Thursday, April 27, 2006

ಬೇಡ ಬೇಡ ನಮಗೆ ಕನ್ನಡ ಬೇಡ

ಭಾರಿಸು ಕನ್ನಡ ಡಿಂಡಿಮವಾ
ಓ ಕರ್ನಾಟಕ ಹೃದಯ ಶಿವಾ


ಶಿವ ಶಿವಾ... ಈ ಡಂಗುರ ಕೇಳಿ ಕೇಳಿ ಮನಸು ಕಂಗಾಲಾಗಿದೆ. ಈ ಡಂಗುರ ಕೇಳುವ ಅಲ್ಪಸಂಖ್ಯಾತರಲ್ಲಿ ನಾನೂ ಒಬ್ಬನಿರುವುದರಿಂದ 'ಅಲ್ಪ'ಸಂಖ್ಯಾತ ಸಹಜ ಭೀತಿ ನನ್ನನ್ನಾವರಿಸುತ್ತದೆ. ಈ 'ವಿಷಾಲಯ' ಹೃದಯದಲ್ಲಿ ಕನ್ನಡಕ್ಕೆ ಸ್ಥಾನ ಕೊಟ್ಟರೆ ಅದಕ್ಕೆ ವಿಷಪ್ರಾಶನ ಮಾಡಿ ಕೊಲೆ ಮಾಡಿದಂತಾಗುತ್ತದೆ ಎಂಬ 'ಅಲ್ಪ' ಭೀತಿ ಎದುರಾಗಿ ಹೃದಯದಿಂದ ಕನ್ನಡವನ್ನು ಕಿತ್ತುಹಾಕಬೇಕೆಂದಿದ್ದೇನೆ. ನನ್ನ ಹೃದಯದಿಂದಷ್ಟೇ ಅಲ್ಲ ವಿಷಾನಿಲಯ ಕನ್ನಡಿಗರೆಲ್ಲರ ಹೃದಯಕ್ಕೆ 'ಕನ್ನ' ಹಾಕಿ ಕನ್ನಡವನ್ನು ಮುಕ್ತಗೊಳಿಸಬೇಕೆಂದಿದ್ದೇನೆ.

ಕನ್ನಡ ಡಿಂಡಿಮ ಕೇಳಿ ಕೇಳಿ ಕಿವಿ ಕಿವುಡಾಗಿ ಬೆಪ್ಪು 'ಬೆರಣಿ'ಗಣ್ಣು ತೇಲಿಸುತ್ತಿದ್ದಾಗ, 'ಆಂಗ್ಲ' ದಂಡ ಹಿಡಿದು 'ಸಾಫ್ಟ್' ಆಗಿ ಮೇಲೇರಿದ 'ಕನ್ನ'ಡ ಮಿತ್ರರು ನನ್ನ ಕಾಲರ್ ಹಿಡಿದೆಳೆದು ಪಿಂಡ ದಂಡ ಎಂದೆಲ್ಲಾ 'ಹಾರ್ಡ್' ಆಗಿ ಕೊರೆದು ತಲೆ ತೂತು ಮಾಡುವುದರಲ್ಲಿದ್ದರು. ಅಷ್ಟರಲ್ಲಿ 'ಎಚ್ಚರ'ಗೊಂಡೆ. ಸರಿ, ನಾನೂ ಮೇಲೇರಬೇಕು, ಆಂಜನೇಯನಂತೆ ಸೀಮೋಲಂಘನ ಮಾಡಬೇಕೆಂದು ನಿರ್ಧರಿಸಿ 'ಹಾರ್ಡ್' ಆಗಿ ಪ್ರಯತ್ನಿಸಿ ನೋಡಿದೆ. ಹೂಂ...ಹೂಂ... ಬಿಲ್ ಕುಲ ನಿನಗೆ ಸಾಧ್ಯವಿಲ್ಲ ಎಂದು ಕಪಾಳ ಮೋಕ್ಷದ ಏಟು ನೀಡಿ ಸೀಮೆ ಬಿಟ್ಟೇ ಓಡಿಸಿದರು. ಕೆನ್ನೆ ಊದಿಸಿಕೊಂಡ ಆಂಜನೇಯನಾದೆ.

