Monday, November 03, 2008

ಗುರು ಲಂಕೇಶರ ಏಕಲವ್ಯ ಶಿಷ್ಯ

ಪ್ರಕಾಶ್ ರಾಜ್... ಇವರು ಯಾರೆಂದು ನಿಮಗೆ ಗೊತ್ತೆ? ನೆರೆಯ ತಮಿಳು ಮತ್ತು ತೆಲುಗು ಚಿತ್ರರಂಗಗಳ ಪರಿಚಯ ಇಲ್ಲದವರಿಗೆ ಈ ಹೆಸರು ಗೊಂದಲ ಹುಟ್ಟಿಸಬಹುದು, ಯೋಚನೆಗಟ್ಟಬಹುದು. ಈತ ನಮ್ಮದೇ ಕರ್ನಾಟಕದಿಂದ ಕುಡಿಯೊಡೆದು ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಅಪೂರ್ವ ಸ್ಥಾನ ಗಳಿಸಿರುವ ಅಪ್ಪಟ ಕಲಾವಿದ ಪ್ರಕಾಶ್ ರೈ.

ಹಿಂದಿನ ತಲೆಮಾರಿನ ರಂಗ ಕಲಾವಿದರಿಗೆ ಪ್ರಕಾಶ್ ರೈ ಚಿರಪರಿಚಿತ. ಈತನ ಬಗ್ಗೆ ಬಹಳಷ್ಟು ಸ್ವಾರಸ್ಯಕರ ಕತೆಗಳು ಸಿಗುತ್ತವೆ. ನಾಟಕ ಅಭಿನಯದಿಂದ ಹೊಟ್ಟೆಪಾಡು ನೋಡಿಕೊಳ್ಳಬೇಕಾದ ಒಂದು ಪರಿಸ್ಥಿತಿಯಿಂದ ಈಗ ಹಲವು ಮಂದಿ ಕಲಾವಿದರಿಗೆ ದಾರಿದೀಪವಾಗುವಂತಹ ಉನ್ನತ ಸ್ಥಿತಿಗೆ ಬೆಳೆದಿದ್ದಾರೆ. ನಾನು ಚೆನ್ನೈಯಲ್ಲಿದ್ದಾಗ ರೈ ಅವರನ್ನು ಭೇಟಿ ಮಾಡಲು ಸ್ವಲ್ಪ ಪ್ರಯತ್ನಪಟ್ಟೆ. ಆದರೆ ಇವರು ಒಂದೆಡೆ ಹೆಚ್ಚು ಕಾಲ ನಿಲ್ಲುವ ಜಾಯಮಾನದವರಲ್ಲ. ಶೂಟಿಂಗು, ಅದೂ ಇದೂ ಎಂದು ಊರೂರು ಸುತ್ತುತ್ತಲೇ ಇರುತ್ತಾರೆ. ಅಲ್ಲಿ ಇದೆ ನಮ್ಮ ಮನೆ... ಇಲ್ಲಿ ಬಂದೆ ಸುಮ್ಮನೆ ಎಂದು ಹೋದ ಎಡೆಯಲ್ಲೆಲ್ಲಾ ಅವರು ಹೇಳಲಿಕ್ಕೂ ಸಾಕು. ಕೊನೆಗೂ ಪ್ರಕಾಶ್ ರೈ ಭೇಟಿ ಸಾಧ್ಯವಾಗಲೇ ಇಲ್ಲ. ಆದರೆ, ಚೆನ್ನೈ ಬಿಡುವ ಕೆಲ ದಿನಗಳ ಹಿಂದೆ "ಸೊಲ್ಲಾದದುಮ್ ಉಣ್ಮೈ" ಎಂಬ ತಮಿಳು ಪುಸ್ತಕ ಕಣ್ಣಿಗೆ ಬಿತ್ತು. ಆನಂದ ವಿಗಡನ್ ಎಂಬ ತಮಿಳು ವಾರ ಪತ್ರಿಕೆಗೆ ಅವರು ಹೇಳಿ ಬರೆಸಿದ ಲೇಖನಗಳ ಸಂಗ್ರಹ ಇದು. ಇದರ ಬರಹಗಳ ಶೈಲಿ ಆಡುಮಾತಿನ ಹಾಗೆ ಇದ್ದುದ್ದರಿಂದ ನನ್ನಂಥವನಿಗೆ ಓದುವುದು ಸುಲಭವಾಯಿತು.

