Saturday, June 10, 2006

ಮರಳಿ ಮಣ್ಣಿಗೆ

ಹಳ್ಳಿಯಲ್ಲಿ ಬೇವಿನ ಕಡ್ಡಿಯಿಂದ ಹಲ್ಲುಜ್ಜುತ್ತಿದ್ದ ವ್ಯಕ್ತಿ ಇಂದು ನಗರದಲ್ಲಿ ಅತ್ಯಾಧುನಿಕ ಟೂತ್ ಬ್ರಷ್, ಪೇಸ್ಟ್‌ನಿಂದ ಹಲ್ಲುಜ್ಜುತ್ತಿದ್ದಾನೆ. ನಗರದಲ್ಲಿ ಅತ್ಯಾಧುನಿಕ ಟೂತ್ ಬ್ರಷ್, ಪೇಸ್ಟ್ ನಿಂದ ಹಲ್ಲುಜ್ಜುತ್ತಿದ್ದ ವ್ಯಕ್ತಿ ಇಂದು ನಗರ ಹೊರಹೊಲಯದ ಗುಡಿಸಲಿನಲ್ಲಿ ಬೇವಿನ ಕಡ್ಡಿಯಿಂದ ಹಲ್ಲುಜ್ಜುತ್ತಿದ್ದಾನೆ.

ವಿಶಾಲವಾದ ಜಗತ್ತು ಸಂಕುಚಿತವಾಗುತ್ತಿದೆ. ಸಂಕುಚಿತವಾಗಿದ್ದ ಜಾಗತಿಕ ಅವಕಾಶಗಳು ವಿಶಾಲವಾಗುತ್ತಿವೆ. ಇದು ಜಾಗತೀಕರಣದ ಪ್ರತಿಫಲ. ಹಾಗೆಯೇ ಮೇಲೆ ಹೇಳಿದ ಬೇವಿನ ಕಡ್ಡಿ ಅಂಶವೂ ಜಾಗತೀಕರಣ ಅಥವಾ ಆಧುನೀಕರಣದ ಪ್ರತಿಫಲವೇ ಹೌದು.

ಮನುಷ್ಯ ಎಷ್ಟೇ ಮುಂದುವರೆದರೂ ಎಷ್ಟೇ ಬದಲಾದರೂ ಅವನ ರಕ್ತ, ಮಾಂಸ ಎಂದಿಗೂ ಬದಲಾಗುವುದಿಲ್ಲ. ಹಾಗೆಯೇ ಮನುಷ್ಯನಿಗೆ ಸುಖ, ಸಂತೋಷ, ಮನರಂಜನೆ ಕೂಡ ಮೂಲಭೂತ ಅಂಶಗಳು. ಹಿಂದಿನ ಕಾಲದಲ್ಲಿ ಮನರಂಜನೆಗಾಗಿ ಹಾಡು ನೃತ್ಯಗಳು ಇದ್ದವು. ಭರತನಾಟ್ಯವಿತ್ತು, ಜಾನಪದ ನೃತ್ಯಗಳಿದ್ದವು, ಯಕ್ಷಗಾನ, ಕೋಲಾಟ, ದೊಡ್ಡಾಟ ಇದ್ದವು ಈಗಲೂ ಇವೆ. ಆದರೆ ಈಗ ಸಿನೆಮಾ ಸಂಗೀತವಿದೆ, ಪಾಪ್ ರಾಕು ಎಂದು ಪಾಶ್ಚಾತ್ಯ ಸಂಗೀತಗಳಿವೆ. ಈ ಸಂಗೀತಗಳು ಒದಗಿಸುತ್ತಿರುವ ಮನರಂಜನೆಯನ್ನೇ ಹಿಂದಿನ ಕಾಲದ ಸಂಗೀತಗಳು ಒದಗಿಸುತ್ತಿದ್ದವು. ರಾಕ್ ಆಡಿಗೆ ತಲೆ ಹೊಯ್ದಾಡುವ ಮಂದಿಯಂತೆ ಹಿಂದುಸ್ತಾನಿ ಸಂಗೀತಕ್ಕೂ ಜನ ತಲೆ ಆಡಿಸುತ್ತಾರೆ. ಮನರಂಜನೆ ಎಂಬುದು ಮಾನಸಿಕ ದೃಷ್ಟಿಕೋನದ ಮೇಲೆ ಹೋಗುವುದರಿಂದ ಆಧುನಿಕ ಸಂಗೀತ, ಪುರಾತನ ಸಂಗೀತಗಳ ಮನರಂಜನಾ ಉದ್ದೇಶದಲ್ಲಿ ಯಾವುದೇ ವ್ಯತ್ಯಾಸವಿಲ್ಲ.

