸ್ಕಾರಭರಿತ ಕನ್ನಡಿಗರು ವಿಕೃತಿ ಗೀಚುತ್ತಿದ್ದರೆ ಅತ್ತ ಗುಜರಾತಿನಲ್ಲಿ ನರ್ಮದಾ ಬಚಾವೋ ಆಂದೋಲನದ ಮೂಲಕ "ನೆಲೆ"ಗಳ್ಳರ ವಿರುದ್ಧ ಸೆಟೆದು ನಿಂತ ಮೇಧಾ ಪಾಟ್ಕರ್ ಅವರ ಹೋರಾಟವನ್ನು ವಿಕೃತಗೊಳಿಸುವ ಪ್ರಯತ್ನ ನಡೆಯುತ್ತಿದೆ.

ಕರ್ನಾಟಕ ಸುಪುತ್ರ, ಸದಾಚಾರಿ, ದಿವಂಗತ ಡಾ. ರಾಜ್‌ಕುಮಾರ್ ಅವರ ಆತ್ಮ ಶೂನ್ಯದಲ್ಲಿ ಲೀನಗೊಂಡ ನಂತರ ಅನೇಕ ಮುಗ್ಧ ಆತ್ಮಗಳನ್ನು ಬಲವಂತವಾಗಿ ಮುಕ್ತಗೊಳಿಸಲಾಯಿತು. ರಾಜ್‌ಕುಮಾರ್ ಅವರಿಗಾಗಿ ಆಶ್ರುತರ್ಪಣ ಸಲ್ಲಿಸಬೇಕಿದ್ದ ಆ ಆತ್ಮಗಳಿಗೆ ರಾಜಾತ್ಮವು ಮೌನವಾಗಿ ಆಶ್ರುತರ್ಪಣ ಸಲ್ಲಿಸಬೇಕಾದ ಪರಿಸ್ಥಿತಿ ಒದಗಿದ್ದು ವಿಪರ್ಯಾಸ.

ಸಾಂಸ್ಕೃತಿಕ ಶ್ರೀಮಂತಿಕೆ ಎಂಬ ಬಣ್ಣನೆಯೊಂದಿಗೆ ಮೈಬೆಳೆಸಿಕೊಂಡಿದ್ದ ಕನ್ನಡಿಗರು ಇಂದು ಪ್ರಪಂಚದ ದೃಷ್ಟಿಯಲ್ಲಿ ಕೇವಲಕ್ಕೆ ಕುಸಿದಿದ್ದಾರೆ. ಕೈವಾಡ, ಪಿತೂರಿ ಎಂಬಿತ್ಯಾದಿ ಕಾರಣಗಳು ಇಲ್ಲಿ ನಿರುಪಯುಕ್ತ. ಪಿತೂರಿ ನಡೆಸಿದ್ದು ಸತ್ಯವೆಂದುಕೊಂಡರೂ ಅದನ್ನು ರೂಪಿಸಿದವರು ಕನ್ನಡಿಗರೇ ಅಲ್ಲವೇ? ಇದರ ಬಗ್ಗೆ ಮತ್ತೊಂದು ಬಾರಿ ಚರ್ಚಿಸುತ್ತೇನೆ.

