Monday, April 10, 2006

ಲಾಟರಿ ಲಾಟರಿ... ನಿಷೇಧ ಸಧ್ಯಕ್ಕಿಲ್ಲಾರಿ...


"ಕಾನೂನಿನಡಿ ಅವಕಾಶವಿಲ್ಲದ ಕಾರಣ ಲಾಟರಿ ಸದ್ಯಕ್ಕೆ ನಿಷೇಧ ಸಾಧ್ಯವಿಲ್ಲ" ಎಂದು ಕರ್ನಾಟಕದ ಲಾಟರಿ ಸಚಿವ ರಾಮಚಂದ್ರಗೌಡ ತಿಳಿಸಿದ್ದಾರೆಂದು ವರದಿಯಾಗಿದೆ. ಅವರು ಲಾಟರಿ ನಿಷೇಧ "ಸದ್ಯಕ್ಕೆ ಸಾಧ್ಯವಿಲ್ಲ" ಎಂದು ಹೇಳಿದರೋ ಅಥವಾ "ಸಧ್ಯಕ್ಕೆ ಸಾಧ್ಯವಿಲ್ಲ" ಎಂದು ಹೇಳಿದರೋ ಎಂಬ ಅನುಮಾನ ಲಾಟರಿ ಜಾಕ್‌ಪಾಟ್‌ನಷ್ಟೇ ಅನುಮಾನಾಸ್ಪದವಾಗಿದೆ.

ಹಂತ ಹಂತವಾಗಿ ಲಾಟರಿ ನಿಷೇಧಿಸಲಾಗುವುದು ಎಂದು ಅವರು ಸ್ಪಷ್ಟಣೆ ಬೇರೆ ನೀಡಿದ್ದಾರೆ. ಈ ಮಾತನ್ನು ದಶಕಗಳಿಂದ ನಮ್ಮ ಸರ್ಕಾರಗಳು ಹಂತ ಹಂತವಾಗಿ ಹೇಳುತ್ತಲೇ ಬಂದಿವೆ. ಇದು ಹಂತ ಹಂತವಾಗಿ ಕಂತುಗಳಲ್ಲಿ ಮುಂದುವರಿಯುತ್ತಲೇ ಹೋಗುತ್ತದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಜಾತ್ಯತೀತ ರಾಷ್ಟ್ರದಲ್ಲಿ ತಾರತಮ್ಯಕ್ಕೆ ಜಾಗವಿಲ್ಲ. ಆದ್ದರಿಂದ ಕರ್ನಾಟಕದ ಲಾಟರಿಯೊಂದಿಗೆ ಹೊರ ರಾಜ್ಯದ ಲಾಟರಿಗಳು ಸರಿಸಮಾನವಾಗಿ ಸ್ಪರ್ಧಿಸಲು ಅವಕಾಶ ನೀಡಲಾಗುವುದು ಎಂದೂ ನಮ್ಮ ಲಾಟರ್ಯತೀತ ಸರ್ಕಾರ ನ್ಯಾಯಸಮ್ಮತ ನಿರ್ಣಯ ವ್ಯಕ್ತಪಡಿಸಿದೆ.

