Saturday, April 29, 2006

ಲಾಡೆನ್ನೂ, ಚಿಂಪಾಂಜಿಯೂ, ಅಸತ್ಯಾನಂದರೂ...

"20 ಚಿಂಪಾಂಜಿ ಜತೆ ಲಾಡೆನ್ ಪರಾರಿ" ಎಂಬ ಸುದ್ದಿ ಕನ್ನಡಪ್ರಭದಲ್ಲಿ ರಾ...ರಾ...ಜಿಸುತ್ತಿತ್ತು. ಅಯ್ಯೋ ಶಿವ್ನೇ, ಲಾಡೆನ್‌ಗೆ ಅಂಜಿ ಚಿಂಪಾಂಜಿಗಳು ಅಥವಾ ಅಮೆರಿಕನ್ನರು ಪರಾರಿ ಕೀಳಬೇಕಾದ್ದು ಸಹಜ, ಆದ್ರೆ ಲಾಡೆನ್ನೇ ಪರಾರಿ ಆಗಿದ್ದಾನಲ್ಲ ಎಂದು ಆಫ್ಘಾನ್ ಬೆಟ್ಟಗುಡ್ಡಗಳಲ್ಲೆಲ್ಲಾ ಮನಸು ಶೋಧಿ(ಕಿ)ಸಹತ್ತಿತ್ತು!! ಅನುಮಾನ ಬಂದು ಮತ್ತೊಮ್ಮೆ ಹೆಡ್ಡಿಂಗ್ ನೋಡಿದೆ. ಇಲ್ಲಾ ಅದು "20 ಚಿಂಪಾಂಜಿ ಜತೆ ಲಾಡೆನ್ 'ಪರ'ರೀ" ಎಂದು ಇದ್ದಿರಬೇಕು ಎಂಬ ಪರಾಲೋಚನೆ ಸುಳಿದು ಸುರುಳಿ ಸುತ್ತಹತ್ತಿತ್ತು. ಅಷ್ಟರಲ್ಲಿ ನನ್ನ ನಂಬುಗೆಯ ಉಪಸಂಹಾರಕ/'ಪ್ರೋ'ವರ್ತಕ/ಸದ್ದುಗಾರ ಸ್ವನಕಲೀ ಕಿಟ್ಟಿ ಕೆಂಡಾಮಂಡಲವಾಗಿ.... "ಸ್ವಾಮೀ ಸಂಪಾದಕ ಬುದ್ಧೀ, ಮೊದಲು ಓದಿ ನೀವು ಸುದ್ಧಿ..." ಎಂದು ಗುದ್ದು ನೀಡಿದ. ಸುದ್ದಿ ಓದಿದಾಗ, ಲಾಡೆನ್‌ನಷ್ಟೇ ಪ್ರಖಾರವಾಗಿ ಚಿಂಪಾಂಜಿಗಳು ಹಲ್ಲೆ ನಡೆಸಿದ್ದು ಕಂಡು ಅಮೆರಿಕನ್ ಲಾ ಈಸ್ ಇನ್ ಲಾ'ಡೆನ್' ಎಂಬುದು ಸ್ಪಷ್ಟವಾಗಹತ್ತಿತ್ತು.

ಸುದ್ದಿಮೂಲ ಹುಡುಕುತ್ತಾ ಡಾಮಿನಿಕನ್ ಟುಡೇ ತಲುಪಿದಾಗ ಅದರಲ್ಲಿದ್ದ ಚಿಂಪಾಂಜಿ ಕಂಡು ಅಂಜಿಕೆಯಿಂದ ಹಿಂತೆಗೆದೆ. ಇಲ್ಲಿರುವ ಚಿಂಪಾಂಜಿಯನ್ನು ಎಲ್ಲೋ ನೋಡಿದಹಾಗಿದೆಯಲ್ಲ ಎಂದೆನಿಸಿತು. ಸ್ವನಕಲಿ ಕಿಟ್ಟಿಗೆ ನನ್ನ ಅನುಮಾನ ಗೊತ್ತಾಯಿತೇನೋ ತಲೆ ಗಿರ್ರನೇ ತಿರುಗಿಸುತ್ತಾ 'ನೆಟ್'ಲೆಲ್ಲಾ ಸುತ್ತಾಡಿ ಅ'ಭೂತ'ಪೂರ್ವ ಮಾಹಿತಿ ಕಲೆಹಾಕಿದ.