ವ್ಯಕ್ತಿತ್ವ ನಿರ್ಮಾಣದಲ್ಲಿ ಗುರುಗಳ ಪಾತ್ರ ಅತ್ಯಂತ ಮಹತ್ವ ಎಂಬುದರಲ್ಲಿ ಸಂಶಯವಿಲ್ಲ. ಸಣ್ಣ ವಯಸ್ಸಿನಿಂದಲೇ ಮಕ್ಕಳನ್ನು ತಿದ್ದಿ ತೀಡಿ ಒಂದು ಸುಂದರ ಕಲಾಕೃತಿ ಹೊಮ್ಮುವಂತೆ ಅವರನ್ನು ಬೆಳೆಸುವುದು ಗುರುವೇ. ಈ ವಿಷಯದ ಬಗ್ಗೆ ಪ್ರಕಾಶ್ ರೈ ತಮ್ಮೊಂದು ಲೇಖನದಲ್ಲಿ ಮನದುಂಬಿ ಮಾತಾಡಿದ್ದಾರೆ. ತಮ್ಮ ಹಿಂದಿನ ಜೀವನದ ಸ್ಮರಣೆ ಮಾಡಿದ್ದಾರೆ. ದಿವಂಗತ ಲಂಕೇಶ್ ಬಗ್ಗೆ ಅವರ ಅನಿಸಿಕೆಗಳು ಮನಸಿಗೆ ನಾಟಿದವು. ಲಂಕೇಶ್ ಪತ್ರಿಕೆಯಲ್ಲಿ ಪ್ರಕಾಶ್ ರೈ ಕೆಲಕಾಲ ಇದ್ದುದ್ದರಿಂದ ಮತ್ತಷ್ಟು ಕುತೂಹಲ ಮೂಡಿಸಿತು. ಬೆಂಗಳೂರಿಗೆ ಬಂದ ಕೂಡಲೇ ಅನುವಾದ ಮಾಡಿ ಸಿದ್ಧಮಾಡಿಟ್ಟುಕೊಂಡೆ. ಟೀಚರ್ಸ್ ಡೇ ಸಮಯದಲ್ಲಿ ಇದನ್ನು ಪ್ರಕಟಿಸುವ ಇರಾದೆ ಇತ್ತು. ಆದರೆ ಆ ದಿನ ಬಂದದ್ದೂ ಗೊತ್ತಾಗಲಿಲ್ಲ, ಹೋದದ್ದೂ ಗೊತ್ತಾಗಲಿಲ್ಲ. ಆದರೂ ಲಂಕೇಶ್ ಬಗ್ಗೆ ಪ್ರಕಾಶ್ ರೈ ಅವರ ನೆನಹುಗಳು ಚಿರಸ್ಥಾಯಿಯಾಗೇ ಉಳಿಯಬಲ್ಲವಾದ್ದರಿಂದ ನನ್ನ ಜಡ ಹಿಡಿದ ಬ್ಲಾಗಿಗೆ ಚೈತನ್ಯ ನೀಡಲು ಈ ಲೇಖನ ಹಾಕಲು ನಿರ್ಧರಿಸಿದೆ... ಯಾರಾದರೂ ಇಲ್ಲಿಗೆ ಇಣುಕಿದ್ದರೆ ದಯವಿಟ್ಟು ಪೂರ್ತಿಯಾಗಿ ಓದಿ...

