Wednesday, April 12, 2006

ಕನ್ನಡದ ಕುಲಗೌರವ ಡಾ. ರಾಜ್


ಕನ್ನಡದ ಮೇರುನಟ, ಗಾನಕೋಗಿಲೆ ಡಾಃ ರಾಜ್‌ಕುಮಾರ್ ಅವರು ಇಂದು ನಮ್ಮನ್ನಗಲಿದ್ದಾರೆ. ಕನ್ನಡ ಚಿತ್ರರಂಗದ ಸಾರ್ವಭೌಮರಾಗಿ ಮೆರೆದ ಅವರ ನಿಧನದಿಂದ ಕಡೆಯಪಕ್ಷ ಕಣ್ಣು ತೇವಗೊಳ್ಳದಿರುವ ಕನ್ನಡಿಗರು ಬಹುಕಡಿಮೆ. ಬದುಕಿನಲ್ಲಿ ಶಾಂತಿಗಾಗಿ ತಹತಹಿಸುತ್ತಿದ್ದ ಈ ಮುತ್ತುವಿನ ಆತ್ಮಕ್ಕೆ ಶಾಂತಿ ನೀಡಲು ಆ ಪರಮಾತ್ಮನಲ್ಲಿ ನನ್ನ ನಿವೇದನೆ.

ವೃತ್ತಿಯಲ್ಲಿ, ವ್ಯಕ್ತಿತ್ವದಲ್ಲಿ ಅವರೊಂದು ಮಾದರಿ. ಹಿರಿಯರು ಕಿರಿಯರೆಂಬ ಭೇದವಿಲ್ಲದೆ ನಯ ವಿನಯ ನಡೆತೆ ತೋರುತ್ತಿದ್ದ ಅವರ ಬಗ್ಗೆ ಹೇಳುವ ಒಳ್ಳೆಯ ಮಾತುಗಳ್ಯಾವುವೂ ಅತಿಶಯೋಕ್ತಿ ಎನಿಸುವುದಿಲ್ಲ. ಜನರ ಹೊಗಳಿಕೆ ತೆಗಳಿಕೆಗಳಿಗೆ ಅವರೊಬ್ಬ ಮುಗ್ಧ ವೀಕ್ಷಕರಾಗಿದ್ದರು. ತಾವು ಮಾಡದ ಒಪ್ಪುಗಳಿಗೆ ಹೇಗೆ ಶ್ಲಾಘನೆಗಳನ್ನು ಪಡೆಯುತ್ತಿದ್ದ ಅವರು ಹಾಗೆಯೇ ತಾವು ಮಾಡದ ತಪ್ಪುಗಳಿಗೂ ಕಟು ಟೀಕೆಗೊಳಗಾಗುತ್ತಿದ್ದರು.


ಆಶ್ಚರ್ಯವೆಂದರೆ ಅವರ ಒಪ್ಪು ತಪ್ಪುಗಳು ಮಾಧ್ಯಮಗಳಲ್ಲಿ ಅಷ್ಟಾಗಿ ಪ್ರತಿಧ್ವನಿಸದೇ ಜನರ ಆಡುಮಾತುಗಳಲ್ಲಿ ದಂತಕತೆಗಳಾಗಿದ್ದವು. ಕೇವಲ ಒಂದು ದಶಕದ ಹಿಂದೆ ವೀರಕನ್ನಡಿಗರಾಗಿದ್ದ ಅವರು ವೀರಪ್ಪನ್‌ನಿಂದ ಅಪಹರಣಕ್ಕೊಳಗಾದ ಪ್ರಕರಣದ ನಂತರ ಜನಮಾನಸದಲ್ಲಿ ಅವರ ಪ್ರಭೆ ನಂದತೊಡಗಿತ್ತು. ಇದು ಸತ್ಯ. ಪುರುಷಸಿಂಹನೆಂದು ಪರಿಗಣಿತನಾಗಿದ್ದ ತಮ್ಮ ಮಾನಸ ನಾಯಕನು ಕಾಡುಗಳ್ಳನ ತೆಕ್ಕೆಯಲ್ಲಿ ನಲುಗಿಹೋದ ಸತ್ಯ ಅವರ ಅಭಿಮಾನಿಗಳಾಗಿದ್ದವರಿಗೆ ಪಥ್ಯವಾಗಲಿಲ್ಲ. ಇಂತಹ ಅಸಂಬದ್ಧ ಮಾನಸಿಕತೆ ಅವರನ್ನು ಘಾಸಿಗೊಳಿಸಿದ್ದೂ ಸತ್ಯ.