ಅಸತ್ಯ ಮೂಲ: ಅವನ ಮಾಹಿತಿಯಂತೆ, ಅಮೆರಿಕನ್ನರ ಜೀವ ತಿಂದ ಚಿಂಪಾಂಜಿಗಳಲ್ಲಿ ಒಂದು ನೆಟ್‌ನಲ್ಲಿ ಗೂಡು ಕಟ್ಟಿಕೊಂಡಿದೆಯಂತೆ. ಅದು ಬ್ಲಾಗಿನ ಮೇಲೆ ಬ್ಲಾಗಿನ ಮೇಲೆ ಧಾಳಿ ನಡೆಸುತ್ತಲೇ ಬ್ಲಾಗ್'ಹರಣ' ಮಾಡುತ್ತಿದೆಯಂತೆ. ಅದು ಇರುವ ಗೂಡು ತೋರಿಸು ಎಂದು ಕಿಟ್ಟಿಯನ್ನು ಕೇಳಿದಾಗ ಅವ ನನ್ನನ್ನು ಆ ಸ್ಥಳಕ್ಕೇ ಕರೆದೊಯ್ದ. ಎಲಾ ಇದರಾ... ಇಷ್ಟುದಿನ ಅಸತ್ಯದ ಅಮಲಿನಲ್ಲೇ ಸಿಕ್ಕಕ್ಕಲ್ಲೆಲ್ಲಾ ಕಿತಾಪತಿ(ಕಿತ್ತು ಫಜೀತಿ) ಮಾಡುತ್ತಿದ್ದ ಬೊಗಳೆ ಪಂಡಿತರ ಫೋಟೋ ಮತ್ತು ತಪ್ಪಿಸಿಕೊಂಡ ಚಿಂಪಾಂಜಿಯ ಫೋಟೋ ಒಂದೇ ರೀತಿಯದಾಗಿತ್ತು.


ಈಗ ಸತ್ಯದ ಅರಿವಾಗತೊಡಗಿದೆ. ಬ್ಲಾಗ್ ಸ್ಪರ್ಧೆಯಲ್ಲಿ ನನ್ನೊಂದಿಗೆ ಸರಿಸಮಾನವಾಗಿ ಇದ್ದ (ಆರಂಭದಲ್ಲಿ ಮಾತ್ರ) ಅಸತ್ಯಾನಂದರು ಬರುಬರುತ್ತಾ ಮಾನವಾತೀತ ಶಕ್ತಿಯೊಂದಿಗೆ ದಾಪುಗಾಲು ಹಾಕುತ್ತಾ ನೆಗೆದೋಡಿದ್ದು (ಈಗಲೂ ಓಡುತ್ತಿದೆ) ಕಂಡು ನನಗೆ ಆಶ್ಚರ್ಯವಾಗಿತ್ತು. ಯಾರಿಗೂ ಅಂಜದೆ ದಾಂಧಲೆ ಮಾಡುವುದರ ಇಂದೆ ಈ 'ದೈತ್ಯ'ಶಕ್ತಿ ಇದೆ ಎಂಬದು ಈಗ ಕನ್ಪರ್ಮ್ಡ್...