ಇದೀಗ ಹೊತ್ತಿ ಉರಿದುಹೋಗುತ್ತಿರುವುದು ನರ್ಮದಾ ನದಿ ನೀರಿನ ತೆಕ್ಕೆಯಲ್ಲೇ ಹತಾಶಗೊಂಡ ಮೇಧಾ ಅವರ ಕಿಚ್ಚು. ಆಕೆ ಅಕ್ಷರಶಃ ಆಧುನಿಕ ಗಾಂಧಿ. ಬಡವರ, ಅಸಹಾಯಕರ ಒಡಲಾಳದ ಉರಿ. ಬಡವರ ನಿಟ್ಟುಸಿರ ತಾಪದ ಮೇಲೆಯಷ್ಟೇ ಅಭಿವೃದ್ಧಿಯ ಜಪ ಮಾಡಲು ಹೊರಟ ಮನಸ್ಥಿತಿ ವಿರುದ್ಧ ಶಾಂತವಾಗಿಯೇ ಹೋರಾಟ ನಡೆಸುವ ಮೇಧಾ ಪಾಟ್ಕರ್ ಅವರ ಕೆಚ್ಚೆದೆಗೆ ಈ ಕಾಲದಲ್ಲಿ ಸಾಟಿಯಿಲ್ಲ.ನರ್ಮದಾ ನದಿಗೆ ಅಣಿಕಟ್ಟು ನಿರ್ಮಿಸುವುದರಿಂದ ಹಸುರು ಘಟ್ಟದ ಜೀವಸಂಕುಲ, ಪ್ರಾಕೃತಿಕ ಸಂಪತ್ತಿಗೆ ಧಕ್ಕೆ ತಗುಲುತ್ತದೆ ಎಂದು ಯೋಜನೆ ಪ್ರಾರಂಭದ ಮುಂಚೆಯೇ ಮೇಧಾ ಅವರು ಎಚ್ಚರಿಕೆ ಇತ್ತಿದ್ದರು. ಅದ್ಯಾವುದನ್ನೂ ಕಿವಿಗೆ ಹಾಕಿಕೊಳ್ಳುವ ಗೊಡವೆಗೇ ಹೋಗದೆ ಯೋಜನೆಗೆ ಚಾಲನೆ ನೀಡಲಾಯಿತು. ಯೋಜನೆಯಿಂದ ಬಡವರ "ನೆಲೆ" ನೀರುಪಾಲಾಯಿತು. ಅವರ ನೆಲೆಗೆ ಸೂಕ್ತ ಪರ್ಯಾಯ ಒದಗಿಸುವ ಯೋಚನೆ ಆ ಯೋಜನೆ ನಿರ್ಮಾತೃಗಳಿಗೆ ಬರಲೇ ಇಲ್ಲ. ತಮ್ಮ ಹಣದ ಸೆಲೆ ಬಗ್ಗೆ ಚಿಂತಿತರಾಗುವ ಮಂದಿ ಬಡವರ ನೆಲೆ ಬಗ್ಗೆ ತಲೆಕೆಡಿಸಿಕೊಳ್ಳುವುದೆಂತು?

ನೆಲೆ ಕಳೆದುಕೊಂಡಿರುವ ಬಡವರಿಗೆ ಸೂಕ್ತ ವ್ಯವಸ್ಥೆಯನ್ನಾದರೂ ನೀಡಬೇಕೆಂದು ಮೇಧಾ ಪಾಟ್ಕರ್ ಅವರು ನಡೆಸುತ್ತಿರುವ ಹೋರಾಟ ತಪ್ಪೇನು? ಗಾಂಧಿ ಅವರ ಹಾಗೆಯೇ ಮೇಧಾ ಅವರೂ ಸಹ ಉಪವಾಸ ಸತ್ಯಾಗ್ರಹಗಳ ಮೂಲಕ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಅವರ ಈ ಕಾರ್ಯದಿಂದ ದೇಶದಲ್ಲಿ ಕೆಲ ಮಂದಿಗಾದರೂ ನ್ಯಾಯದ ಕಿಚ್ಚು ಹತ್ತೀತು ಎಂಬ ಭರವಸೆ ಇದೆ.

ಮೇಧಾ ಅವರ ಹೋರಾಟವನ್ನು ಹತ್ತಿಕ್ಕಲು ನರೇಂದ್ರ ಮೋದಿ ಮತ್ತಿತರ ಪಡೆ ಸನ್ನದ್ಧವಾಗಿ ಹೋರಾಡುತ್ತಿದೆ. ನರ"ಮೇಧ" ಆಗುವುದೇ ಅಥವಾ "ನರ" ಮೇಧಾ ಆಗುವುದೇ ಎಂಬುದನ್ನು ಕಾದುನೋಡಬೇಕಷ್ಟೇ...