ಹಾಗೆಯೇ ಮನುಷ್ಯನ ಸುಖ ಸಂತೋಷಗಳೂ ಕೂಡ ಮಾನಸಿಕ ದೃಷ್ಟಿಕೋನದ ಮೇಲೆ ಅವಲಂಬಿತವಾಗಿದೆ. ದಿನಕ್ಕೆ ಐವತ್ತು ರೂಪಾಯಿ ದಿನಗೂಲಿ ಸಂಪಾದಿಸುವ ಕೂಲಿಗೆ ಇರುವಷ್ಟೇ ಕಷ್ಟಕಾರ್ಪಣ್ಯಗಳು ಸಾವಿರ ರೂಪಾಯಿ ಸಂಪಾದಿಸುವ ಅಧಿಕಾರಿಯಲ್ಲೂ ಇರುತ್ತವೆ. ಇಲ್ಲಿ ಸುಖ ದುಃಖಗಳು ಇಬ್ಬರಲ್ಲೂ ಬೇರೆ ಬೇರೆಯವೇ ಆದರೂ ಮೂಲಭೂತ ಅಂಶಗಳು ಒಂದೇ. ಸೈಕಲ್ ಹೊಂದಿರುವ ಬಡವನೊಬ್ಬ ತನಗೆ ಒಂದು ಮೊಪೆಡ್ ಇಲ್ಲವೆಂದು ವ್ಯಥೆ ಅನುಭವಿಸುತ್ತಿರುತ್ತಾನೆ. ಕಾರ್ ಹೊಂದಿರುವ ಆ ಅಧಿಕಾರಿ ತನಗೆ ಸ್ವಂತ ಹೆಲಿಕಾಪ್ಟರ್ ಹೊಂದುವುದಕ್ಕಾಗುತ್ತಿಲ್ಲವಲ್ಲ ಎಂದು ಚಿಂತೆಪಡುತ್ತಿರುತ್ತಾನೆ. ಇಬ್ಬರ ಸುಖ ದುಃಖಗಳ ಪರಿಣಾಮದಲ್ಲಿ ಯಾವುದೇ ವ್ಯತ್ಯಾಸವಿಲ್ಲ.

ಈ ವಿಚಾರ ಮನಸಿನಲ್ಲಿ ಮಿಂಚಿ ಮರೆಯಾದದ್ದು ನಾಗೇಶ್ ಹೆಗಡೆ ಅವರು ಕನ್ನಡಪ್ರಭದಲ್ಲಿ ಬರೆದ "ಬಡತನದ ಆಧುನೀಕರಣ" ಲೇಖನ ಓದಿನ ಓದಿದ ಮೇಲೆ.

12 Comments:

Blogger Satish said...

ಸಾರಥಿಗಳೇ,

"ಮನುಷ್ಯ ಎಷ್ಟೇ ಮುಂದುವರೆದರೂ ಎಷ್ಟೇ ಬದಲಾದರೂ ಅವನ ರಕ್ತ, ಮಾಂಸ ಎಂದಿಗೂ ಬದಲಾಗುವುದಿಲ್ಲ."

ಮೇಲಿನ ಈ ಸಾಲು ಬಹಳ ಇಷ್ಟವಾಯಿತು. ಮೊನ್ನೆ ರೇಡಿಯೋದಲ್ಲಿ ೮೯ ವರ್ಷದ ಹೇಝಲ್ ಹ್ಯಾಲಿ ಎನ್ನುವ ಫ್ಲೋರಿಡಾದ ಶಿಕ್ಷಕಿಯೊಬ್ಬರು ತಮ್ಮ ೬೯ ವರ್ಷಗಳ ಸುಧೀರ್ಘ ವೃತ್ತಿ ಜೀವನದಿಂದ ನಿವೃತ್ತರಾದರೆಂದು ಕೇಳಿದ್ದೆ. ರೇಡಿಯೋ ಸಂದರ್ಶನದಲ್ಲಿ ಆಕೆ ಹೇಳಿದ್ದರು 'ಇಂದಿನ ಮಕ್ಕಳು ಹಿಂದಿನವರಿಗಿಂತ ಭಿನ್ನರೇನಲ್ಲ, ಆದ್ದರಿಂದಲೇ ನಾನೂರಕ್ಕೂ ಹೆಚ್ಚು ವರ್ಷಗಳ ಹಳೆಯದಾದ ಮೆಕ್‌ಬೆಥ್ ನಾಟಕ ಇಂದಿಗೂ ಪ್ರಸ್ತುತ, ಅದರಲ್ಲಿ ಇಂದಿನ ತರುಣರು ತಮ್ಮ ಪ್ರತಿಬಿಂಬಗಳನ್ನು ಕಂಡುಕೊಳ್ಳುತ್ತಾರೆ' ಎಂಬುವ ಅರ್ಥದಲ್ಲಿ.