ತಲೆಬುಡ ಎನ್ನದೇ ಮೈಪರಚಿಕೊಳ್ಳುತ್ತಿದ್ದೀರಿ ಎಂದು ನನ್ನನ್ನು ಹಣಕಿಸುತ್ತಿರುವಿರಾ? ತಾಳಿ, ನನ್ನ ನಂಬುಗೆಯ ಸ್ವನಕಲಿಯು ಎಂದಿಗೂ ಸಾಕ್ಷಿ ಇಲ್ಲದೆ ನಕಲಿ ಮಾಡಲಾರನು. 20 ಚಿಂಪಾಂಜಿಗಳು ತಪ್ಪಿಸಿಕೊಂಡ ಸುದ್ದಿ ಪತ್ರಿಕೆಗಳಲ್ಲಿ ಬಂದ ತತ್‌ಕ್ಷಣವೇ ಬೊಗಳೆ ಪಂಡಿತರು ಎರಡು ದಿನ ರಜೆಹಾಕಿ ಅಜ್ಞಾತವಾಸಕ್ಕೆ ತೆರಳಿದ್ದಾರೆ. ನನ್ನ ಸಾಕ್‌ಷೀ ಸಾಕಲ್ಲವೇ? ವನವಾಸದಲ್ಲಿರಬೇಕಾಗಿದ್ದ ಅವರು ಅಜ್ಞಾತವಾಸಕ್ಕಾಗಿ ಯಾವ ವನಕ್ಕೆ ಹೋಗಿದ್ದಾರೋ ಪರಿಶೀಲಿಸಿ ವರದಿ ಸಲ್ಲಿಸಲು ಸ್ವನಕಲಿಗೆ ಆದೇಶ ನೀಡಿದ್ದೇನೆ.

ಓದುಗರ ಗಮನಕ್ಕೆ: ಮೇ 1ರ ಕಾರ್ಮಿಕರ ದಿನಾಚರಣೆ ಪ್ರಯುಕ್ತ 'ಮಿಕ'ಗಳ ಭೇಟೆಗಾಗಿ ತೆರಳುತ್ತಿದ್ದೇನಾದ್ದರಿಂದ ಮೇ 2 ರಂದು ನಿಮ್ಮನ್ನು ಭೇಟಿಯಾಗುತ್ತೇನೆ. ಅಲ್ಲಿಯವರೆಗೆ ಗುಡ್‌ಬಾಯ್.

7 Comments:

Blogger bhadra said...

ಒಳ್ಳೆ ಸುದ್ದಿಯನ್ನೇ ಕೊಟ್ಟಿದ್ದೀರಿ. ಮೊನ್ನೆ ಲಾಡು ತರಲು ಅಂಗಡಿಗೆ ಹೋದಾಗ ಲಾಡೆನ್ ಅಂತಹವನನ್ನು ಚಿಂಪಿಗಳೊಂದಿಗೆ ನೋಡಿದ್ದೆ. ಇವನ್ಯಾಕೆ ಇಲ್ಲಿ ಅಂತ ತಲೆಕೆರೆದುಕೊಳ್ಳುವುದರಲ್ಲಿ, ಒಂದು ಚಿಂಪಿ ಬಂದು ನನ್ನ ತಲೆಯನ್ನು ಕೆರೆದಿತ್ತು. ಅವರುಗಳು ತಪ್ಪಿಸಿಕೊಂಡು ಬಂದಿದ್ದರು ಎಂಬುದು ಈಗ ನಿಮ್ಮಿಂದ ತಿಳಿಯಿತು.

