ನರ"ಮೇಧಾ" ಬಚಾವೋ
ರಾಜ್‌ಕುಮಾರ್ ಅವರ ಸಚ್ಚರಿತ ಪುಟದ ಅಂತ್ಯದಲ್ಲಿ ನರಮೇಧದ ಮೂಲಕ ಸಂಸ್ಕಾರಭರಿತ ಕನ್ನಡಿಗರು ವಿಕೃತಿ ಗೀಚುತ್ತಿದ್ದರೆ ಅತ್ತ ಗುಜರಾತಿನಲ್ಲಿ ನರ್ಮದಾ ಬಚಾವೋ ಆಂದೋಲನದ ಮೂಲಕ "ನೆಲೆ"ಗಳ್ಳರ ವಿರುದ್ಧ ಸೆಟೆದು ನಿಂತ ಮೇಧಾ ಪಾಟ್ಕರ್ ಅವರ ಹೋರಾಟವನ್ನು ವಿಕೃತಗೊಳಿಸುವ ಪ್ರಯತ್ನ ನಡೆಯುತ್ತಿದೆ.
ಕರ್ನಾಟಕ ಸುಪುತ್ರ, ಸದಾಚಾರಿ, ದಿವಂಗತ ಡಾ. ರಾಜ್‌ಕುಮಾರ್ ಅವರ ಆತ್ಮ ಶೂನ್ಯದಲ್ಲಿ ಲೀನಗೊಂಡ ನಂತರ ಅನೇಕ ಮುಗ್ಧ ಆತ್ಮಗಳನ್ನು ಬಲವಂತವಾಗಿ ಮುಕ್ತಗೊಳಿಸಲಾಯಿತು. ರಾಜ್‌ಕುಮಾರ್ ಅವರಿಗಾಗಿ ಆಶ್ರುತರ್ಪಣ ಸಲ್ಲಿಸಬೇಕಿದ್ದ ಆ ಆತ್ಮಗಳಿಗೆ ರಾಜಾತ್ಮವು ಮೌನವಾಗಿ ಆಶ್ರುತರ್ಪಣ ಸಲ್ಲಿಸಬೇಕಾದ ಪರಿಸ್ಥಿತಿ ಒದಗಿದ್ದು ವಿಪರ್ಯಾಸ.
ಸಾಂಸ್ಕೃತಿಕ ಶ್ರೀಮಂತಿಕೆ ಎಂಬ ಬಣ್ಣನೆಯೊಂದಿಗೆ ಮೈಬೆಳೆಸಿಕೊಂಡಿದ್ದ ಕನ್ನಡಿಗರು ಇಂದು ಪ್ರಪಂಚದ ದೃಷ್ಟಿಯಲ್ಲಿ ಕೇವಲಕ್ಕೆ ಕುಸಿದಿದ್ದಾರೆ. ಕೈವಾಡ, ಪಿತೂರಿ ಎಂಬಿತ್ಯಾದಿ ಕಾರಣಗಳು ಇಲ್ಲಿ ನಿರುಪಯುಕ್ತ. ಪಿತೂರಿ ನಡೆಸಿದ್ದು ಸತ್ಯವೆಂದುಕೊಂಡರೂ ಅದನ್ನು ರೂಪಿಸಿದವರು ಕನ್ನಡಿಗರೇ ಅಲ್ಲವೇ? ಇದರ ಬಗ್ಗೆ ಮತ್ತೊಂದು ಬಾರಿ ಚರ್ಚಿಸುತ್ತೇನೆ.
ಇದೀಗ ಹೊತ್ತಿ ಉರಿದುಹೋಗುತ್ತಿರುವುದು ನರ್ಮದಾ ನದಿ ನೀರಿನ ತೆಕ್ಕೆಯಲ್ಲೇ ಹತಾಶಗೊಂಡ ಮೇಧಾ ಅವರ ಕಿಚ್ಚು. ಆಕೆ ಅಕ್ಷರಶಃ ಆಧುನಿಕ ಗಾಂಧಿ. ಬಡವರ, ಅಸಹಾಯಕರ ಒಡಲಾಳದ ಉರಿ. ಬಡವರ ನಿಟ್ಟುಸಿರ ತಾಪದ ಮೇಲೆಯಷ್ಟೇ ಅಭಿವೃದ್ಧಿಯ ಜಪ ಮಾಡಲು ಹೊರಟ ಮನಸ್ಥಿತಿ ವಿರುದ್ಧ ಶಾಂತವಾಗಿಯೇ ಹೋರಾಟ ನಡೆಸುವ ಮೇಧಾ ಪಾಟ್ಕರ್ ಅವರ ಕೆಚ್ಚೆದೆಗೆ ಈ ಕಾಲದಲ್ಲಿ ಸಾಟಿಯಿಲ್ಲ.
