Saturday, January 05, 2008

ಕನ್ನಡಿಗರಿಂದ ಕನ್ನಡದ ಕಗ್ಗೊಲೆಯಾಗಬೇಕೆ?

ಹಲವಾರು ಕಂಪನಿಗಳು ತಮ್ಮ ಉತ್ಪನ್ನಗಳನ್ನು ಮತ್ತು ಅವುಗಳ ಜಾಹೀರಾತುಗಳನ್ನು ಸ್ಥಳೀಯ ಭಾಷೆಗಳಲ್ಲಿ ನಡೆಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಸಹಜವಾಗಿಯೇ ಕನ್ನಡದಲ್ಲಿಯೂ ಸಾಕಷ್ಟು ಸರಕುಗಳು ತಯಾರಾಗುತ್ತಿವೆ. ಅಂದರೆ, ಕನ್ನಡದ ಬಳಕೆ ಹಿಂದೆಂದಿಗಿಂತಲೂ ವ್ಯಾಪಕವಾಗುತ್ತಿದೆ. ಈ ಸ್ಥಿತಿಗೆ ಕನ್ನಡ ಭಾಷೆ ಸಿದ್ಧವಿದೆಯೇ ಅಥವಾ ಕನ್ನಡಿಗರು ಇದಕ್ಕೆ ಸನ್ನದ್ಧರಾಗಿದ್ದಾರೆಯೇ? ಉತ್ತರ ಸ್ವಲ್ಪ ಕಷ್ಟವೇ. ಕನ್ನಡ ಭಾಷೆಯೇನೋ ಸಿದ್ಧವಿದೆ. ಆದರೆ ಕನ್ನಡ ಭಾಷೆಗೆ ಸಾಕಷ್ಟು ಕನ್ನಡಿಗರು ಸಿದ್ಧರಿಲ್ಲವೆನ್ನುವುದು ಸತ್ಯ.

ಆಂಗ್ಲ ಭಾಷೆಯಿಂದ ಬಹಳಷ್ಟು ವಿಷಯಗಳು ಕನ್ನಡಕ್ಕೆ ಭಾಷಾಂತರಗೊಳ್ಳುತ್ತಿವೆ. ಇವುಗಳಲ್ಲಿ ತಂತ್ರಜ್ಞಾನ, ಕಾನೂನು, ಕಂಪನಿ ವ್ಯವಹಾರ ಮುಂತಾದ ಕ್ಷೇತ್ರಗಳ ವಿಷಯಗಳೇ ಹೆಚ್ಚಾಗಿವೆ. ದುರದೃಷ್ಟವಶಾತ್, ನಮ್ಮಲ್ಲಿ ಈ ಕ್ಷೇತ್ರಗಳಿಗೆ ಸಂಬಂಧಿಸಿದ ಸಾಹಿತ್ಯ ಬೇಕಷ್ಟಿಲ್ಲ. ಜೊತೆಗೆ ನುರಿತ ಅನುವಾದಕರ ಅತೀವ ಕೊರತೆ ಕಾಡುತ್ತಿದೆ. ಆಂಗ್ಲ ಭಾಷೆ ಮತ್ತು ಕನ್ನಡ ಭಾಷೆ ಎರಡೂ ಸರಿಯಾಗಿ ತಿಳಿಯದ ಹಾಗೂ ಭಾಷಾಂತರ ಎಂದರೇನೆಂದೇ ಅರಿಯದ ವ್ಯಕ್ತಿಗಳ ಕೈಯಲ್ಲಿ ಕನ್ನಡ ನಲುಗುತ್ತಿದೆ.