ಜಾತ್ಯತೀತ ಜನತಾದಳದೊಂದಿಗೆ ಕೈ ಜೋಡಿಸಿ (ಕೈ ಮುರಿದು?) ಕರ್ನಾಟಕದಲ್ಲಿ ಪ್ರಪ್ರಥಮ ಬಾರಿಗೆ ಅಧಿಕಾರದ ಜಾಕ್‌ಪಾಟ್ ಹೊಡೆದ ಬಿಜೆಪಿಗೆ ಲಾಟರಿ ಜಾಕ್‌ಪಾಟ್ ಬಗ್ಗೆ ಆಸೆ ಕಮರುವುದುಂಟೆ? ರಾಜ್ಯದಲ್ಲಿ ಲಾಟರಿಯನ್ನು ನಂಬಿ 46 ಸಾವಿರ ಕುಟುಂಬಗಳು ಜೀವನ ಸಾಗಿಸುತ್ತಿರುವುದರಿಂದ ಲಾಟರಿ ನಿಷೇಧ ಏಕಾಏಕಿ ಸಾಧ್ಯವಿಲ್ಲ ಎಂದು ರಾಮಚಂದ್ರಗೌಡರು ಸಮಜಾಯಿಷಿ ನೀಡಿದ್ದಾರೆ. ರಾಮ...ರಾಮ....!!? ರಾಮರಾಜ್ಯದಲ್ಲಿ ನಂಬಿದವರ ಕೈ ಬಿಡುವುದುಂಟೆ? ಲಾಟರಿ ನಂಬಿದ 46 ಸಾವಿರ ಕುಟುಂಬಗಳು ಬೀದಿಪಾಲಾಗುವುದನ್ನು ತಪ್ಪಿಸುವುದಕ್ಕಾಗಿ ಲಾಟರಿಯಲ್ಲೇ ಮುಳುಗಿಹೋದ ಲಕ್ಷಾಂತರ "ಬಡ"ಪಾಯಿ ಕುಟುಂಬಗಳನ್ನು ಬಲಿ ನೀಡುವುದು ತರವಲ್ಲವೆ?. ಇದು "ಬಡ"ತನ ನಿವಾರಣೆ ಆಂದೋಲನದ ಒಂದು ಮಹತ್ ಯೋಜನೆ ಎಂದರೆ ತಪ್ಪಾಗಲಾರದು ಎಂದು "ಅರ್ಧ"ಶಾಸ್ತ್ರ ಪಂಡಿತನೊಬ್ಬ ಕೂಗಾಕಿದಾಗ ತೆಪ್ಪಗಿರಲಾದೀತೆ?

ಲಾಟ್ರೀ ನನ್ನ ಮೊದಲ ಹೆಂಡ್ತಿ: ಲಾಟರಿ ಹೊಡೆಸಿಕೊಂಡು, ತತ್ಪರಿಣಾಮವಾಗಿ ಮದ್ಯದಾರಿ ಹಿಡಿದ ಲಾಟರಿ "ಎಕ್ಸ್" ಪರ್ಟ್ ಬಡಪಾಯಿಯೊಬ್ಬನನ್ನು ಲಾಟರಿ ವಿರುದ್ಧ ಬಂಡಾಯವೇಳಲು ಒಂದು ಬಾರಿ ಭಾರಿ ಪ್ರಯತ್ನವನ್ನೇ ನಡೆಸಿದ್ದೆ. ಅದಕ್ಕೆ ಬಂದ ಉತ್ತರ.... ಅಕಟಕಟಾ....

"ಲಾಟ್ರಿ ನನ್ ಮೊದುಲ್ನೇ ಹೆಂಡ್ತೀರೀ..(ಹೌದು ಇವನು ಸಪ್ತಪದಿ ತುಳಿಯುವ ಮುನ್ನ ಲಾಟರೀ ದಾಸನಾಗಿದ್ದ). ಒಂದಂಕಿ ಎರಡಂಕಿ ನನ್ ಜೀವ್ನಾ ಗುರು (ಜೈಲಿನಲ್ಲಿ ಕಂಬಿಗಳನ್ನು ಎಣಿಸುವ ಮೂಲಕ ಒಂದಂಕಿ ಎರಡಂಕಿಗಳನ್ನು ಇವನು ಕರತಲಾಮಲಕ ಮಾಡಿಕೊಂಡಿದ್ದ). ಹೆಂಡ್ತಿ ಕೆಟ್ಟೋಳಾದ್ರೂ ಬಿಡೋಕಾಯ್ತದಾ. ಹಂಗೆಯಾ ಲಾಟ್ರೀನೂವೇ. ಇವತ್ತು ಗೆಲ್ಲಿಲ್ಲಾ ಅಂದ್ರೇನು ಶಿವ ನಾಳೆ ಜಾಕ್ ಪಾಟ್ ಹೊಡ್ದೇ ಹೊಡೀತೈತೆ."