ನರ್ಮದಾ ನದಿಗೆ ಅಣಿಕಟ್ಟು ನಿರ್ಮಿಸುವುದರಿಂದ ಹಸುರು ಘಟ್ಟದ ಜೀವಸಂಕುಲ, ಪ್ರಾಕೃತಿಕ ಸಂಪತ್ತಿಗೆ ಧಕ್ಕೆ ತಗುಲುತ್ತದೆ ಎಂದು ಯೋಜನೆ ಪ್ರಾರಂಭದ ಮುಂಚೆಯೇ ಮೇಧಾ ಅವರು ಎಚ್ಚರಿಕೆ ಇತ್ತಿದ್ದರು. ಅದ್ಯಾವುದನ್ನೂ ಕಿವಿಗೆ ಹಾಕಿಕೊಳ್ಳುವ ಗೊಡವೆಗೇ ಹೋಗದೆ ಯೋಜನೆಗೆ ಚಾಲನೆ ನೀಡಲಾಯಿತು. ಯೋಜನೆಯಿಂದ ಬಡವರ "ನೆಲೆ" ನೀರುಪಾಲಾಯಿತು. ಅವರ ನೆಲೆಗೆ ಸೂಕ್ತ ಪರ್ಯಾಯ ಒದಗಿಸುವ ಯೋಚನೆ ಆ ಯೋಜನೆ ನಿರ್ಮಾತೃಗಳಿಗೆ ಬರಲೇ ಇಲ್ಲ. ತಮ್ಮ ಹಣದ ಸೆಲೆ ಬಗ್ಗೆ ಚಿಂತಿತರಾಗುವ ಮಂದಿ ಬಡವರ ನೆಲೆ ಬಗ್ಗೆ ತಲೆಕೆಡಿಸಿಕೊಳ್ಳುವುದೆಂತು?
ನೆಲೆ ಕಳೆದುಕೊಂಡಿರುವ ಬಡವರಿಗೆ ಸೂಕ್ತ ವ್ಯವಸ್ಥೆಯನ್ನಾದರೂ ನೀಡಬೇಕೆಂದು ಮೇಧಾ ಪಾಟ್ಕರ್ ಅವರು ನಡೆಸುತ್ತಿರುವ ಹೋರಾಟ ತಪ್ಪೇನು? ಗಾಂಧಿ ಅವರ ಹಾಗೆಯೇ ಮೇಧಾ ಅವರೂ ಸಹ ಉಪವಾಸ ಸತ್ಯಾಗ್ರಹಗಳ ಮೂಲಕ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಅವರ ಈ ಕಾರ್ಯದಿಂದ ದೇಶದಲ್ಲಿ ಕೆಲ ಮಂದಿಗಾದರೂ ನ್ಯಾಯದ ಕಿಚ್ಚು ಹತ್ತೀತು ಎಂಬ ಭರವಸೆ ಇದೆ.
ಮೇಧಾ ಅವರ ಹೋರಾಟವನ್ನು ಹತ್ತಿಕ್ಕಲು ನರೇಂದ್ರ ಮೋದಿ ಮತ್ತಿತರ ಪಡೆ ಸನ್ನದ್ಧವಾಗಿ ಹೋರಾಡುತ್ತಿದೆ. ನರ"ಮೇಧ" ಆಗುವುದೇ ಅಥವಾ "ನರ" ಮೇಧಾ ಆಗುವುದೇ ಎಂಬುದನ್ನು ಕಾದುನೋಡಬೇಕಷ್ಟೇ...
5 Comments:
ಅಲ್ಲಾ ಸಾರಥಿಯವರೆ,
ನಮ್ಮ ಅಸತ್ಯ ಶೋಧನಾ ತಂಡದ ಪ್ರಕಾರ ಪಿತೂರಿ ಕೇಡಿ ಶ-ವಕುಮಾರ್ ಅವರದ್ದು ಎಂಬುದು ನಿಮಗೆ ತಿಳಿದಿಲ್ಲವೆ?
ಮೇಧಾ ಪಾಟ್ಕರ್ ವಿರುದ್ಧ ರಾಜಕೀಯ ಪಕ್ಷಗಳು ಯಾಕೆ ಟೊಂಕ ಕಟ್ಟಿ ನಿಂತಿವೆ ಎಂಬುದು ನೀವಂದಂತೆ ನೆಲೆಯ ಎದುರು ಹಣದ ಸೆಲೆಯ ಸೆಳೆತವೇ ಜಾಸ್ತಿಯಾದದ್ದು ಹೌದು.