ಕರ್ನಾಟಕದಲ್ಲಿ ಉಸಿರಾಡಲು ಕನ್ನಡ ದೇವತೆಗೇ ಕಷ್ಟವಾಗಿರುವಾಗ ಆಕೆಯ ಉಸಿರು ನಂಬಿ ಬದುಕುತ್ತಿರುವ ನನ್ನಂತಹ ಬಡಪಾಯಿ ಕತೆ ಏನಾಗಬೇಕು? ಬೇಡವೇ ಬೇಡ ಕನ್ನಡ ಎಂದು ಭಂಡ ಧೈರ್ಯ ಮಾಡಿ ಆಂಗ್ಲ ದೇವತೆಯ ಒಲಿಸಿಕೊಳ್ಳಲು ಇದ್ದಬದ್ದ ವ್ರತ ಮಾಡಲು ನಿರ್ಧರಿಸಿದೆ. ಮನಸಿನಲ್ಲಿ ಕನ್ನಡ ದೇವತೆಯನ್ನು ಇರಿಸಿಕೊಂಡು ನನ್ನ ಪೂಜಿಸುತ್ತಿರುವೆಯಾ ಎಂದು ಆ ಆಂಗ್ಲ ದೇವತೆ ಮತ್ಸರದಿಂದ ನನಗೆ ಶಾಪವಿತ್ತಳೋ ಏನೋ ನನ್ನ ವ್ರತವೆಲ್ಲಾ ವ್ಯರ್ಥವಾದವು.

ನನಗಂತೂ ಆ ದೇವತೆ ಒಲಿಯಲಿಲ್ಲ. ನನ್ನ ಕೆಳ ತಲೆಮಾರಿನವರು ಈ ರೀತಿಯ ಬಾಧೆ ಅನುಭವಿಸಬಾರದೆಂದು ದೃಢನಿಶ್ಚಯ ಮಾಡಿದ್ದೇನೆ. ಇಂದಿನ ಜಾಗತೀಕರಣದಲ್ಲಿ ಇಂಗ್ಲೀಷ್ ನಮಗೆ ಅನ್ನದಾತೆ. ಹಸಿದುಹೋಗಿರುವ ನಮಗೆ ಅನ್ನದಾತೆಯೇ ಮುಖ್ಯ. ಊಟಕ್ಕಿಲ್ಲದ ಉಪ್ಪಿನಕಾಯಿ ಇದ್ದರೆಷ್ಟು ಬಿಟ್ಟರೆಷ್ಟು.

ಮನೆಯಲ್ಲಿಯಾಗಲೀ ಅಥವಾ ಶಾಲೆಯಲ್ಲಿಯಾಗಲೀ ಇಂಗ್ಲೀಷ್ ಮಾತನಾಡುವಿಕೆಗೆ ಪ್ರೋತ್ಸಾಹವಿರಬೇಕು. ಇಲ್ಲದಿದ್ದರೆ ನಮಗೆ ಇಂಗ್ಲೀಷ್ ಸರಿಯಾಗಿ ಸಿದ್ಧಿಸದು. ಕೊಡಗಿನ ಎಷ್ಟೋ ಮನೆಗಳಲ್ಲಿ ಇಂಗ್ಲೀಷ್ ಇಂದು ಮನೆಮಾತಾಗಿರುವಂತೆಯೇ ಕರ್ನಾಟಕದ ಪ್ರತೀ ಮನೆಗಳಲ್ಲೂ (ಗ್ರಾಮಗಳೂ ಸೇರಿ) ಇಂಗ್ಲೀಷ್ ನೆಲೆಸಬೇಕು. 'ಹೊಟ್ಟೆಗೆ ಇಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವೇಕೆ?' ಎಂಬ ಸಾಕ್ಷಾತ್ಕಾರದಂತೆ ನಮ್ಮ ಹೊಟ್ಟೆಗೆ ಅನ್ನ ನೀಡುವ ಇಂಗ್ಲೀಷ್ ಅನ್ನು ಮಾತ್ರವೇ ಬಳಸೋಣ. ಸಾಧ್ಯವಾದರೆ, ಸಮಯವಿದ್ದರೆ, ವ್ಯವದಾನವಿದ್ದರೆ ಕನ್ನಡ ನೋಡೋಣ.