ಕೆಲವು ವರ್ಷಗಳ ಹಿಂದೆ ಮೈಕ್ರೋಸಾಫ್ಟ್ ಕಂಪನಿಯವರು ತಮ್ಮ ವಿಂಡೋಸ್ ಸಾಫ್ಟ್‌ವೇರ್‌ನ ಒಂದು ಆವೃತ್ತಿಯನ್ನು ಕನ್ನಡವೂ ಸೇರಿದಂತೆ ಭಾರತೀಯ ಭಾಷೆಗಳಲ್ಲಿ ತರಲು ಮುಂದಾಗಿತ್ತು. ಆದರೆ ಅದರ ಕನ್ನಡ ಆವೃತ್ತಿಯ ಕೆಟ್ಟ ಗುಣಮಟ್ಟ ಬೆಳಕಿಗೆ ಬಂದು ಒಂದು ವಿವಾದವೇ ಸೃಷ್ಟಿಯಾಗಿತ್ತು. ಮೈಕ್ರೋಸಾಫ್ಟ್ ವಿರುದ್ಧ ಟೀಕಾ ಪ್ರಹಾರ ನಡೆದವು. ಆಗ ಕರ್ನಾಟಕದಲ್ಲಿ ಮಾಹಿತಿ ತಂತ್ರಜ್ಞಾನ ಅಳವಡಿಕೆಗೆ ಮೈಕ್ರೋಸಾಫ್ಟ್‌ವೊಂದಿಗೆ ಕರ್ನಾಟಕ ಸರ್ಕಾರ ಒಪ್ಪಂದ ಮಾಡಿಕೊಳ್ಳಲು ಮುಂದಾಗಿತ್ತಾದ್ದರಿಂದ ಕರ್ನಾಟಕ ಸರ್ಕಾರದ ವಿರುದ್ಧವೂ ಪ್ರತಿಭಟನೆ ನಡೆಸಲಾಯಿತು. ಕೊನೆಗೆ, ಮೈಕ್ರೋಸಾಫ್ಟ್ ತನ್ನ ವಿಂಡೋಸ್‌ನ ಕನ್ನಡ ಆವೃತ್ತಿಯ ಬಿಡುಗಡೆಯನ್ನು ರದ್ದುಗೊಳಿಸಿತು.

ಮೈಕ್ರೋಸಾಫ್ಟ್, ಯಾಹೂ, ಗೂಗಲ್ ಮೊದಲಾದ ಪ್ರತಿಷ್ಠಿತ ಕಂಪನಿಗಳ ಜನಪ್ರಿಯತೆಯಿಂದಾಗಿ ಜನರು ಅವುಗಳಿಂದ ಅತ್ಯುತ್ತಮ ಗುಣಮಟ್ಟದ ಉತ್ಪನ್ನಗಳನ್ನು ನಿರೀಕ್ಷಿಸುತ್ತಾರೆ. ಅದರ ಮೂಲ ಸಾಫ್ಟ್‌ವೇರ್ ಆಗಲೀ ಅಥವಾ ಅದರ ಸ್ಥಳೀಯ ಭಾಷಾ ಆವೃತ್ತಿಯಾಗಲೀ ಜನರಿಗೆ ಆ ಕಂಪನಿಗಳ ಬ್ರ್ಯಾಂಡ್ ಅಷ್ಟೇ ಕಣ್ಮುಂದೆ ಇರುತ್ತದೆ. ಹಾಗಾಗಿ, ಮೈಕ್ರೋಸಾಫ್ಟ್‌ನಿಂದ ಅತ್ಯುಚ್ಚ ಕನ್ನಡ ಆವತ್ತಿಯನ್ನು ನಿರೀಕ್ಷಿಸುವ ಜನರು ಇದಕ್ಕೆ ಬದಲಾಗಿ ಕಳಪೆ ಗುಣಮಟ್ಟ ಕಂಡಾಗ ಅತೀವ ನಿರಾಶೆಗೊಳ್ಳುವುದು ಸಹಜವೇ.

ಮೈಕ್ರೋಸಾಫ್ಟ್ ಕಂಪನಿಯು ಕನ್ನಡ ಅರಿಯದ ಒಂದು ಕಂಪನಿ ಎಂದು ನಾವು 'ಹೋಗಲಿ, ಪರವಾಗಿಲ್ಲ' ಎನ್ನಬಹುದು. ಕನ್ನಡಿಗರದ್ದೇ ಆದ ಕರ್ನಾಟಕ ಸರ್ಕಾರವೇ ಕನ್ನಡದ ಬಗ್ಗೆ ದಿವ್ಯ ನಿರ್ಲಕ್ಷ್ಯ ತೋರುವುದು ಎಷ್ಟು ಸರಿ?! ಸರ್ಕಾರದ ಉಸ್ತುವಾರಿಯಲ್ಲಿ ನಡೆಯುವ ಶಾಲೆ, ಕಾಲೇಜುಗಳ ಕನ್ನಡ ಪಠ್ಯ ಪುಸ್ತಕಗಳು ಸಾಕಷ್ಟು ಉತ್ತಮ ಗುಣಮಟ್ಟದಲ್ಲಿರುತ್ತವೆ ಎಂಬುದು ಒಪ್ಪಬೇಕಾದ ಮಾತು. ನುಡಿ ಮುಂತಾದ ಸರ್ಕಾರೀ ಪ್ರಾಯೋಜಿತ ತಂತ್ರಾಂಶಗಳಲ್ಲಿಯೂ ಕನ್ನಡದ ಗುಣಮಟ್ಟ ತಕ್ಕಮಟ್ಟಿಗೆ ಪರವಾಗಿಲ್ಲವೆಂದೇ ಹೇಳಬಹುದು. ಆದರೆ ಇತ್ತೀಚಿನ ಮಾಹಿತಿ ತಂತ್ರಜ್ಞಾನದ ಭರಪೂರದಲ್ಲಿ ಕನ್ನಡವನ್ನು ಹಿಡಿದಿಡಲು ಸರ್ಕಾರ ವಿಫಲವಾಗುತ್ತಿದೆ ಅಥವಾ ನಿರ್ಲಕ್ಷ್ಯ ತೋರುತ್ತಿದೆ. ಇದಕ್ಕೆ ಉದಾಹರಣೆಗಳು ಸಾಕಷ್ಟಿವೆ. ರಾಷ್ಟ್ರೀಯ ಜ್ಞಾನ ಆಯೋಗದ (National Knowledge Commission) ವೆಬ್‌ಸೈಟ್‌ನ ಕನ್ನಡ ಆವತರಣಿಕೆಗೆ (http://knowledgecommission.gov.in/kannada/default.asp) ಒಮ್ಮೆ ಭೇಟಿಕೊಟ್ಟು ನೋಡಿ.