------

ಪ್ರಪಂಚದಲ್ಲಿ ಅರ್ಜುನರುಗಳೇ ಅಪೂರ್ವ! ಯೋಗ್ಯರಾದ ಒಬ್ಬ ಗುರು ಸಿಗಬಹುದು; ಅವರಿಗೆ ಕೈತುಂಬಾ ದಕ್ಷಿಣೆ ನೀಡಬಹುದು; ಬೇಕಾದ ವಿದ್ಯೆಯಷ್ಟನ್ನೇ ಕಲಿಯಬಹುದು. ಆದರೂ "ಗುರುವನ್ನೇ ಮೀರಿಸುವ ಶಿಷ್ಯ" ಎಂದು ಹೆಸರು ಗಳಿಸುವುದು ದೊಡ್ಡ ವಿಷಯವೇ. ಆ ರೀತಿಯವನು ಸಾವಿರಕ್ಕೊಬ್ಬ ಸಿಗುವುದೂ ಕಷ್ಟವೇ.

ಒಬ್ಬ ಗುರು ಹಲವು ರೀತಿಯ ಪರೀಕ್ಷೆಗಳನ್ನೊಡ್ಡಿ ಸಮರ್ಥನಾದ ಒಬ್ಬನನ್ನು ಆಯ್ಕೆಮಾಡಿ "ಇಂತಹವರೇ ನನ್ನ ಗುರು" ಎಂದು ಒಬ್ಬ ಶಿಷ್ಯ ತನ್ನ ಗುರುವನ್ನು ಹುಡುಕಿ ಹೇಳಿಕೊಳ್ಳುವುದು ನಿಜಕ್ಕೂ ತುಂಬಾ ದೊಡ್ಡ ಸಂಗತಿ.

ಏಕಲವ್ಯನಂತೆ ಮಾನಸಿಕವಾಗಿ ತನಗಾಗಿ ಗುರುವನ್ನು ಹುಡುಕಿಕೊಂಡು ಸ್ವಯಂ ಕಲಿತುಕೊಳ್ಳುವ ಶಿಷ್ಯನಿಗಿಂತ, ಅಂತಹ ಶಿಷ್ಯನಿಂದ ಸ್ವೀಕರಿಸಲ್ಪಟ್ಟ ಗುರುವಿಗೇ ಹೆಚ್ಚು ಶ್ರೇಯಸ್ಸು. ಏಕೆಂದರೆ, ಅದೇ ಅವರು ನಡೆಸಿದ ಜೀವನ! ಅರ್ಜುನನನ್ನು ಶಿಷ್ಯನನ್ನಾಗಿಸಿಕೊಂಡ ಗುರು ದ್ರೋಣ ತಮಗೆ ಗೊತ್ತಿರುವಷ್ಟನ್ನು ಮಾತ್ರ ಕಲಿಸಿಕೊಡಲು ಸಾಧ್ಯ. ಆದರೆ, ಏಕಲವ್ಯನಂತಹವರು ಎಲ್ಲಿಯೋ ದೂರದಲ್ಲಿದ್ದುಕೊಂಡು ತಾವು ಸ್ವೀಕರಿಸಿದ ಗುರುವಿನ ಜೀವನವನ್ನು ನೋಡಿಕೊಂಡೇ ಅಪಾರ ವಿಷಯ ಕಲಿಯುತ್ತಾರೆ.