ಪ್ರಪಂಚದ ಹಲವಾರು ಭಾಷೆಗಳು ಈಗಾಗಲೇ ಜನರ ನಾಲಗೆಯಿಂದ ತಪ್ಪಿಸಿಕೊಂಡು ಮುಕ್ತವಾಗಿವೆ. ಆ ಮುಕ್ತವಾಹಿನಿಗೆ ಕನ್ನಡವನ್ನೂ ಸೇರಿಸಿ ಕೃತಾರ್ಥರಾಗೋಣ. ಬನ್ನಿ ಎಲ್ಲರೂ ಬನ್ನಿ ನನ್ನೊಂದಿಗೆ ಕೈಜೋಡಿಸಿ. ಕರ್ನಾಟಕದ(ಅಥವಾ ಭಾರತದ) ಪ್ರತೀ ವ್ಯಕಿಯ ಮನೆಮಾತು ಇಂಗ್ಲೀಷ್ ಆಗುವುದರತ್ತ ಆಂಗ್ಲಾಂದೋಲನ ನಡೆಸೋಣ,... ಕನ್ನಡವನ್ನು ಮುಕ್ತಗೊಳಿಸೋಣ....

7 Comments:

Blogger bhadra said...

ಬೆಂಗಳೂರಿನಲ್ಲಿ ಇದು ನಡೆಯೋಲ್ಲ. ಇಲ್ಲೇನಿದ್ದರೂ ತಮಿಳು, ತೆಲುಗು, ಹಿಂದಿ ಭಾಷೆಗಳ ಬಗ್ಗೆ ಆಂದೋಲನ ನಡೆಸಿ. ಇಲ್ಲದಿದ್ದರೆ ಪ್ರತಿರೋಧ ವ್ಯಕ್ತಪಡಿಸಲು ನನಗೆ ಅವಕಾಶ ಸಿಗುವುದಿಲ್ಲ.

ಯಾಕೋ ನನಗೆ ತಲೆ ತಿರುಗುತ್ತಿದೆ. ನಾನು ಪ್ರತಿರೋಧ ವ್ಯಕ್ತಪಡಿಸಬೇಕೋ ಅಥವಾ ಸಮರ್ಥಿಸಬೇಕೋ? ಸ್ವಲ್ಪ ವಿಶದೀಕರಿಸಿ.

4:26 PM  
Blogger Sarathy said...

ರೋದಿಸಲು ಕಣ್ಣೀರಿನ 'ಬರ'ವಿರುವಾಗ 'ಪ್ರತಿ'ರೋಧಕ್ಕೆ ಅವಕಾಶ ಉಂಟೆ...!!!

5:01 PM  
Blogger Satish said...

ಏನಾದರೂ ಮಾಡಿ, ಕನ್ನಡ ಬೇಡವೆಂದು ಕನ್ನಡದಲ್ಲಿಯೇ ಬರೆಯಿರಿ, ನಿಮ್ಮ ಆಂಗ್ಲಾಂದೋಲನಕ್ಕೆ ಜಯವಾಗಲಿ!

ಇತಿ,
ನಿಮ್ಮವ

6:57 AM  
Blogger ಪವ್ವಿ said...

ನಿಮ್ಮ ಬ್ಲಾಗ ನೋಡಿ ಮೊದಲು ಅನಿಸಿದ್ದು, ಸಂಪತ್ತಿಗೆ ಸವಾಲ್ ಚಿತ್ರದಲ್ಲಿ ಡಾ||ರಾಜ್ ಹಾಡುವ
"ಅಳುವುದು, ನಗುವುದೊ ನೀವೆ ಹೇಳಿ" ಹಾಡು. ಕ್ಷಮಿಸಿ ನಿಮಗೆ ಆಂಗ್ಲದಲ್ಲಿ "laghuo cryoo u only tellu**"

** -> ಮೇಲೆ ಎಲ್ಲಾ ಆಂಗ್ಲ ಪದವನ್ನು ಪ್ರಥಮ ವಿಭಕ್ತಿ ಪ್ರತ್ಯಯದಿಂದ ಕನ್ನಡೀಕರಣಗೊಳಿಸಿದ್ದಿನಿ ಅಂತ ನಿಮಗೆ ಅನಿಸಿದರೆ ನನ್ನ ಕ್ಷಮೆ ಇರಲಿ.


ನನ್ನ ಕೆಲ ಅನಿಸಿಕೆಗಳು ಹೀಗೆ ಇವೆ.