ಪ್ರಿಯ ಸಾರಥಿ ಅವರೇ,
ನೆಲೆ ಕಳೆದುಕೊಂಡವರ, ನಿರ್ಗತಿಕರ ಬಗ್ಗೆ ಮೇಧಾ ಪಾಟ್ಕರ್ ಅವರ ಕಳಕಳಿ ಮೆಚ್ಚುವಂಥದ್ದೇ. ಆದರೆ ಪ್ರಸಕ್ತ ಬರಗಾಲ, ಎಲ್ಲೆಡೆ ನೀರಿನ ಹಾಹಾಕಾರ ಎದ್ದಿರುವ ಈ ದಿನಗಳಲ್ಲಿ ಅಣೆಕಟ್ಟೆಯ ಎತ್ತರ ಏರಿಸುವುದರಲ್ಲಿ ತಪ್ಪೇನಿಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಸುಪ್ರೀಂ ಕೋರ್ಟ್ ಈಚೆಗೆ ತನ್ನ ತೀರ್ಪಿನಲ್ಲಿ ಹೇಳಿದಂತೆ, ಪ್ರತಿಯೊಬ್ಬ ಸಂತ್ರಸ್ತನಿಗೂ ಪುನರ್ವಸತಿ ಕಲ್ಪಿಸುವ ಜವಾಬ್ದಾರಿ ಮೋದಿ ಸರಕಾರದ್ದು.
ಇನ್ನು ಹಿರಿಯ ಚೇತನ ಡಾ.ರಾಜ್ ಕುಮಾರ್ ಅಂತ್ಯಕ್ರಿಯೆ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಭುಗಿಲೆದ್ದ ಹಿಂಸಾಚಾರ ಕನ್ನಡ ಸಂಸ್ಕೃತಿಗೆ ಬಳಿದ ಕಳಂಕ.
ನರ್ಮದಾ ಆಂದೋಲನದ ವಿಷಯದಲ್ಲಿ ಒಂದು ಅನಿಸಿಕೆಯನ್ನು ರೂಪಿಸಿಕೊಳ್ಳುವುದರಲ್ಲಿ ಅಲ್ಲಿಯವರಲ್ಲದ ನಮಗೆ ಹಲವು ತೊಂದರೆಗಳಿವೆ. ಮೊದಲಾಗಿ, ನಾವು ಗುಜರಾಥಿನಂತಹ ಬರಪೀಡಿತ ಪ್ರದೇಶದ ನಗರಗಳ ನಿವಾಸಿಗಳೂ ಅಲ್ಲ ಅಥವ ಅಲ್ಲಿನ ಕೈಗಾರಿಕಾ ಸಮುಚ್ಛಯಗಳಲ್ಲಿ ಕೆಲಸ ಮಾಡುವ ಕಾರ್ಮಿಕರೂ ಅಲ್ಲ. ಇತ್ತಲಾಗಿ, ಮಧ್ಯಪ್ರದೇಶದ ಆದಿವಾಸಿಗಳೂ ಅಲ್ಲ, ಅವರ ಹಾಗೆ ಮನೆಮಠ ಕಳೆದುಕೊಂಡವರೂ ಅಲ್ಲ. ಮನೆ ಜಮೀನು ಕಳೆದುಕೊಂಡ ಜನರ ಬವಣೆ ಅನುಭವಿಸಿಯೇ ಅರಿಯಬೇಕು (ಚಾಮರಾಜನಗರದ ಆದಿವಾಸಿಗಳು, ಮಲೆನಾಡಿನ ಜಲಾವೃತ್ತ ತಾಲ್ಲೂಕುಗಳು)
ಆದ್ದರಿಂದ ದೇಶದ ಬೆಳವಣಿಗೆಯ ದೃಷ್ಟಿ ಅಥವ ಪ್ರಕೃತಿ ಸಂರಕ್ಷಣೆ ಇವೆರೆಡೂ ನಮಗೆ ದೂರದಿಂದ ಕಾಣುವಂತಹ ಎರಡು ನಿಲುವುಗಳೇ ಹೊರತು ವೈಯುಕ್ತಿಕವಾಗಿ ಏನನ್ನೂ ಕಳೆದುಕೊಳ್ಳದಿರುವ ಪರಿಸ್ಥಿತಿ.