ರಾಷ್ಟ್ರೀಯ ಜ್ಞಾನ ಆಯೋಗವು ಭಾಷೆಯ ಅವಶ್ಯಕತೆ ಕುರಿತು ಭಾರತೀಯ ಪ್ರಧಾನಿಗೆ ಬರೆದ ಪತ್ರವೊಂದರ ಕನ್ನಡ ತರ್ಜುಮೆಯನ್ನು ನೀವು ಆ ವೆಬ್‌ಸೈಟ್‌ನಲ್ಲಿ ನೋಡಬಹುದು. ಹಾಗೆಯೇ ಆಂಗ್ಲ ಅವತರಣಿಕೆಗೆ http://knowledgecommission.gov.in/downloads/recommendations/TranslationLetterPM.pdf ಗೆ ಹೋಗಿ ಎರಡನ್ನೂ ಹೋಲಿಸಿ ನೋಡಿ. ಇಲ್ಲಿರುವ ಕನ್ನಡ ಭಾಷಾಂತರ ತೀರಾ ಹೇಸಿಗೆ ಎನಿಸುತ್ತದೆ.

ಉದಾಹರಣೆಗೆ ಕೆಳಗಿರುವ ಪಠ್ಯವನ್ನು ಓದಿರಿ....

"ಭಾಷಾಂತರಕ್ಕೆ ಹಲವಾರು ಸಲಕರಣೆಗಳನ್ನು ಸೃಷ್ಠಿಸುವುದು ಮತ್ತು ಉಳಿಸಿಕೊಳ್ಳುವುದು, ಈ ಕೆಳಗಿನ ಅಂಕೀಯ ಸಲಕರಣೆಗಳು ಒಳಗೊಂಡಂತೆ, ಸಮಾನಾರ್ಥಕ ಮತ್ತು ವಿರುದ್ಧಾರ್ಥಕ ಪದಕೋಶ, ದ್ವಿಭಾಷಾ ಪದಕೋಶಗಳು ಮತ್ತು ಭಾಷಾಂತರಕ್ಕೆ ಮೆದುಸರಕು. ಇದರೊಟ್ಟಿಗೆ ಯಂತ್ರ ಭಾಷಾಂತರ ಸನ್ನೆ ಬಳಕೆಯ ಹೊರಹೊಮ್ಮುತ್ತಿರುವ ತಂತ್ರಜ್ಞಾನವನ್ನು ತುಲನಾತ್ಮಕವಾದ ಕಡಿಮೆ ದರದಲ್ಲಿ ವೇಗವಾದ ಮತ್ತು ಬೃಹತ್ ಭಾಷಾಂತರ ಸಂಪುಟಗಳನ್ನು ಒದಗಿಸುವ ಉದ್ದೇಶದಿಂದ ಬೆಂಬಲಿಸುವುದು."

ಏನಾದರೂ ಅರ್ಥವಾಯಿತೆ? ಇದನ್ನು ಓದುವುದು ಅರ್ಥವಿಲ್ಲದ್ದು ಎಂದು ಮಾತ್ರ ನಿಮಗೆ ಅರ್ಥವಾಗಿರಬೇಕು. ಆ ಪಠ್ಯದ ಮೂಲ ಆಂಗ್ಲ ಪಠ್ಯ ಇಲ್ಲಿದೆ ಓದಿ....

"Create and maintain various tools for translation, including digital tools like Thesauri, Bilingual Dictionaries and software for translation. In addition, promote machine translation, leveraging emerging technologies to provide rapid and large volume of translation at a relatively low cost."