ಕನ್ನಡ ಓದಿದರೆ ಆಂಗ್ಲ ಕಬ್ಬಿಣದ ಕಡಲೆ ಎಂದು ಭಾವಿಸುವುದು ತಪ್ಪು ಕಲ್ಪನೆ.
ಆಂಗ್ಲವನ್ನು ಒಂದು ಭಾಷೆಯಾಗಿ ಕಲಿಯಬೇಕೆ ವಿನಹ ನೀವು ಹೇಳಿ ಕೊಟ್ಟ ಹಾಗೆ ಮನೆಯಲ್ಲಿ ಮಾತನಾಡಬಾರದು. ನಿಮ್ಮ ಲಾಜಿಕ್ ಮೇಲೆ ನಡೆದರೆ ಇಂದು ಆಂಗ್ಲದಲ್ಲಿ ಮಾತನಾಡುವ ದೇಶದಲ್ಲಿ ನಿರುದ್ಯೊಗ ಸಮಸ್ಯೆ ಇಷ್ಟು ಮಟ್ಟಿಗೆ ಹೋಗುತ್ತಿರಲಿಲ್ಲ. ಜಾಗತೀಕರಣಗಳ ತವರೂರಿನಲ್ಲಿ ಹೀಗೆ ಆಗಿರುವಾಗ ನಮ್ಮ ಹಳ್ಳಿಯಲ್ಲಿ ನಡೆಯುತ್ತದೆಯೇ ??

ಪಠ್ಯಕ್ರಮದಲ್ಲಿ ತಂತ್ರಜ್ಞಾನವನ್ನು ಅರಿಯಬೇಕೆ ವಿನಹ, ಇದೇ ಭಾಷೆಯಿಂದ ಕಲಿಯಬೇಕು ಎಂಬುದು ಹಾಸ್ಯಸ್ಪದ. ವಿಷಯದ ಬಗ್ಗೆ ಚೆನ್ನಾಗಿ ಅರಿವಿದ್ದರೆ, ಯಾವ ಭಾಷೆಯಲ್ಲಿ ಬೇಕಾದರೂ ಅದನ್ನು ಹೇಳಬಹುದು. ಇದನ್ನೇ ಇಂದು ಜಪಾನ್,ರಷ್ಯಾ,ಉಕ್ರೇನ್,ಫ್ರಾನ್ಸ್ ,ಜರ್ಮನಿ ಮಾಡಿವೆ.

ಸುಪ್ರಿಂಕೊರ್ಟ್ ಆದೇಶದ ಹಾಗೆ ಮಕ್ಕಳಿಗೆ ಒಂದು ವಿಷಯದ ಬಗ್ಗೆ ಕಲಿಯಲು ಬಹಳ ಹತ್ತಿರದ ಭಾಷೆ ಅದರ ಮಾತೃಭಾಷೆ.
ಅದರಲ್ಲಿ ಕಲಿತರೆ ಜಾಗತೀಕರಣದ ಸವಾಲನ್ನು ಎದುರಿಸಲು ಆಗುವದಿಲ್ಲ ಅನ್ನುವುದು ನಗು ಬರುತ್ತದೆ.

ಹಳ್ಳಿಯ ಹುಡುಗರಿಗೆ ಪ್ರಾರ್ಥಮಿಕ ಶಾಲೆಯಿಂದ ಇಂಗ್ಲೀಷ್ ಬೇಕಾಗಿಲ್ಲ, ಅವರಿಗೆ ಬೇಕಾಗಿರುವುದು ಇಂದು ವೃತ್ತಿ ಮಾರ್ಗದರ್ಶನ. ಅದರ ಬಗ್ಗೆ ನಮ್ಮ ಬುದ್ಧಿಜೀವಿಗಳು ಗಮನ ಹರಿಸದೆ ಇರುವುದು ವಿಷಾದ.