ಏಕಲವ್ಯರುಗಳಿಗೆ ಯಾವುದನ್ನು ಯಾರೂ ಹೇಳಿಕೊಡುವುದಿಲ್ಲ. ಅವರವರೇ ಸ್ವತಃ ಎಲ್ಲವನ್ನೂ ಕಲಿಯುತ್ತಾರೆ. ಅವರಿಗೆ ಒಳ್ಳೆಯ "ರೋಲ್ ಮಾಡಲ್" ಸಿಕ್ಕಿದರೆ ಸಾಕು! ಗುರುವಿನ ಬಾಳಿಗೆ ಅರ್ಥ ಸಿಗುವುದು ಏಕಲವ್ಯರಂಥವರು ಇದ್ದಾಗ. ಇಂತಹ ವಿದ್ಯಾರ್ಥಿಯಿಂದ ಕಾಣಿಕೆಯಾಗಿ "ಹೆಬ್ಬೆರಳು" ಕೇಳುವ ಗುರುಗಳು ಎಷ್ಟು ದೊಡ್ಡ ಪಂಡಿತರಾದರೂ ಸಣ್ಣ ಮನುಷ್ಯರಾಗಿಬಿಡುತ್ತಾರೆ!

ಲಂಕೇಶ್... ನನ್ನ ಜೀವನದಲ್ಲಿ ನಾನು ಮರೆಯಲು ಸಾಧ್ಯವಿರದ ಒಬ್ಬ ಮನುಷ್ಯ. ನನ್ನ ಮಾನಸಿಕ ಗುರು. ಈಗ ಅವರು ಬದುಕಿಲ್ಲ. ತಮ್ಮ ಸಾಮರ್ಥ್ಯ, ಅರ್ಹತೆ, ಗುಣದಿಂದ ನನ್ನಂತಹ ಯುವ ಜನಾಂಗಕ್ಕೆ ಆದರ್ಶವಾಗಿ ಬದುಕಿದವರು. "ಜನರ ವಿಷಯದಲ್ಲಿ ಇಷ್ಟು ಬೇಜವಾಬ್ದಾರಿಯಿಂದ ನಡೆದುಕೊಳ್ಳುವ ನಿನ್ನನ್ನು ಹೇಗೆ ಮುಖ್ಯಮಂತ್ರಿಯಾಗಿ ಸ್ವೀಕರಿಸಲು ಸಾಧ್ಯ? ನಿಜ ಹೇಳಬೇಕೆಂದರೆ 'ನೀನು ಒಬ್ಬ ಮೂರ್ಖ' ಎಂದು ಮುಖ್ಯಮಂತ್ರಿಯ ಬಗ್ಗೆಯೇ ಬಹಿರಂಗವಾಗಿ ಬರೆಯುವ ಪತ್ರಿಕೆಯೊಂದರ ಸಂಸ್ಥಾಪಕರು (ಕನ್ನಡದಲ್ಲಿ ಇವತ್ತಿಗೂ ಪ್ರಕಟವಾಗುತ್ತಿರುವ ಪತ್ರಿಕೆ ಲಂಕೇಶ್). ತಮಿಳು ಜನರಿಗೆ ಅರ್ಥವಾಗುವ ರೀತಿಯಲ್ಲಿ ಹೇಳಬೇಕೆಂದರೆ, ಕನ್ನಡ ನಾಟಕ ಮತ್ತು ಪತ್ರಿಕೆಯ ಕ್ಷೇತ್ರಗಳಲ್ಲಿ ಅವರು ನಮಗೆ ಜಯಕಾಂತನ್‌ರಂತೆ.