Wednesday, April 12, 2006

ಕನ್ನಡದ ಕುಲಗೌರವ ಡಾ. ರಾಜ್


ಕನ್ನಡದ ಮೇರುನಟ, ಗಾನಕೋಗಿಲೆ ಡಾಃ ರಾಜ್‌ಕುಮಾರ್ ಅವರು ಇಂದು ನಮ್ಮನ್ನಗಲಿದ್ದಾರೆ. ಕನ್ನಡ ಚಿತ್ರರಂಗದ ಸಾರ್ವಭೌಮರಾಗಿ ಮೆರೆದ ಅವರ ನಿಧನದಿಂದ ಕಡೆಯಪಕ್ಷ ಕಣ್ಣು ತೇವಗೊಳ್ಳದಿರುವ ಕನ್ನಡಿಗರು ಬಹುಕಡಿಮೆ. ಬದುಕಿನಲ್ಲಿ ಶಾಂತಿಗಾಗಿ ತಹತಹಿಸುತ್ತಿದ್ದ ಈ ಮುತ್ತುವಿನ ಆತ್ಮಕ್ಕೆ ಶಾಂತಿ ನೀಡಲು ಆ ಪರಮಾತ್ಮನಲ್ಲಿ ನನ್ನ ನಿವೇದನೆ.

ವೃತ್ತಿಯಲ್ಲಿ, ವ್ಯಕ್ತಿತ್ವದಲ್ಲಿ ಅವರೊಂದು ಮಾದರಿ. ಹಿರಿಯರು ಕಿರಿಯರೆಂಬ ಭೇದವಿಲ್ಲದೆ ನಯ ವಿನಯ ನಡೆತೆ ತೋರುತ್ತಿದ್ದ ಅವರ ಬಗ್ಗೆ ಹೇಳುವ ಒಳ್ಳೆಯ ಮಾತುಗಳ್ಯಾವುವೂ ಅತಿಶಯೋಕ್ತಿ ಎನಿಸುವುದಿಲ್ಲ. ಜನರ ಹೊಗಳಿಕೆ ತೆಗಳಿಕೆಗಳಿಗೆ ಅವರೊಬ್ಬ ಮುಗ್ಧ ವೀಕ್ಷಕರಾಗಿದ್ದರು. ತಾವು ಮಾಡದ ಒಪ್ಪುಗಳಿಗೆ ಹೇಗೆ ಶ್ಲಾಘನೆಗಳನ್ನು ಪಡೆಯುತ್ತಿದ್ದ ಅವರು ಹಾಗೆಯೇ ತಾವು ಮಾಡದ ತಪ್ಪುಗಳಿಗೂ ಕಟು ಟೀಕೆಗೊಳಗಾಗುತ್ತಿದ್ದರು.


ಆಶ್ಚರ್ಯವೆಂದರೆ ಅವರ ಒಪ್ಪು ತಪ್ಪುಗಳು ಮಾಧ್ಯಮಗಳಲ್ಲಿ ಅಷ್ಟಾಗಿ ಪ್ರತಿಧ್ವನಿಸದೇ ಜನರ ಆಡುಮಾತುಗಳಲ್ಲಿ ದಂತಕತೆಗಳಾಗಿದ್ದವು. ಕೇವಲ ಒಂದು ದಶಕದ ಹಿಂದೆ ವೀರಕನ್ನಡಿಗರಾಗಿದ್ದ ಅವರು ವೀರಪ್ಪನ್‌ನಿಂದ ಅಪಹರಣಕ್ಕೊಳಗಾದ ಪ್ರಕರಣದ ನಂತರ ಜನಮಾನಸದಲ್ಲಿ ಅವರ ಪ್ರಭೆ ನಂದತೊಡಗಿತ್ತು. ಇದು ಸತ್ಯ. ಪುರುಷಸಿಂಹನೆಂದು ಪರಿಗಣಿತನಾಗಿದ್ದ ತಮ್ಮ ಮಾನಸ ನಾಯಕನು ಕಾಡುಗಳ್ಳನ ತೆಕ್ಕೆಯಲ್ಲಿ ನಲುಗಿಹೋದ ಸತ್ಯ ಅವರ ಅಭಿಮಾನಿಗಳಾಗಿದ್ದವರಿಗೆ ಪಥ್ಯವಾಗಲಿಲ್ಲ. ಇಂತಹ ಅಸಂಬದ್ಧ ಮಾನಸಿಕತೆ ಅವರನ್ನು ಘಾಸಿಗೊಳಿಸಿದ್ದೂ ಸತ್ಯ.

ರಾಜ್ ಮತ್ತವರ ಕುಟುಂಬದ ಬಗ್ಗೆ ಜನಸಾಮಾನ್ಯರಲ್ಲಿ ಹೊಗೆಯಾಡುತ್ತಿದ್ದ ಕೆಲ ಚರ್ಚಾಸ್ಪದ, ಸಂದೇಹಾಸ್ಪದ ಮತ್ತು ಅಸಂಬದ್ಧ ಅಭಿಪ್ರಾಯಗಳು ಈ ಕೆಳಗಿವೆ....