ಇನ್ನೂ ನಿಮ್ಮ ಆಂಗ್ಲಾಂದೋಲನದಲ್ಲಿ ಪಾಲ್ಗೊಳ್ಳುವ ಆಸೆ ನನಗಿಲ್ಲ, ಹಿಂದೆ ಕುವೆಂಪು ಆಂಗ್ಲ ಭಾಷೆಗೆ ಜೊತು ಬಿದ್ದು ಕವಿತೆಗಳನ್ನು ಬರೆದು ಐರ್ಲೆಂಡ್ ಕವಿಗೆ ತೋರಿಸಿದಾಗ ಅವರು ಹೇಳಿದ ಮಾತು ಇಂದಿಗೂ ಪ್ರಸ್ತುತ.
"ನಿನ್ನ ಮಾತೃಭಾಷೆಯಲ್ಲಿ ನೀನು ಬರಿ, ಅದು ಚೆನ್ನಾಗಿದ್ದರೆ ನಾವು ಅದನ್ನು ಅನುವಾದಿಸುತ್ತೆವೆ".
ಅದಕ್ಕೆ ಇಂದಿಗೂ ನಮಗೆ ಮೊಪಾಸ,ಟಾಲ್‍ಸ್ಟಾಯ್ ಕೃತಿಗಳು ಹತ್ತಿರವೇನಿಸುತ್ತವೆ.

ಪಲಾಯನವಾದಿತ್ವ ಮತ್ತು ಕೀಳರೆಮೆಯಿಂದ ಕೂಡಿದ ಕನ್ನಡಿಗರಿಗೆ ನಮ್ಮ ಜೈಬ್ಯಾಡರಬೊಮ್ಮ ಒಳ್ಳೆಯ ಬುದ್ದಿಕೊಡಲಿ.

ಕೊಸರು:- ಚಪ್ಪಲಿಗೆ ನಾನು ರೂ ೨೦೦೦+ ಕೊಟ್ಟಿದ್ದರು ಅದನ್ನು ಬಿಡುವುದು ಬಾಗಿಲ ಬಳಿಯಲ್ಲೆ, ದುಭಾರಿ ಅಂತ ಬೆಡ್‍ರೂಮಿನ ಹಾಸಿಗೆ ಮೇಲೆ ಬಿಡೊಲ್ಲ. ಹಾಗೆ ಇಂಗ್ಲೀಷ್ ಅನಿವಾರ್ಯತೆ ಇದ್ದರೂ,ಅದನ್ನು ಕಂಡ ಕಂಡ ಕಡೆ ಬಳಸುವದಿಲ್ಲ, ಮತ್ತು ಮನೆಯಲ್ಲಿ "NO CHANCE"( ರವಿ ಬೆಳಗೆರೆ ಧ್ವನಿಯಲ್ಲಿ.)

10:58 AM  
Blogger Anveshi said...

ಕನ್ನಡಸಾರಥಿ ಅವರೆ,

ಬೆಂಗಳೂರಿನಲ್ಲಿ ಕನ್ನಡಕ್ಕಾಗಿ ಕೈ ಎತ್ತು, ನಿನ್ನ ಕೈಗೆ ತಕ್ಷಣವೇ ಕೋಳ ಬೀಳುತ್ತದೆ ಎಂಬುದು ನಮ್ಮ ಪೂರ್ವಜರ ಹೇಳಿಕೆಯನ್ನು ಅನ್ವೇಷಿಸಲು ಹೋದಾಗ ಕಂಡುಬಂದ ತಥ್ಯ. ಆದ ಕಾರಣ, ಇಂಗ್ಲಿಷ್ ಬೇಡ, ಹಿಂದಿ ಬೇಡ, ಕನ್ನಡ ಬೇಡ ನಮಗೆ ತಮಿಳೇ ಇರಲಿ. ಯಾಕೆಂದರೆ ಅದರಲ್ಲಿ ಕಲಿಯಲು ಇರುವುದು ಕೇವಲ ಬೆರಳೆಣಿಕೆಯಷ್ಟು ಅಕ್ಷರಗಳು ಮಾತ್ರ ಎಂಬುದು ನಿಮಗೆ ಗೊತ್ತಿಲ್ಲವೆ? ಅವರಿಗೆ ಗಂಟ, ಗಂಡ ಎಲ್ಲವೂ ಒಂದೇ. ಅಲ್ವೆ?

11:58 AM  
Blogger Sarathy said...

ನಮ್ಮವರೇ, ನಿಮ್ಮ 'ಉಪ'ಸ್ಥಿತಿಗೆ ನನ್ನ ಸ್ವಾಗತ...