ಅವರ ನಾಟಕಗಳಲ್ಲಿ ನಾನು ನಟಿಸಿದ್ದೇನೆ. ಅವರ ಪತ್ರಿಕೆಯಲ್ಲಿ ಪತ್ರಕರ್ತನಾಗಿ ದುಡಿದಿದ್ದೇನೆ. ಆಗ ಕಲಿತ ಹಲವು ವಿಷಯಗಳು ಈಗಲೂ ನನ್ನ ನೆರಳಿನಂತೆ ಜೊತೆಯಲ್ಲಿಯೇ ಬರುತ್ತವೆ... "ಇವತ್ತು ನೀನು ನಟಿಸಿದ್ದಕ್ಕೆ ನಟನೆ ಎಂದು ಕರೆಯುತ್ತಾರಾ? ಮನೆಗೆ ನಡೆದೇ ಹೋಗು! ಹಾಗಾದಾಗಲೇ ನಿನಗೆ ಬುದ್ಧಿ ಬರುತ್ತದೆ" ಎಂದು ಅವರು ಅರ್ಧ ದಾರಿಯಲ್ಲೇ ಕಾಲಿನಿಂದ ಕೆಳಗಿಳಿಸಿಬಿಡುತ್ತಿದ್ದರು. "ನನ್ನನ್ನು ಯಾವಾಗಲೂ ಬಯ್ಯುತ್ತಲೇ ಇರುತ್ತೀರಲ್ಲ ಯಾಕೆ?" ಎಂದು ಕೇಳಿದರೆ, "ಬಯ್ದು ಬಯ್ದು ಮಾಡಿದರೆ ಮಾತ್ರ ನಿನ್ನನ್ನು ತಿದ್ದಲು ಸಾಧ್ಯ. ಇಲ್ಲದಿದ್ದರೆ, ನಿನ್ನ ಅಹಂಕಾರ ನಿನಗೆ ಬಲ ನೀಡುವುದರ ಬದಲು ಅದೇ ನಿನ್ನನ್ನು ಬಲಹೀನನನ್ನಾಗಿ ಮಾಡಿಬಿಡುತ್ತದೆ" ಎಂದು ಹೇಳುತ್ತಾರೆ.

"ನೀನು ಯಾವುದನ್ನೂ ಕಲಿತುಕೊಳ್ಳುವ ಹಾಗೆ ತೋರುತ್ತಿಲ್ಲ! ಓಸಿಯಲ್ಲಿ ಗುಂಡು ಹೊಡೆಯಲೆಂದು ಹೀಗೆ ನನ್ನ ಜೊತೆ ತಿರುಗಾಡುತ್ತೀಯಾ ಅಲ್ಲವಾ?" ಎಂದು ಅವರು ನನ್ನನ್ನು ಅವಮಾನ ಮಾಡಿದಾಗ, ನಾನು ಮರುದಿನವೇ ನನ್ನ ಕಾಸಲ್ಲೇ ಬಾಟಲ್ ಕೊಂಡುಕೊಂಡು ಅವರ ಮುಂದೆ ಕುಡಿದಿದ್ದೇನೆ. "ಈ ಅಹಂಕಾರವೇ ನಿನಗೆ ಆಸ್ತಿ ಕಣೋ" ಎಂದು ಲಂಕೇಶ್ ಸಂತೋಷದಿಂದ ನಗುತ್ತಾರೆ.

"ಪತ್ರಕರ್ತನು ಯಾವಾಗಲೂ ಪ್ರತಿಪಕ್ಷದವೇ. ಎಂತಹ ಸಂದರ್ಭದಲ್ಲೂ ಅವನು ಆಡಳಿತ ಪಕ್ಷದ ಪರ ಆಗಲು ಸಾಧ್ಯವಿಲ್ಲ. ಅಂಥ ಜವಾಬ್ದಾರಿಯನ್ನು ನಿರ್ವಹಿಸಲು ಸಾಧ್ಯವಾದರೆ ಪತ್ರಿಕೆಯಲ್ಲಿ ಬರೆಯಲು ಬಾ" ಎಂದು ಪ್ರತಿಯೊಂದು ಸಂದರ್ಭದಲ್ಲೂ ಹೇಳುತ್ತಲೇ ಇರುತ್ತಾರೆ. "ಒಬ್ಬ ವರದಿಗಾರನಾದವನು ಅವನ ವಿಚಾರವನ್ನು ಬರೆಯಬೇಕು. ಇವತ್ತು ಸಂಪಾದಕರನ್ನು ತೃಪ್ತಿಪಡಿಸುವ ರೀತಿಯಲ್ಲಿ ಬರೆಯಲು ಮುಂದಾದನೆಂದರೆ ನಾಳೆ ಒಬ್ಬ ಎಂಎಲ್ಎಯನ್ನು ಸಂತೋಷಪಡಿಸಲು ಬರೆದಿದ್ದಾನೆ ಎಂದನಿಸುತ್ತದೆ. ಅವನವನ ಸ್ವಾತಂತ್ರ್ಯಕ್ಕೆ ಅಡ್ಡಿ ಬರದಂತೆ ಕೆಲಸ ಮಾಡಲು ಬಿಡಿ" ಎಂದು ಅವರು ನನಗಿಂತ ಸೀನಿಯರ್ ಆದ ಪತ್ರಕರ್ತರನ್ನು ಕರೆದುಹೇಳುತ್ತಾರೆ.