1. ರಾಜ್ ಕುಟುಂಬ ಕನ್ನಡ ಚಿತ್ರರಂಗದಿಂದ ಹಣದ ಕೊಳ್ಳೆಯನ್ನೇ ಹೊಡೆಯಿತು; ಅದಕ್ಕೆ ಪ್ರತಿಯಾಗಿ ಬಿಡಿಗಾಸೂ ಜನಸೇವೆ ಮಾಡಲಿಲ್ಲ.
2. ಕನ್ನಡ ಚಿತ್ರರಂಗದಲ್ಲಿ ತನ್ನ ಕುಟುಂಬ ಸದಸ್ಯರನ್ನು ಬಿಟ್ಟು ಬೇರೆ ಯಾರೂ ಬೆಳೆಯದಂತೆ ಹಿಡಿತ ಸಾಧಿಸಲಾಗಿತ್ತು.
3. ಕನ್ನಡದಲ್ಲಿ ಪಿ.ಬಿ. ಶ್ರೀನಿವಾಸ್ ಅವರ ಗಾಯನ ವೃತ್ತಿಯನ್ನು ಬದಿಗೊತ್ತಲಾಯಿತು.
4. ಬಡತನದಲ್ಲಿ ಬೇಯುತ್ತಿದ್ದರೂ ಅವರನ್ನು ನಂಬಿದ ಸಿನೆಮಾ ಕಲಾವಿದರು, ತಂತ್ರಜ್ಞರಿಗೆ ಅವರು ಏನೂ ನೆರವು ಒದಗಿಸಲಿಲ್ಲ;

ಇವತ್ತಷ್ಟೇ ಇಹಲೋಕದಿಂದ ಮುಕ್ತರಾದ ಡಾ. ರಾಜ್‌ಕುಮಾರ್ ಅವರ ಬಗ್ಗೆ ಟೀಕೆ ಟಿಪ್ಪಣಿಗಳ ಚರ್ಚೆ ನಡೆಸುವುದು ಅಸಂಬದ್ಧ ಎಂಬ ಅರಿವು ಇರುವುದರಿಂದ ಚರ್ಚೆಯನ್ನು ಇಲ್ಲಿಗೆ ನಿಲ್ಲಿಸುತ್ತೇನೆ. ಪ್ರಸ್ತುತ ನಮ್ಮ ಬಳಿ ಅವರಿಲ್ಲದಿರುವುದಕ್ಕಾಗಿ ಮನಸು ಶೋಕಿಸುತ್ತಿದೆ....

Monday, April 10, 2006

ಲಾಟರಿ ಲಾಟರಿ... ನಿಷೇಧ ಸಧ್ಯಕ್ಕಿಲ್ಲಾರಿ...


"ಕಾನೂನಿನಡಿ ಅವಕಾಶವಿಲ್ಲದ ಕಾರಣ ಲಾಟರಿ ಸದ್ಯಕ್ಕೆ ನಿಷೇಧ ಸಾಧ್ಯವಿಲ್ಲ" ಎಂದು ಕರ್ನಾಟಕದ ಲಾಟರಿ ಸಚಿವ ರಾಮಚಂದ್ರಗೌಡ ತಿಳಿಸಿದ್ದಾರೆಂದು ವರದಿಯಾಗಿದೆ. ಅವರು ಲಾಟರಿ ನಿಷೇಧ "ಸದ್ಯಕ್ಕೆ ಸಾಧ್ಯವಿಲ್ಲ" ಎಂದು ಹೇಳಿದರೋ ಅಥವಾ "ಸಧ್ಯಕ್ಕೆ ಸಾಧ್ಯವಿಲ್ಲ" ಎಂದು ಹೇಳಿದರೋ ಎಂಬ ಅನುಮಾನ ಲಾಟರಿ ಜಾಕ್‌ಪಾಟ್‌ನಷ್ಟೇ ಅನುಮಾನಾಸ್ಪದವಾಗಿದೆ.