ಏನಾದರೂ ಮಾಡಿ ಕನ್ನಡಪ್ರಭದ ಲಿಂಕ್‌ಗಳನ್ನು ಸರಿ ಪಡಿಸಲೇ ಬೇಕು ಎಂದು ಹಠ ತೊಟ್ಟವರಲ್ಲಿ ನಾನೂ ಒಬ್ಬ. ಮೊನ್ನೆ "ಸಂಜಯ"ರು ಸಲಹೆ ನೀಡಿದ ಹಾಗೆ ಅಲ್ಲಿನ ಲಿಂಕನ್ನು "Send this page to your friend" ಎಂದು ನಾನೇ ಕಳಿಸಿಕೊಂಡು ನೋಡಿದೆ, ಆದರೂ ಅದೂ ಒಂದೆರಡು ದಿನಗಳ ನಂತರ ಕೆಲಸ ಮಾಡಲಿಲ್ಲ!

ಹೀಗೇ ಬರೆಯುತ್ತಿರಿ.
(http://www.miami.com/mld/miamiherald/living/education/14587725.htm)

6:30 AM  
Blogger bhadra said...

ಯಾಕೋ ನೀವು ಕೊಟ್ಟ ಲಿಂಕ್ ತೆರೆಯುತ್ತಿಲ್ಲ. ನೀವು ಬರೆದಿರುವುದು ಸಮಾಜದ ಇಂದಿನ ಪರಿಸ್ಥಿತಿಗೆ ಕನ್ನಡಿ ಹಿಡಿದಂತಿದೆ. ನಿನ್ನೆಯವರೆವಿಗೆ ನಾಟಿ ಆಹಾರ ತಿನ್ನುತ್ತಿದ್ದ ನಾವುಗಳು ಇಂದು ಹೈಬ್ರೀಡ್ ಆಹಾರವನ್ನು ಸೇವಿಸುತ್ತಿದ್ದೇವೆ. ಕ್ವಾಂಟಿಟಿ ಜಾಸ್ತಿ ಮಾಡುವ ದೃಷ್ಟಿಯಲ್ಲಿ ಕ್ವಾಲಿಟಿಯನ್ನು ಕಳೆದುಕೊಳ್ಳುತ್ತಿದ್ದೇವೆ. ಈಗ ಬೇವಿನಕಡ್ಡಿ ಸಿಗುವುದು ದುಸ್ತರವಾಗಿದೆ. ಪೇಸ್ಟಿನಲ್ಲಿ ಹಲ್ಲುಜ್ಜಿದರೂ ಹುಳುಕಾಗುವುದನ್ನು ತಡೆಯಲಾಗದು.

ಸಮಾಜದ ಕಣ್ತೆರೆಸುವ ಇಂತಹ ಲೇಖನಗಳನ್ನೂ ಇನ್ನೂ ಹೆಚ್ಚಾಗಿ ಬರೆಯಿರಿ.

10:13 PM  
Blogger Shiv said...

ಸಾರಥೀಗಳೇ,
ನೀವು ಹೇಳಿದ್ದು ನಿಜ..
ಆವಾಗ ನಮ್ಮ ಜಾನಪದ ನೃತ್ಯಗಳಿದ್ದವು,ಯಕ್ಷಗಾನ ವಿತ್ತು,ಕೋಲಾಟ ವಿತ್ತು.ಈಗ ಸಿನಿಮಾವಿದೆ,ಪಾಪ್ ಇದೆ,ರಾಕ್ ಇದೆ...ಆದರೆ ಈಗೀನವುಗಳಲ್ಲಿ ನಮ್ಮ ನೆಲದ ಸೊಗಡು ಎಲ್ಲಿದೆ ?

ಚಿಂತನೆ ಮಾಡುವಂತಹ ಲೇಖನ..

1:26 AM  
Blogger Anveshi said...