ಮಿಕಗಳನ್ನು ನೋಡೋಕ್ಕೆ ಹೋಗ್ತಿದ್ದೀನಿ ಎಂದಿರಿ, ಆದರೆ ಕಾರಿನಲ್ಲಿ ಹೋಗಬೇಡಿ, ಆ ರಸ್ತೆ ದುರಸ್ತಿಗೆಂದು ಕಲ್ಲುಗಳನ್ನು ತರಿಸಿ ಹಾಕಿದ್ದಾರೆ. ಆಮೇಲೆ ನಿಮ್ಮ ಕಾರು ಕಾರ್ಮಿಕರಿಗೆ ಇಷ್ಟವಾಗಿ ನೀವು ಮಿಕವಾಗುವುದನ್ನು ನಾನು ನೋಡಲಾರೆ. ವಿಷಯ ಗೊತ್ತಿದ್ದವನು ನೀನ್ಯಾಕೆ ಹೇಳಲಿಲ್ಲ ಎಂಬ ಶ್ರೀಕೃಷ್ಣನ ಕೋಪಕ್ಕೆ ನಾ ತುತ್ತಾಗಲಾರೆ.

7:48 PM  
Blogger Anveshi said...

ಓಯ್ ಕಿಲಾಡಿ ಸಾರಥಿ ಅವರೆ, ನಿಮ್ಮ ಕಿಲಾಡಿ ಕಿಟ್ಟಿಯೆಂಬೋ ಉಪಸಂಹಾರಕನನ್ನು ವಾಪಸ್ ಕೆರೆದುಕೊಳ್ಳದಿದ್ದರೆ ಮಾರಣ ಹೋಮ ನಡೆಸಲಾಗುವುದು.

ಅಲ್ಲಾ.... ನನ್ನ ಹಿಂದೆ ರಜೆ ಹಾಕಿ ಓಡಿಬರುತ್ತಿರುವ ನಿಮ್ಮ ಫೋಟೋವನ್ನು ಮಾತ್ರ ದೂರದಿಂದ ತೆಗೆದು, ನನ್ನ ಬೊಗಳೆಯಲ್ಲಿದ್ದ ಬೆಚ್ಚಿಬೀಳುವ ಸುಂದರಾಂಗನ ಚಿತ್ರವನ್ನು ಕ್ಲೋಸ್ಅಪ್‌ನಲ್ಲಿ ಪ್ರಕಟಿಸಿದ ಹಿನ್ನೆಲೆ ಏನು? ನಿಮ್ಮ ಮೇಲೆ ಅವಮಾನನಷ್ಟ ಮೊಕದ್ದಮೆ ಹೂಡಲಾಗುವುದು.

ವನವಾಸದಲ್ಲಿರಬೇಕಾಗಿದ್ದವನು ಅಜ್ಞಾತವಾಸಕ್ಕೆ ತೆರಳಿದ್ದು ಯಾಕೆ ಗೊತ್ತೇ? ನೀವು ಢಾಳಾಗಿ ವಿಹರಿಸುತ್ತಿರುವ ಸ್ವಂತ ಪ್ರದೇಶದಲ್ಲಿ ಯಾವುದೇ ನಮ್ಮದ್ಯಾಕೆ ಉಪಟಳ ಅಂತ.

ಅದಿರಲಿ, ಕಾರುಗಳುಳ್ಳ ಮಿಕಗಳ ಬೇಟೆಗೆ ಹೊರಟಿದ್ರಲ್ಲಾ? ಎಷ್ಟು ಮಿಕ ಬಿತ್ತು ಬಲೆಗೆ?

12:56 PM  
Blogger Sarathy said...

ಕನ್ನಡಕ್ಕೆ ಫಾರ್(For or Far) ಆದವನಿಗೆ ಕಾರ್ ಎಲ್ಲಿಂದ ಬರಬೇಕು ತವಿಶ್ರೀಗಳೇ? ಹಾಗೊಂದು ವೇಳೆ ಸಿಕ್ಕಿಕೊಂಡರೆ ಕಾರ್ಮಿಕರಿಗೆಲ್ಲರಿಗೂ ಕಾರ್ ಕೊಡ್ತೀನೆಂತಾ ಆಶ್ ವಾಸನೆ ಕೊಟ್ಟರೆ ಸಾಕು ಎಲ್ಲರೂ ಕಾರ್ ಗಾಗಿ ಮಿಕಗಳಾಗುತ್ತಾರೆಂಬುದು ಸ್ವನಕಲಿ ಕಿಟ್ಟಿಯ ಅಭಿಪ್ರಾಯ.