"ಅಲ್ಲಾ ಗುರುವೇ ನೀನು ಲಾಟರೀಲಿ ದುಡ್ಡು ಕಳ್ಕೊಂಡ್ರೇ ನಿನ್ನ ನಂಬಿದ ಹೆಂಡ್ತಿ ಮಕ್ಕಳ ಗತಿ ಏನು" ಎಂದು ಪುಸಲಾಯಿಸಿದ್ದಕ್ಕೆ ಆತ "ಬಿಡು ಶಿವ, ನೋವಾಯ್ತದೆ... ಅದು ಮರೆಯಕ್ಕಂತಾನೆ ಆ ಶಿವ ಹೆಂಡ ಇಟ್ಟವ್ನೇ..."


ಆಡು ಆಟ ಆಡು
ಆಡು ಆಡು ಆಡಿ ನೋಡು
ಹೇ ರಾಜ ಹೇ ರಾಣಿ
ಹೇ ಜಾಕಿ ಹೇ ಜೋಕರ್
ಎದುರಲ್ಲಿ ನಿಗಾ ಇಡು....

2 Comments:

Blogger Vishwanath said...

ಲಾಟರಿ ನಿಷೇಧದ ಬಗ್ಗೆ ರಾಜ್ಯ ಸರಕಾರದ ದ್ವಂದ್ವ ನಿಲುವು ನಿಜಕ್ಕೂ ಹಾಸ್ಯಾಸ್ಪದ. ನೆರೆಯ ತಮಿಳುನಾಡಿನಲ್ಲಿ ಆಗಿರುವುದು ನಮ್ಮ ರಾಜ್ಯದಲ್ಲೇಕೆ ಸಾಧ್ಯವಿಲ್ಲ. ಮನಸ್ಸಿದ್ದಲ್ಲಿ ಮಾರ್ಗವುಂಟು. ನಮ್ಮ ಕೃಷ್ಣ ಸರಕಾರ, ಛಾಪಾ ಕಾಗದಗಳನ್ನು ರಾಜ್ಯದಲ್ಲಿ ಏಕಾಏಕಿ ನಿಷೇಧಿಸಿದಾಗ ಲಕ್ಷಾಂತರ ಸ್ಟಾಂಪ್ ವೆಂಡರುಗಳು ಬೀದಿ ಪಾಲಾಗುತ್ತಾರೆ ಎಂಬ ಕನಿಷ್ಠ ಜ್ಞಾನ ನಮ್ಮ ಸರಕಾರಕ್ಕಿರಲಿಲ್ಲವೇ? ಕಳ್ಳನಿಗೊಂದು ಪಿಳ್ಳೆನೆವ ಎಂಬಂತಾಗಿದೆ ನಮ್ಮ ಸರಕಾರದ ಗತಿ.

6:35 PM  
Blogger Sarathy said...

ಮನಸ್ಸಿದ್ದರೆ ಮಾರ್ಗ ಎನ್ನುವುದು ನಿಜ. ಆದರೆ ನಮ್ಮ ಆಡಳಿತಗಾರರಿಗೆ ಹಣ ಅಧಿಕಾರದತ್ತ ಮನಸ್ಸಿದೆ. ಅವರ ಈ ಮನಸ್ಸು ದುರ್ಮಾರ್ಗಕ್ಕೆಡೆ ಮಾಡುತ್ತದೆ. ಇವರಿಗೆ ಧನಲಾಭವಿದ್ದರಷ್ಟೇ ಕಾರ್ಯನಿರತ...

5:48 PM  

Post a Comment

<< Home