ಪಾಪು ರಾಕು ಸಾಕು
ಇನ್ನೂ ಏನೋ ಬೇಕು


ಅನ್ನೋ ಮನಸ್ಥಿತಿಯಿರುವಾಗ ಮಾಡುವುದಾದರೂ ಏನನ್ನು?
ಆದರೂ ಹಳೆಯದಕ್ಕೇ ಹೊಸಬರು ಮಾರು ಹೋಗುತ್ತಿದ್ದಾರೆ ಅನ್ನುವುದಕ್ಕೆ ಇಲ್ಲಿರುವ ಸುದ್ದಿಯೊಂದೇ ಉದಾಹರಣೆ. ಸಾಕಲ್ವ?

1:32 PM  
Blogger v.v. said...

ಸಾರಥಿಯವರೇ,

ಸೂಕ್ತವಾದ ಮಾತುಗಳನ್ನೇ ಬರೆದಿದ್ದೀರಿ. ಆದರೆ, ಇಂದಿನ ಯುಗದಲ್ಲಿ ಕೃತಕ "ರಕ್ತ", "ಮಾಂಸ" ತಯಾರಾಗುವ ದಿನಗಳು ದೂರವಿಲ್ಲ. ಹಾಗಾದಾಗ, ಬೇರೆ, ಬೇರೆ ಗುಣ ಮಟ್ಟದ ರಕ್ತ, ಮಾಂಸಗಳು ಮಾರುಕಟ್ಟೆಯಲ್ಲಿ ಲಭ್ಯವಾಗುವುದು ಖಚಿತ. ಹಾಗಾದಾಗ, ಎಲ್ಲರ ರಕ್ತ-ಮಾಂಸಗಳೂ ಒಂದೇ ಎಂಬ ಇಂದಿನ ಸತ್ಯ ನಿಜವಾಗದಿರಬಹುದು ಎಂಬುದು ಆತಂಕದ ವಿಷಯ.

ಅಂತರಂಗಿಗಳೇ, ಕನ್ನಡ ಪ್ರಭ ಲಿಂಕ್ ಒದಗಿಸುವ ವಿಷಯ ನನಗೆ ತಿಳಿಸಿದವರು punಡಿತ ಮಹಾಶಯರಾದ ಶ್ರೀವತ್ಸ ಜೋಷಿಯವರು. ಅವರು ಹೇಳಿಕೊಟ್ಟ ವಿಧಾನದಲ್ಲಿ ನಾನು ಮಾಡಿದ ಲಿಂಕ್‍ಗಳು ಇನ್ನೂ ಕೆಲಸ ಮಾಡುತ್ತಲೇ ಇವೆ.

ವಂದನೆಗಳು

8:28 PM  
Blogger Vishwanath said...

ಸಾರಥಿಯವರೇ,

ಸಮಕಾಲೀನ "ಟೆನ್ಷನ್" ಯುಗಕ್ಕೆ ಸರಿಯಾದ ಬರಹ.

ಪ್ರತಿಯೊಬ್ಬರಿಗೂ ಅವರವರ ಲೆವಲ್ಲಿನಲ್ಲಿ ಅವರವರದೇ ಆದ ಚಿಂತೆಯಿರುತ್ತದೆ. ಇದಕ್ಕೆ ಮುಕ್ತಿ ಇಲ್ಲ. ಚಿತೆಗೆ ಹೋಗುವವರೆಗೂ ಚಿಂತೆಗೆ ಕೊನೆ ಇಲ್ಲ. ಇದು ಕಂತೆ ಕಂತೆ. ಇರುವುದೆಲ್ಲವ ಬಿಟ್ಟು ಇರದುದರ ಕಡೆಗೆ ತುಡಿಯುವುದೇ ಇದಕ್ಕೆ ಕಾರಣ. ಇದರಿಂದ ಹೊರಬಂದರೆ ಮಾತ್ರ ನಮಗೆಲ್ಲ ಚಿಂತೆಯಿಂದ ಮುಕ್ತಿ ಎಂದುಕೊಂಡಿದ್ದೇನೆ.

2:18 PM  
Anonymous Anonymous said...

ಕನ್ನಡಪ್ರಭ ಅಂತರ್ಜಾಲ ಆವೃತ್ತಿಯ ಪುಟಗಳ ಕುಣಿಕೆ (link)ಗಳನ್ನು ಬಹುಕಾಲಬಾಳುವಂತೆ 'ಆಯುಷ್ಮಾನ್ ಭವ...' ಎಂದು ಟಿ.ವಿ.ಮಹಾಭಾರತದ ಭೀಷ್ಮಪಿತಾಮಹನಿಂದ ಹೇಳಿಸಬೇಕು. ಅದು ಸುಲಭವೇ ಇದೆ.