ಹಂತ ಹಂತವಾಗಿ ಲಾಟರಿ ನಿಷೇಧಿಸಲಾಗುವುದು ಎಂದು ಅವರು ಸ್ಪಷ್ಟಣೆ ಬೇರೆ ನೀಡಿದ್ದಾರೆ. ಈ ಮಾತನ್ನು ದಶಕಗಳಿಂದ ನಮ್ಮ ಸರ್ಕಾರಗಳು ಹಂತ ಹಂತವಾಗಿ ಹೇಳುತ್ತಲೇ ಬಂದಿವೆ. ಇದು ಹಂತ ಹಂತವಾಗಿ ಕಂತುಗಳಲ್ಲಿ ಮುಂದುವರಿಯುತ್ತಲೇ ಹೋಗುತ್ತದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಜಾತ್ಯತೀತ ರಾಷ್ಟ್ರದಲ್ಲಿ ತಾರತಮ್ಯಕ್ಕೆ ಜಾಗವಿಲ್ಲ. ಆದ್ದರಿಂದ ಕರ್ನಾಟಕದ ಲಾಟರಿಯೊಂದಿಗೆ ಹೊರ ರಾಜ್ಯದ ಲಾಟರಿಗಳು ಸರಿಸಮಾನವಾಗಿ ಸ್ಪರ್ಧಿಸಲು ಅವಕಾಶ ನೀಡಲಾಗುವುದು ಎಂದೂ ನಮ್ಮ ಲಾಟರ್ಯತೀತ ಸರ್ಕಾರ ನ್ಯಾಯಸಮ್ಮತ ನಿರ್ಣಯ ವ್ಯಕ್ತಪಡಿಸಿದೆ.

ಜಾತ್ಯತೀತ ಜನತಾದಳದೊಂದಿಗೆ ಕೈ ಜೋಡಿಸಿ (ಕೈ ಮುರಿದು?) ಕರ್ನಾಟಕದಲ್ಲಿ ಪ್ರಪ್ರಥಮ ಬಾರಿಗೆ ಅಧಿಕಾರದ ಜಾಕ್‌ಪಾಟ್ ಹೊಡೆದ ಬಿಜೆಪಿಗೆ ಲಾಟರಿ ಜಾಕ್‌ಪಾಟ್ ಬಗ್ಗೆ ಆಸೆ ಕಮರುವುದುಂಟೆ? ರಾಜ್ಯದಲ್ಲಿ ಲಾಟರಿಯನ್ನು ನಂಬಿ 46 ಸಾವಿರ ಕುಟುಂಬಗಳು ಜೀವನ ಸಾಗಿಸುತ್ತಿರುವುದರಿಂದ ಲಾಟರಿ ನಿಷೇಧ ಏಕಾಏಕಿ ಸಾಧ್ಯವಿಲ್ಲ ಎಂದು ರಾಮಚಂದ್ರಗೌಡರು ಸಮಜಾಯಿಷಿ ನೀಡಿದ್ದಾರೆ. ರಾಮ...ರಾಮ....!!? ರಾಮರಾಜ್ಯದಲ್ಲಿ ನಂಬಿದವರ ಕೈ ಬಿಡುವುದುಂಟೆ? ಲಾಟರಿ ನಂಬಿದ 46 ಸಾವಿರ ಕುಟುಂಬಗಳು ಬೀದಿಪಾಲಾಗುವುದನ್ನು ತಪ್ಪಿಸುವುದಕ್ಕಾಗಿ ಲಾಟರಿಯಲ್ಲೇ ಮುಳುಗಿಹೋದ ಲಕ್ಷಾಂತರ "ಬಡ"ಪಾಯಿ ಕುಟುಂಬಗಳನ್ನು ಬಲಿ ನೀಡುವುದು ತರವಲ್ಲವೆ?. ಇದು "ಬಡ"ತನ ನಿವಾರಣೆ ಆಂದೋಲನದ ಒಂದು ಮಹತ್ ಯೋಜನೆ ಎಂದರೆ ತಪ್ಪಾಗಲಾರದು ಎಂದು "ಅರ್ಧ"ಶಾಸ್ತ್ರ ಪಂಡಿತನೊಬ್ಬ ಕೂಗಾಕಿದಾಗ ತೆಪ್ಪಗಿರಲಾದೀತೆ?