"ಯಾರ ಜೀವನವನ್ನು ಕಡಿದು ಯಾರಿಗೆ ಕೊಡಬೇಕು" ಎಂಬ ಪ್ರಶ್ನೆಯ ಉತ್ತರ ಈ ಪರಿಸ್ಥಿತಿಯಲ್ಲಿ ನಾವುಗಳು ತಿಳುದುಕೊಂಡಿರುವುದಕ್ಕಿಂತ ಕಠಿಣವೇ. ಎರಡೂ ರಾಜ್ಯದ ಸರ್ಕಾರಗಳು ತಮ್ಮ ಜನತೆಯ ಬಗ್ಗೆಯೇ ಯೋಚಿಸುವುದರಿಂದ ಅವುಗಳಿಂದ ನ್ಯಾಯ ಒದಗಿ ಬರಲಾರದು.ಕೇಂದ್ರ ಸರ್ಕಾರ ಮತ್ತು ಸರ್ವೋಚ್ಛ ನ್ಯಾಯಾಲಯಗಳು ತಮ್ಮ ಧೋರಣೆಗಳನ್ನು ಬದಿಗೊತ್ತಿ ನಿರ್ಧರಿಸಬೇಕಾದ ಸಮಯ ಇದು. ಇಲ್ಲಿಯ ತನಕವಂತೂ ಈ ತರಹದ ನಡುವಳಿಕೆ ಕೇಂದ್ರ ಸರ್ಕಾರದಲ್ಲಂತೂ ಕಂಡುಬಂದಿಲ್ಲ. ದೇಶದ ಬೆಳವಣಿಗೆಯೇ ಪ್ರತಿಯೊಂದು ಪಕ್ಷದ "ಸರ್ವೋಚ್ಛ ಗುರಿ"ಯೆಂದು ಅವರವರೇ ಘೋಷಿಸಿಕೊಂಡ ಮೇಲೆ ಪ್ರಕೃತಿ, ಆದಿವಾಸಿಗಳನ್ನು ಕೇಳುವರೇ ಇಲ್ಲದಾಗಿದೆ.
ಇಲ್ಲಿ ಅವರಿಗೆ ಸಹಾಯ ಒದಗಿಸಿದರೆ ವೋಟು ಸಿಗುವುದಿಲ್ಲ. ಆದರೆ reservation ತಂದರೆ ಅತ್ತ ನಗರದವರೂ ಓಕೆ, ಇತ್ತ ಹರಿಜನ ಗಿರಿಜನರೂ ಬಾಯ್ಬಿಡುವಂತಿಲ್ಲ. ಇದನ್ನು ತರಲಿಕ್ಕೆ ಮಾತ್ರ ಸರ್ಕಾರ ತುದಿಗಾಲಿನಲ್ಲಿ ನಿಂತಿರುತ್ತದೆ.
ಹ್ವಾಯ್... ನಾನೂ ಒಂದು ಕಾಮೆಂಟ್ ಕೊಟ್ಟು ನೋಡಲೇ?
ಅಸತ್ಯಾನ್ವೇಷಿಗಳೇ, ಧನ್ಯವಾದಗಳು. ಕಾಮೆಂಟು ಛಾಪಿಸಿದ್ದಾದ ಮೇಲೆ ನೀವು ಕಾಮೆಂಟು ಕೊಡಲೆ ಎಂದೇಕೆ ಕೇಳುತ್ತೀದ್ದೀರಿ?
ವಿಶ್ವನಾಥರವರೇ, ನೀವು ಹೇಳಿದಂತೆ ನೀರಿನ ಅವಶ್ಯಕತೆ ಬಹಳ ಇದೆ. ಅದಕ್ಕಾಗಿ ದೊಡ್ಡ ಅಣೆಕಟ್ಟು ನಿರ್ಮಾಣವೊಂದೇ ಪರಿಹಾರವಲ್ಲ. ಈಗ ಅದು ಬೇರೆ ವಿಷಯ... ಜನರನ್ನು ನಿರ್ಗತಿಕರನ್ನಾಗಿ ಮಾಡಿ ಯೋಜನೆಯನ್ನು ರೂಪಿಸುವುದು ಎಷ್ಟು ಸರಿ?
ಶ್ಯಾಮ್, ನೀವು ಹೇಳಿದ್ದು ಮಾರ್ಮಿಕವಾಗಿದೆ. ಮೀಸಲಾತಿ ಜಪ ನಡೆಸಿದವರು ಏಕಾಏಕಿ ಹಿಂದುಳಿದವರ, ಬುಡಕಟ್ಟು ಜನಾಂಗದವರ ಜನನಾಯಕರೆಂದೆಸಿಕೊಳ್ಳುತ್ತಾರೆ. ಆದರೆ ನಿಜದಲ್ಲಿ, ಅವರು ಆ ಜನಾಂಗದವರ ಬಗ್ಗೆ ಕಿಂಚಿತ್ತೂ ಕಾಳಜಿ ಹೊಂದಿರುವುದಿಲ್ಲ.
Post a Comment
<< Home