1:21 PM  
Blogger Sarathy said...

ಅನ್ವೇಷಿಗಳೇ, ಕಿಲಾಡಿ ಕಿಟ್ಟಿ ನಮ್ಮ ಪತ್ರಿಕೆಯ ಹಾಳುಜೀವ(ಜೀವಾಳ). ಅವನನ್ನು ಕೆರೆದರೆ ಮಲಗಿದ ಸಿಂಹವನ್ನು ಕರೆದು ನೀವು ಸಿಂಹಾರಕರಾಗಬೇಕಾದೀತು, ಜಾಗ್ರತೆ.

ಎರಡು ದಿನಗಳ ಹಿಂದೆ ಕಾರ್ ಗಳನ್ನು ಹೊಂದಿದ್ದ ಮಿಕಗಳೆಲ್ಲವೂ ಇಂದು ಏರೋಪ್ಲೇನ್ ಹತ್ತಿಬಿಟ್ಟಿರುವುದರಿಂದ ಪ್ರಯತ್ನ ಕೈ ಬಿಡಬೇಕಾಯಿತು.

1:29 PM  
Blogger Vishwanath said...

ಮಿಕಗಳು ತಾವೇ ಏರೋಪ್ಲೇನ್ ಹತ್ತಿದವೋ ಅಥವಾ ನೀವೇ ಏರೋಪ್ಲೇನ್ ಹತ್ತಿಸಿದಿರೋ ಸ್ಪಷ್ಟಪಡಿಸಬೇಕಾಗಿ ವಿನಂತಿ!

5:03 PM  
Blogger ತಲೆಹರಟೆ said...

ಒಂದಕ್ಕಿಂತ ಒಂದು ಉತ್ತಮ ಬ್ಲಾಗ್ ಗಳು ಕನ್ನಡದಲ್ಲಿ! ಕನ್ನಡ ಬ್ಲಾಗ್ ಪ್ರಪಂಚ ನೋಡಿ ಖುಶಿಯಾಯಿತು.ಛೆ,ಕನ್ನಡ ಭಾಷೆಯಲ್ಲಿ ಬ್ಲಾಗ್ ಮಾಡುವುದು ಹೇಗೆ ಎಂದು ತಲೆ(ನನಗದು ಇದೆಯಾ?)ಕೆಡಿಸಿಕೊಂಡು ಕೊನೇಗೂ ಒಂದಿಷ್ಟು ಕಲಿತು ಒಂದು ಬ್ಲಾಗ್ ರಚಿಸಿಬಿಟ್ಟೆ.
www.tale-harate.blogspot.com

11:05 PM  
Blogger Sarathy said...

ವಿಶ್ವನಾಥ್ ಅವರೇ, ಏರಿರೋ ಪ್ಲೇನ್ ಎಂದು ನಾನು ಕೂಗುವ ಮುನ್ನೇ ಮಿಕಗಳು ಆಗಲೇ ಏರೋಪ್ಲೇನ್ ಹತ್ತಿಯಾಗಿದ್ದವು... ಏನ್ಮಾಡುವುದು?

ಮಿಸ್ಟರ್ ತಲೆಹರಟೆ, ನಿಮ್ಮ ಹರಟೆಯ ಹಿಂದೆ ತಲೆ ಇರುವುದು ಮೇಲ್ನೋಟಕ್ಕೇ ಖಚಿತವಾಗಿದೆ. ಸೋ, ತಲೆ ಕೆರೆದುಕೊಳ್ಳಿರಿ, ಒಂದಷ್ಟು ಹೇನುಗಳೊಂದಿಗೆ ಐಡಿಯಾಗಳೂ ಹೊರಬಂದೀತು...

10:45 AM  

Post a Comment

<< Home