ಲಾಟ್ರೀ ನನ್ನ ಮೊದಲ ಹೆಂಡ್ತಿ: ಲಾಟರಿ ಹೊಡೆಸಿಕೊಂಡು, ತತ್ಪರಿಣಾಮವಾಗಿ ಮದ್ಯದಾರಿ ಹಿಡಿದ ಲಾಟರಿ "ಎಕ್ಸ್" ಪರ್ಟ್ ಬಡಪಾಯಿಯೊಬ್ಬನನ್ನು ಲಾಟರಿ ವಿರುದ್ಧ ಬಂಡಾಯವೇಳಲು ಒಂದು ಬಾರಿ ಭಾರಿ ಪ್ರಯತ್ನವನ್ನೇ ನಡೆಸಿದ್ದೆ. ಅದಕ್ಕೆ ಬಂದ ಉತ್ತರ.... ಅಕಟಕಟಾ....

"ಲಾಟ್ರಿ ನನ್ ಮೊದುಲ್ನೇ ಹೆಂಡ್ತೀರೀ..(ಹೌದು ಇವನು ಸಪ್ತಪದಿ ತುಳಿಯುವ ಮುನ್ನ ಲಾಟರೀ ದಾಸನಾಗಿದ್ದ). ಒಂದಂಕಿ ಎರಡಂಕಿ ನನ್ ಜೀವ್ನಾ ಗುರು (ಜೈಲಿನಲ್ಲಿ ಕಂಬಿಗಳನ್ನು ಎಣಿಸುವ ಮೂಲಕ ಒಂದಂಕಿ ಎರಡಂಕಿಗಳನ್ನು ಇವನು ಕರತಲಾಮಲಕ ಮಾಡಿಕೊಂಡಿದ್ದ). ಹೆಂಡ್ತಿ ಕೆಟ್ಟೋಳಾದ್ರೂ ಬಿಡೋಕಾಯ್ತದಾ. ಹಂಗೆಯಾ ಲಾಟ್ರೀನೂವೇ. ಇವತ್ತು ಗೆಲ್ಲಿಲ್ಲಾ ಅಂದ್ರೇನು ಶಿವ ನಾಳೆ ಜಾಕ್ ಪಾಟ್ ಹೊಡ್ದೇ ಹೊಡೀತೈತೆ."

"ಅಲ್ಲಾ ಗುರುವೇ ನೀನು ಲಾಟರೀಲಿ ದುಡ್ಡು ಕಳ್ಕೊಂಡ್ರೇ ನಿನ್ನ ನಂಬಿದ ಹೆಂಡ್ತಿ ಮಕ್ಕಳ ಗತಿ ಏನು" ಎಂದು ಪುಸಲಾಯಿಸಿದ್ದಕ್ಕೆ ಆತ "ಬಿಡು ಶಿವ, ನೋವಾಯ್ತದೆ... ಅದು ಮರೆಯಕ್ಕಂತಾನೆ ಆ ಶಿವ ಹೆಂಡ ಇಟ್ಟವ್ನೇ..."


ಆಡು ಆಟ ಆಡು
ಆಡು ಆಡು ಆಡಿ ನೋಡು
ಹೇ ರಾಜ ಹೇ ರಾಣಿ
ಹೇ ಜಾಕಿ ಹೇ ಜೋಕರ್
ಎದುರಲ್ಲಿ ನಿಗಾ ಇಡು....

Wednesday, April 05, 2006

ಕೃತಕ ಅಂಗಾಂಗಕ್ಕೆ ತೀವ್ರ ಪ್ರತಿಕ್ರಿಯೆ

(ಪ್ರಯೋಗ ಶಾಲೆಯ ಗಾಜಿನ ತಟ್ಟೆಯಲ್ಲಿ ಬೆಳೆದ "ಮಾನವನ ಅಸಲಿ ಮೂತ್ರಕೋಶ ಬ್ಲಾಡರ್")

ವ್ಯಕ್ತಿಯೊಬ್ಬನ ಜೀವಕೋಶದಿಂದಲೇ ಕೃತಕ ಅಂಗಾಂಗ ಸೃಷ್ಟಿಸಲು ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. ಬಾಪ್ ರೇ.... ವಾರೆ ವಾಹ್.... ಒಂದೆಡೆ ಇದು ಎಂಥ ಕಲಿಗಾಲವಯ್ಯ ಎಂದು "ಸಂ"ಪ್ರದಾಯಿಗಳು ಗೋಗರೆಯುತ್ತಿದ್ದರೆ, ಮತ್ತೊಂದೆಡೆ 'ವಿ'ಜ್ಞಾನಿಗಳು ತಮಗೆ "ಕಲಿ"ಗಾಲ ಬಂದಿತೆಂದು ಎದೆಯುಬ್ಬಿಸುತ್ತಿದ್ದಾರಂತೆ.