"ಜಯಿಸಿದವನನ್ನೇ ಮತ್ತೆ ಮತ್ತೆ ಇಟ್ಟುಕೊಂಡು ಮೆರೆಸುವುದು ಅನಾಗರಿಕ. ಅವಕಾಶ ಇಲ್ಲದೆ ತಹತಹಿಸುತ್ತಿರುವ ಹೊಸ ಪ್ರತಿಭೆಗಳನ್ನು ಹುಡುಕಿ ಅವರು ಬೆಳೆಯಲು ಬಿಡಬೇಕು. ಜಯಿಸಿದವನೊಬ್ಬನ ಕೃಪೆಯಲ್ಲಿ ನಾನೂ ಜಯಿಸಬಹುದೆಂದು ಒಬ್ಬ ಕಲಾವಿದ ಯಾವಾಗ ಯೋಚಿಸಲು ಆರಂಭಿಸುತ್ತಾನೋ ಆಗಲೇ ಅವನೊಳಗಿನ ಕಲೆಯು ಸಾಯಲು ಆರಂಭಿಸುತ್ತದೆ" ಎಂದು ಹೇಳುತ್ತಾರೆ.

"ಲಂಕೇಶ್‌ರಿಗೆ ಕಾಸು ಕೊಡುವ ಒಂದು ಪ್ರಯತ್ನ ನಡೆಸಿದರೂ ಅವರಿಗೆ ನಾವು ಖಾಯಂ ವೈರಿಗಳಾಗಿಬಿಡುತ್ತೇವೆ" ಎಂದು ಲಂಚ ಕೊಡಲು ಯೋಚಿಸುತ್ತಿರುವವರೂ ಕೂಡ ಭಯಪಟ್ಟು ಸುಮ್ಮನಾಗುತ್ತಿದ್ದರು. ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಬೆಂಕಿಯಂತೆ ಬಾಳಿದ ಪತ್ರಕರ್ತ ಬರಹಗಾರ!