'ವರ್ಜಿನ್'ಅಲ್ ಯು.ಆರ್.ಎಲ್ ಹೀಗಿರುತ್ತದೆ:
http://www.kannadaprabha.com/NewsItems.asp?ID=KPE20060609103434&Title=Editorial+Page&lTitle=%D1%DAM%AE%DB%A5%DAP%DE%BE%DA%DF&Topic=0&Dist=0

ಇದು 'ಬಡತನದ ಅಧುನೀಕರಣ' ಲೇಖನ ಪ್ರಕಟವಾದ ದಿನ ಅದಕ್ಕಿದ್ದ ಯುಆರೆಲ್ಲು. ಅದನ್ನು ಹಾಗೆಯೇ ಬಳಸಿದರೆ ಮಾರನೆದಿನಕ್ಕೆ ಅದು ಹಳಸಿಹೋಗುತ್ತದೆ. (ಹಾಗಾಗಿಯೇ ಸಾರಥಿಯವರ ಬ್ಲಾಗ್‍ನಲ್ಲಿ ಆ ಲಿಂಕನ್ನು ನೀವು ಕ್ಲಿಕ್ಕಿಸಿದರೆ ಅದು ಅಬ್ರಹಾಂ ಲಿಂಕನ್ನು ಆಗಿರುತ್ತದೆ (=ಸತ್ತುಹೋಗಿರುತ್ತದೆ). ಭೀಷ್ಮನ ಆಶೀರ್ವಾದ ಹೇಗಿರಬೇಕೆಂದರೆ, ಆ ಲಿಂಕ್‍ನ ಸಮಗ್ರ ಅಕ್ಷರಸಮೂಹದಿಂದ Items ಪದವನ್ನು ಮತ್ತು &Title=... ಭಾಗವನ್ನು ಕತ್ತರಿಸಿ ಬಿಸಾಡಬೇಕು. ಮೇಲಿನ ಉದಾಹರಣೆಯ ಲಿಂಕ್‍ಗೆ ಈರೀತಿ ಕತ್ತರಿಪ್ರಯೋಗ ಮಾಡಿದಾಗ
http://www.kannadaprabha.com/News.asp?ID=KPE20060609103434

ಎಂಬ ತಾಜಾ ಜಗಮಗಿಸುವ ಹೊಸ ಹೊಳಪಿನ ಲಿಂಕ್ ಉಗಮಿಸುತ್ತದೆ. ಅದು ನೋಡಿ, ಬಹಳ ಕಾಲ ಬಾಳಿಕೆ ಬರುತ್ತದೆ!

8:08 AM  
Blogger Shiv said...

ಸಾರಥೀ ಅವರೇ,
ತುಂಬಾ ದಿನ ಆಯ್ತು ನಿಮ್ಮ ಲೇಖನ ಬಂದಿಲ್ಲ??

9:37 AM  
Blogger Satish said...

'ಮರಳಿ ಬ್ಲಾಗಿಗೆ' ಯಾವಾಗ ಬರುತ್ತೀರಿ, ತುಂಬಾ ದಿನಗಳಾದವಲ್ಲ!

7:22 AM  
Blogger ಜಯಂತ ಬಾಬು said...

tumba chennagide ..ella lekhana odoke aagilla matte bartini..

12:57 PM  
Anonymous Anonymous said...

ಮಾನ್ಯ ವಿಜಯ ಸಾರಥಿ ಅವರೇ,
ಕನ್ನಡದ ಪ್ರಮುಖ ಪತ್ರಿಕೆ ಸಂಯುಕ್ತ ಕರ್ನಾಟಕವನ್ನೂ ತಮ್ಮ ಪಟ್ಟಿಯಲ್ಲಿ ಸೇರಿಸಿ. http://www.samyukthakarnataka.com

3:02 PM  
Anonymous Anonymous said...

ondhu uttama lekhana..

mattoMdu vishaya: ee vishayavannoo oLagoMdu, Kannada-Kannadiga-Karnataka da beLavanigeya bagge Banavasi Balagada hosa blog nalli charche naDeyuttide. adannu " http://enguru.blogspot.com" nalli noDabahudu

6:15 PM  

Post a Comment

<< Home