ಸವಾಲು: ಮಾನವ ಅಂಗದಿಂದಲೇ ಮತ್ತೊಂದು ಅಂಗವನ್ನೇನೊ ನೀವು ಸೃಷ್ಟಿಸಿಬಿಟ್ಟಿದ್ದೀರಿ. ಆದರೆ ಆತ್ಮವನ್ನು ನಕಲಿಸಲು ನಿಮಗೆ ಸಾಧ್ಯವೇ? ಎಂದು ಅಖಿಲ ಆತ್ಮ ಸಂತಾಪ ಸಂಘವು ವಿಜ್ಞಾನಿಗಳಿಗೆ ಸವಾಲೆಸೆದಿದೆ.

ಸವಾಲು ಸ್ವೀಕರಿಸಿದ 'ವಿ'ಕಾರ ಜ್ಞಾನಿಯೊಬ್ಬ ಆತ್ಮ ವಿನಾಶಕ್ಕೆ ಸಜ್ಜಾಗಿದ್ದಾನೆಂಬ ವರದಿಯೊಂದು ವಿಶ್ವದ ಮೂಲೆಯೊಂದರಿಂದ ಬಂದಿದೆ.

ಅಂಗ ಪಕ್ಷಗಳ ಸಂಘದ ಅಳಲು: ತಮ್ಮ ದೇಹದ ಅಂಗಾಂಗ ಮಾರಾಟ ಮಾಡಿ ಬದುಕುತ್ತಿದ್ದವರ ಹೊಟ್ಟಗೆ ಈ ಸಂಶೋಧನೆಯು ಸಂಚಕಾರ ಉಂಟುಮಾಡಲಿದೆ ಎಂದು ಅಂಗ ಪಕ್ಷಗಳ ಸಂಘದ ಅಧ್ಯಕ್ಷ ಅಂಗಮೇಶ ಅವರು ತೀವ್ರವಾಗಿ ವಿಷಾದಿಸಿದ್ದಾರೆ.

ದೇಹ ವ್ಯಾಪಾರಿಗಳ ಸಂಘದ ಪ್ರತಿಕ್ರಿಯೆ: ಕೃತಕ ಅಂಗ ಸೃಷ್ಟಿಯಿಂದ ತಮ್ಮ ವ್ಯಾಪಾರಕ್ಕೆ ಯಾವುದೇ ಚ್ಯುತಿ ಬರುವುದಿಲ್ಲ ಎಂದು ಲೈಂಗಿಕ ಅಂಗನೆಯರ ಸಂಘದ ಅಧ್ಯಕ್ಷೆ ಗುಪ್ತಾಂಗನೆ ಅವರು ಸ್ಪಷ್ಟಪಡಿಸಿದ್ದಾರೆ.

ಡಾಕುಟರ ಸಂಘ: ಕಿಡ್ನಿ ಮಾರಾಟದಿಂದ ಬದುಕು ಸಾಗಿಸುತ್ತಿದ್ದ 'ಡಾಕು'ಟರರಿಗೆ ಹೊಸ ಸಂಶೋಧನೆಯು ಧಕ್ಕೆ ನೀಡಬಹುದಾದರೂ, ನೂತನ ಮಾರ್ಗಗಳ ಮೂಲಕ ಮೊದಲಿಗಿಂತ ಹೆಚ್ಚು ವ್ಯಾಪಾರ ಸೃಷ್ಟಿಸಲು ಕಷ್ಟಕರವೇನೂ ಇಲ್ಲ ಎಂದು ಡಾಕು ಡಂಕಾಸುರ್ ಅವರು ಡಾಕು ಸಹೋದ್ಯೋಗಿಗಳಿಗೆ ಸಮಜಾಯಿಷಿ ನೀಡಿದ್ದಾರೆ.