ಲಂಕೇಶ್ ಬರೆದ ಒಂದು ನಾಟಕವನ್ನು ರಂಗದ ಮೇಲೆ ತರಲು ಒಂದು ದೊಡ್ಡ ನಾಟಕ ತಂಡ ಮುಂದೆ ಬಂದಿತ್ತು. ಆಗ ಲಂಕೇಶರು "ನನ್ನ ಕೃತಿಯನ್ನು ರಂಗಕ್ಕೆ ತರುವ ಅರ್ಹತೆ ನಿಮಗೆ ಇಲ್ಲ. ನಿಮ್ಮ ಶಕ್ತಿ ನನಗೆ ಲಾಭವೇನೋ ತರುತ್ತದೆ. ಆದರೆ, ಒಂದು ಚಿಕ್ಕ ತಂಡಕ್ಕೆ ನನ್ನ ಕೃತಿ ಕೈಸೇರಿದಾಗ ಅದು ಅವರಿಗೆ ಶಕ್ತಿಯಾಗಿರುತ್ತದೆ. ನನ್ನ ಸ್ಕ್ರಿಪ್ಟನ್ನು ರಂಗಕ್ಕೆ ಅಳವಡಿಸಲು ನಿಮ್ಮ ಅವಶ್ಯಕತೆ ಇಲ್ಲ" ಎಂದು ಅವರನ್ನು ವಾಪಸ್ಸು ಕಳುಹಿಸಿ, ಖ್ಯಾತವಲ್ಲದ ಒಂದು ತಂಡಕ್ಕೆ ಆ ಅವಕಾಶ ನೀಡುತ್ತಾರೆ. "ಒಳ್ಳೆಯ ಊಟ ಮಾಡುತ್ತೇನೆ. ಒಳ್ಳೆಯ ಬಟ್ಟೆ ತೊಡುತ್ತೇನೆ. ಒಳ್ಳೆಯ ಮನೆಯಲ್ಲಿ ವಾಸಿಸುತ್ತೇನೆ. ದಿನವೂ ಗುಂಡು ಹಾಕುತ್ತೇನೆ. ಮನಸ್ಸನ್ನಾವರಿಸಿದ ವಿಷಯವನ್ನು ಧೈರ್ಯವಾಗಿ, ನೇರವಾಗಿ ಬರೆಯುತ್ತೇನೆ. ಆ ರೀತಿ ಒರಟೊರಟಾಗಿ ಬಾಳಿದ್ದರಿಂದ ನನಗೆ ಎಂಥ ನಷ್ಟ ಬಂದಿತು?" ಎಂದು ಅವರು ತಮ್ಮ ಟೀಕಾಕಾರರನ್ನು ಕಂಡು ಮನಸು ಬಿಚ್ಚಿ ಕೇಳುತ್ತಾರೆ. "ಹೀಗೇ ಇರಬೇಕು" ಎಂದು ಅವರು ನಮಗೆ ಹೇಳುತ್ತಲೇ ಇಲ್ಲ. ಹೀಗೇ ಇರಬೇಕು ಎಂಬುದಕ್ಕೆ ಅವರೇ ಒಂದು "ರೋಲ್ ಮಾಡಲ್" ಆಗಿ ಬಾಳಿ ತೋರಿಸಿದ್ದಾರೆ.

ಲಂಕೇಶರನ್ನು ಮಾನಸಿಕವಾಗಿ ಸ್ವೀಕರಿಸಿದ ಎಷ್ಟೋ ಮಂದಿ ಏಕಲವ್ಯರು ಇದ್ದಾರೆ. ಅವರಲ್ಲಿ ನಾನೂ ಒಬ್ಬ ಏಕಲವ್ಯ!

ಈಗ ಇದೆಲ್ಲವನ್ನೂ ನಾನು ಏಕೆ ಹೇಳುತ್ತಿದ್ದೇನೆಂದು ಯೋಚಿಸುತ್ತಿರುವಿರಲ್ಲವೇ? ಈಗ ಪರೀಕ್ಷೆ ಸೀಸನ್. ನನ್ನ ಆತ್ಮೀಯನೊಬ್ಬನ ಪತ್ನಿ ಒಬ್ಬ ಟೀಚರ್. ಅವರ ಮನೆಗೆ ಹೋಗಿದ್ದೆ. ಮನೆಯಲ್ಲಿ ಆಕೆ ತನ್ನ ಮಗನಿಗೆ ಕೋಚಿಂಗ್ ನೀಡುತ್ತಿದ್ದರು. "ಇವತ್ತು ಸ್ಕೂಲ್ ಇಲ್ವಾ?" ಎಂದು ಕೇಳಿದೆ. "ಮೆಡಿಕಲ್ ಲೀವ್ ಹಾಕಿದ್ದೇನೆ. ಮಗನಿಗೆ ಪಾಠ ಹೇಳಿಕೊಡಬೇಕಾಗಿತ್ತು" ಎಂದರು. "ಅಂದ್ರೆ, ನಿಮ್ಮಲ್ಲಿ ಓದುತ್ತಿರುವ ಮಕ್ಕಳ ಗತಿ?" ಎಂದು ನಗುತ್ತಲೇ ಸೀರಿಯಸ್ಸಾಗಿ ಕೇಳಿದೆ. ಇದಕ್ಕೆ ಆಕೆ ನೀಡಿದ ಉತ್ತರ 'ಶಾಕ್' ನೀಡುವಂತಿತ್ತು... "ಅದಕ್ಕೇನ್ಮಾಡೋದು? ನಾನು ಮಾತ್ರನಾ ಹೀಗೆ ಲೀವ್ ಹಾಕೋದು?"