ಪವ್ವಿ ಕಮ್ ಬನವಾಸಿಗಳೇ, ನಿಮ್ಮ 'ಹನಿ'ಸಿಕೆ ನೋಡಿ ಆ ಬ್ಯಾಡರ ಬೊಮ್ಮನಿಗೆ ಜೈಕಾರ ಹಾಕಿದೆ. ಆದರೆ ನಾನು ಬ್ಯಾಡಾ ಬ್ಯಾಡಾ ಅಂದರೂ ಕೇಳದೆ ನನ್ನಲ್ಲಿದ್ದ ಬದ್ದ ಒಳ್ಳೆ ಬುದ್ಧಿಗೆ ಕೊಡಲಿ ಏಟು ನೀಡಿಬಿಟ್ಟನಲ್ಲ. ಅರಿವೆಯೇ ಕೀಳು ಎಂದು ನೀವು ಹಚ್ಚಿದ ಕಿಚ್ಚು ಸುಟ್ಟೆಚ್ಚರಿಸಿದಾಗ ಈ ಅರಿವನ್ನು ಕಿತ್ತು ಬಿಸಾಕಿ ಬೆತ್ತಲಾಗಿ ಇದೀಗ ಮೇಲರಿವೆಯನ್ನು ಹುಡುಕುತ್ತಾ ಪಲಾಯನ ಕೀಳುತ್ತಿದ್ದೇನೆ...

"ಚಪ್ಪಲಿಗೆ ನಾನು ರೂ ೨೦೦೦+ ಕೊಟ್ಟಿದ್ದರು ಅದನ್ನು ಬಿಡುವುದು ಬಾಗಿಲ ಬಳಿಯಲ್ಲೆ, ದುಭಾರಿ ಅಂತ ಬೆಡ್‍ರೂಮಿನ ಹಾಸಿಗೆ ಮೇಲೆ ಬಿಡೊಲ್ಲ" ಎಂದು ಬೇರೆ ಹೇಳಿದ್ದೀರಿ. ಕಾಲ ಬದ್ಲಾಗಿ ಬಾಳಾ ದಿನಾತು ಸೋಮೀ, ಬ್ಯೆಡ್ಡು ರೂಮು, ಬ್ರೆಡ್ಡು ರೂಮು ಎಲ್ಲಾ ಕಡೀಗೂ ಎಕ್ಕಡ ಹೋಗ್ತೈತೆ. ಹೂಂ ಏನ್ಮಾಡೋದೂ... ನಮ್ ಎಕ್ಕಡಕ್ಕೆ ನೋ ಚಾನ್ಸ್... ನಮ್ಗೇ ಬ್ಯೆಡ್ಡು ಬ್ರೆಡ್ಡು ಇಲ್ಲ ಇನ್ನು ಅದಕ್ಕೆಲ್ಲಿ ಜಾಗ. ಹಂಗಾಗಿ ಮನೆ ಹೊರ್ಗೆ ಬಿದ್ದಿರ್ತೈತೆ ನಮ್ ಜತೆ....

12:12 PM  
Blogger Sarathy said...

ಅಸತ್ಯಾನಂದ ಅನ್ವೇಷ್ ಮಹಾರಾಜ್ ಅವರಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು. ಆಂಗ್ಲ ಭಾಷೆಗೆ ನನ್ನ ಕೈ ಎತ್ತಿದಾಗ ಬನವಾಸಿಗಳು ಕೈಗೆ ಕೋಳ ತೊಡಿಸಿ ವನವಾಸಕ್ಕೆ ಹೋಗಲು ಇನ್ ಡೈರೆಕ್ಟಾಗಿ ಹೇಳಿ ಕೋಲಾಹಲ ಹುಟ್ಟಿಸಿದ್ದಾರೆ. ನೀವಾದರೂ ಅರಿವೆ ನೀಡುತ್ತೀರೆಂದು ಆಶಿಸಿದರೆ ಗಂಡ ಗಂಟ ಎಂದೆಲ್ಲಾ ಹೆದರಿಸುತ್ತಿದ್ದೀರಿ... ಅರಿವೆಯೇ ನೀ ಎಲ್ಲಿರುವೆ?

12:20 PM  

Post a Comment

<< Home