ರಾಜ್ ಮತ್ತವರ ಕುಟುಂಬದ ಬಗ್ಗೆ ಜನಸಾಮಾನ್ಯರಲ್ಲಿ ಹೊಗೆಯಾಡುತ್ತಿದ್ದ ಕೆಲ ಚರ್ಚಾಸ್ಪದ, ಸಂದೇಹಾಸ್ಪದ ಮತ್ತು ಅಸಂಬದ್ಧ ಅಭಿಪ್ರಾಯಗಳು ಈ ಕೆಳಗಿವೆ....

1. ರಾಜ್ ಕುಟುಂಬ ಕನ್ನಡ ಚಿತ್ರರಂಗದಿಂದ ಹಣದ ಕೊಳ್ಳೆಯನ್ನೇ ಹೊಡೆಯಿತು; ಅದಕ್ಕೆ ಪ್ರತಿಯಾಗಿ ಬಿಡಿಗಾಸೂ ಜನಸೇವೆ ಮಾಡಲಿಲ್ಲ.
2. ಕನ್ನಡ ಚಿತ್ರರಂಗದಲ್ಲಿ ತನ್ನ ಕುಟುಂಬ ಸದಸ್ಯರನ್ನು ಬಿಟ್ಟು ಬೇರೆ ಯಾರೂ ಬೆಳೆಯದಂತೆ ಹಿಡಿತ ಸಾಧಿಸಲಾಗಿತ್ತು.
3. ಕನ್ನಡದಲ್ಲಿ ಪಿ.ಬಿ. ಶ್ರೀನಿವಾಸ್ ಅವರ ಗಾಯನ ವೃತ್ತಿಯನ್ನು ಬದಿಗೊತ್ತಲಾಯಿತು.
4. ಬಡತನದಲ್ಲಿ ಬೇಯುತ್ತಿದ್ದರೂ ಅವರನ್ನು ನಂಬಿದ ಸಿನೆಮಾ ಕಲಾವಿದರು, ತಂತ್ರಜ್ಞರಿಗೆ ಅವರು ಏನೂ ನೆರವು ಒದಗಿಸಲಿಲ್ಲ;

ಇವತ್ತಷ್ಟೇ ಇಹಲೋಕದಿಂದ ಮುಕ್ತರಾದ ಡಾ. ರಾಜ್‌ಕುಮಾರ್ ಅವರ ಬಗ್ಗೆ ಟೀಕೆ ಟಿಪ್ಪಣಿಗಳ ಚರ್ಚೆ ನಡೆಸುವುದು ಅಸಂಬದ್ಧ ಎಂಬ ಅರಿವು ಇರುವುದರಿಂದ ಚರ್ಚೆಯನ್ನು ಇಲ್ಲಿಗೆ ನಿಲ್ಲಿಸುತ್ತೇನೆ. ಪ್ರಸ್ತುತ ನಮ್ಮ ಬಳಿ ಅವರಿಲ್ಲದಿರುವುದಕ್ಕಾಗಿ ಮನಸು ಶೋಕಿಸುತ್ತಿದೆ....

6 Comments:

Blogger Anveshi said...

ಹೌದು ಸಾರಥಿ,
ಡಾ.ರಾಜ್ ಅವರು ಬದುಕಿದ್ದಾಗ ಅವರ ಹೆಸರಿಗೆ ಕಳಂಕ ಅಂಟಿಕೊಂಡಿದ್ದು ಸತ್ಯ. ಇದಕ್ಕೆ ಕಾರಣಗಳನ್ನು ಪರಾಮರ್ಶಿಸದೆ ಅವರನ್ನೇ ದ್ವೇಷಿಸುವುದು ಸಲ್ಲ. ನೀವು ನಮೂದಿಸಿದಂತೆ, ರಾಜ್ ಬಗೆಗಿದ್ದ ಅಸಂಬದ್ಧ ಎನ್ನುವಂತಹ ಅಭಿಪ್ರಾಯಗಳು ವಾಸ್ತವವಾಗಿ ರಾಜ್ ಬಗೆಗಲ್ಲ. ಅವರ ಕುಟುಂಬದ ಬಗೆಗೆ ಎನ್ನುವುದನ್ನು ನಾವು ನಂಬಬಹುದು ತಾನೇ? ರಾಜ್ ನಿಜಕ್ಕೂ ದೇವತಾ ಮನುಷ್ಯ. ಅದರೆ ಅವರ ಅಭಿಮಾನಿಗಳು ಅಭಿಮಾನದ ಹೆಸರಲ್ಲಿ ದುಂಡಾವರ್ತನೆ ತೋರಿ ಅ'ರಾಜ'ಕತೆ ಸೃಷ್ಟಿಸುವುದು ಎಷ್ಟು ಸರಿ

2:25 PM  
Anonymous Anonymous said...

ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂದು ಹಾಡಿರುವ ಡಾ. ರಾಜ್ ಅವರು ಮತ್ತೆ ಕನ್ನಡ ನಾಡಿನಲ್ಲಿ ಜನಿಸಲಿ ಎಂದು ಆಶಿಸುತ್ತೇನೆ.

4:36 PM  
Blogger Sarathy said...

ಧನ್ಯವಾದಗಳು ಅನ್ವೇಷಿಗಳೇ. ನೀವು ಹೇಳಿದಂತೆ ರಾಜ್ ಕುಮಾರ್ ಬಗೆಗಿನ ಆರೋಪಗಳು ಹೆಚ್ಚಾಗಿ ಅವರ ಹೆಂಡತಿ, ಮಕ್ಕಳು ಮತ್ತು ಸಂಬಂಧಿಕರ ವಿರುದ್ಧವೇ ಇರುವುದು ನಿಜ. ಸೌಮ್ಯ ಸ್ವಭಾವದ ರಾಜ್ ಅವರಿಗೆ ಅಭಿಮಾನಿಗಳೆಂದು ಕರೆಸಿಕೊಳ್ಳುತ್ತಿದ್ದವರು ನಿಜ ಜೀವನದ ರೌಡಿಗಳಾಗಿರುವುದು ನಿಜಕ್ಕೂ ವಿಸ್ಮಯಕಾರಿ ಸಂಗತಿ.

4:53 PM  
Blogger Sarathy said...

ಹೌದು ಗಿರೀಶ್, ನಿಮ್ಮ ಹಾರೈಕೆಯಂತೆಯೇ ಕನ್ನಡಿಗರೆಲ್ಲರ ಆಶಯವೂ ಅದೇ. ನಿಷ್ಕಲ್ಮಶ ವ್ಯಕ್ತಿತ್ವದ ಅವರು ಕನ್ನಡದ ನಿಜಪ್ರತಿನಿಧಿಗಳು...

6:03 PM  
Blogger bhadra said...

ಪಾತ್ರಗಳಲ್ಲಿ ತಲ್ಲೀನರಾಗಿ ಉತ್ತಮ ನಟನೆಯಿಂದ ಡಾ|| ರಾಜ್ ಅವರು ಎಷ್ಟೋ ಕನ್ನಡಿಗರ (ಇತರೆ ಭಾಷಿಗರ ಕೂಡಾ) ಜೀವನ ಶೈಲಿಯನ್ನೇ ಬದಲಾಯಿಸಿದ್ದಾರೆ. ಇದಕ್ಕಿಂತ ಬೇರೆ ಇನ್ಯಾವ ಕೆಲಸ ಮಾಡಬೇಕಿತ್ತು. ಏನೇ ಮಾಡಿದರೂ ಜನಗಳು ತಪ್ಪು ಕಂಡುಹಿಡಿಯುವರು. ಅದು ಅವರ ರಕ್ತಗುಣ. ಇನ್ನೊಬ್ಬರ ಏಳಿಗೆಯನ್ನು ಸಹಿಸದ ಜನ ತಮ್ಮ ಮನದಲ್ಲಿರುವ ಕಹಿಯನ್ನು ಹೀಗೆ ಹೊರಹಾಕುತ್ತಾರೆ.

5:12 PM  
Blogger Sarathy said...

ತವಿಶ್ರೀಯವರೇ ನನ್ನ ಬ್ಲಾಗಿಗೆ ಭೇಟಿ ಇತ್ತಿದ್ದಕ್ಕೆ ಧನ್ಯವಾದಗಳು. ಓರ್ವ ಕಲಾವಿದರಾಗಿ, ಓರ್ವ ವ್ಯಕ್ತಿಯಾಗಿ ಅವರು ತೋರಿಸಿದ್ದ ಸಜ್ಜನಿಕೆಗಳು ನಮಗೆಲ್ಲರಿಗೂ ಆದರ್ಶ.

6:00 PM  

Post a Comment

<< Home