ನಮ್ಮ ನಾಡಿನ ಸಮಸ್ಯೆಗಳಲ್ಲಿ ಮುಖ್ಯವಾದ ಸಮಸ್ಯೆ ಇದೆಯೇ... ಸ್ವಾರ್ಥವಿಲ್ಲದ ರೋಲ್ ಮಾಡಲ್ ಟೀಚರುಗಳು ಅಗತ್ಯವಿದೆ. ಅದಕ್ಕೆ ಏನು ಮಾಡಬೇಕೋ ಗೊತ್ತಿಲ್ಲ.

Labels: ,

3 Comments:

Blogger Shiv said...

ಪ್ರಕಾಶ್ ರೈ ಒಬ್ಬ ಅದ್ಭುತ ಕಲಾವಿದ ಅನ್ನುವದರಲ್ಲಿ ಯಾವ ಸಂಶಯವಿರಲಿಲ್ಲ. ಅವರು ಲಂಕೇಶ್‍ರೊಂದಿಗೆ ಒಡನಾಟದಲ್ಲಿದ್ದವರು ಎನ್ನುವುದು ನಿಮ್ಮ ಲೇಖನ ಓದಿ ತಿಳಿಯಿತು.

ಅನುವಾದಕ್ಕೆ ಧನ್ಯವಾದಗಳು !

9:15 AM  
Blogger Sameer said...

ಸರ್, ನಾನು ಪತ್ರಿಕೋದ್ಯಮ ವಿದ್ಯಾರ್ಥಿ. ಹುಬ್ಬಳ್ಳಿಯ IBMR ಕಾಲೇಜಿನಲ್ಲಿ ಓದುತ್ತಿದ್ದೇನೆ. ನಾವು ವಿದ್ಯಾರ್ಥಿಗಳು ಕೈಬರಹ ಪತ್ರಿಕೆಯೊಂದನ್ನ ಹೊರತರ್ತಿದಿವಿ. ಅದರಲ್ಲಿ ಕನ್ನಡದ ಬ್ಲಾಗುಗಳನ್ನ ಪರಿಚಯಿಸುತ್ತಿದ್ದೇವೆ.ತಮ್ಮ ಬ್ಲಾಗ್ ಓದಿದೆ. ಖುಷಿಯಾಯ್ತು. ತಮ್ಮ ಬ್ಲಾಗನ್ನ ಈ ಸಂಚಿಕೆಯಲ್ಲಿ ಪರಿಚಯಿಸಬೇಕೆಂದುಕೊಂಡಿದ್ದೇವೆ. ಈ ಕುರಿತಾಗಿ ತಮ್ಮಲ್ಲಿ ಮಾತನಾಡುವುದಿದೆ. ಸರ್ ನನ್ನ ಮೇಲ್ ID sameer707@gmail.com .

ತಮ್ಮ ಮೊಬೈಲ್ ನಂಬರ್ ಸಿಗಬಹುದಾ?

ಉತ್ತರಕ್ಕಾಗಿ ಕಾಯುತ್ತಿರುವೆ.

ಸಮೀರ್ ಸೇನ್ ಹವಾಲ್ದಾರ್

2:20 PM  
Blogger Satish said...

Sarathy,

yaake bareeta illa?
I am back on antaranga… take a look!

7:35 AM  

Post a Comment

<< Home