ಕನ್ನಡದಲ್ಲಿ ಇಂತಹ ಕಚಡ ಸರಕುಗಳನ್ನು ತುರುಕುವ ಬದಲು ಹಾಗೆಯೇ ಆಂಗ್ಲ ಭಾಷೆಯಲ್ಲಿಯೇ ಬಿಟ್ಟರೆ ಒಳ್ಳೆಯದಲ್ಲವೆ! ಮೊದಲನೆಯ ವಾಕ್ಯದಲ್ಲಿ ಅಲ್ಪವಿರಾಮದ ನಂತರ ಬರುವ ಪಠ್ಯವನ್ನು ತೀರಾ ಬಾಲಿಶ ಎಂದು ಹೇಳಬಹುದು. 'software' ಪದಕ್ಕೆ 'ಮೆದುಸರಕು' ಎಂದು ಯಥಾವತ್ ಅನುವಾದ ಮಾಡಿ ಕನ್ನಡಾಭಿಮಾನ ಮೆರೆದ ಅನುವಾದಕರನ್ನು ಕೊಂಡಾಡಬೇಕು. ಎರಡನೇ ವಾಕ್ಯದ ಬಗ್ಗೆ ಏನೂ ಹೇಳದಿರುವುದೇ ಲೇಸು. ಜ್ಞಾನ ಆಯೋಗದ ಈ ಅಜ್ಞಾನಕ್ಕೆ ಏನೆಂದು ಹೇಳುವುದು?

ಕನ್ನಡ ಅನುವಾದಕರಾಗಿ ಕೆಲಸ ಮಾಡುವ ಮಂದಿ ತಾವು ಕನ್ನಡಕ್ಕಾಗಿ ಕೆಲಸ ಮಾಡುತ್ತಿದ್ದೇವೆ ಎಂದು ನೆನಪಿಟ್ಟುಕೊಂಡರೆ ಒಳ್ಳೆಯದು. ಅವರು ಬಳಸುವ ಕನ್ನಡವೇ ಮುಂದಿನ ಪೀಳಿಗೆಯ ಕನ್ನಡಿಗರಿಗೆ ಮಾದರಿಯಾಗುವ ಸಾಧ್ಯತೆಗಳೂ ಇವೆ. ಪಠ್ಯ ಪುಸ್ತಕ, ಬಳಕೆದಾರ ಕೈಪಿಡಿಗಳು, ತಂತ್ರಾಂಶಗಳು ಇತ್ಯಾದಿಗಳೆಡೆಯಲ್ಲಿ ಬಳಸಲಾಗುವ ಕನ್ನಡದ ಗುಣಮಟ್ಟವನ್ನು ಪರಿಶೀಲಿಸಲು ಒಂದು ಮಾನದಂಡ ನಿರ್ಮಾಣವಾಗಬೇಕು. ತಮಿಳು, ಮಲಯಾಳಂ ಮತ್ತು ತೆಲುಗು ಭಾಷೆಗಳಲ್ಲಿ ಕಾನೂನು, ತಂತ್ರಜ್ಞಾನ, ತಂತ್ರಾಂಶ ಇತ್ಯಾದಿ ಕ್ಷೇತ್ರಗಳ ಬಗ್ಗೆ ಸಾಕಷ್ಟು ಸಾಹಿತ್ಯಗಳಿವೆ. ಆದರೆ ಕನ್ನಡದಲ್ಲಿ ಇವು ತೀರಾ ದುರ್ಲಭ. ಕತೆ ಕವನ, ಕಾದಂಬರಿ, ವಿಮರ್ಶೆ, ಗ್ರಂಥ ಮೊದಲಾದ ವಿಷಯಗಳಲ್ಲಿ ನಾವು ಸಾಕಷ್ಟು ಹಾಗೂ ಉಚ್ಚತಮ ಸಾಹಿತ್ಯಗಳನ್ನು ಸೃಷ್ಟಿಸುತ್ತಿದ್ದೇವೆ. ಆದರೆ ಮೇಲೆ ಹೇಳಿದ ಪರ್ಯಾಯ ಸಾಹಿತ್ಯಗಳು ಮುಂದಿನ ತಲೆಮಾರನ್ನು ಪ್ರಭಾವಿಸುವ ಶಕ್ತಿಹೊಂದಿರುವುದರಿಂದ ಅವುಗಳತ್ತ ಸಾಹಿತ್ಯ ಹಾಗೂ ತಂತ್ರಜ್ಞಾನ ನುರಿತರ ಮುತುವರ್ಜಿ ಬಿದ್ದರೆ ಒಳ್ಳೆಯದು. ಇಲ್ಲದಿದ್ದರೆ ಕನ್ನಡದ ಕಗ್ಗೊಲೆಯನ್ನು ಕನ್ನಡಿಗರೇ ಮಾಡುವಂತಾಗುತ್ತದೆ.

Labels: ,

0 Comments:

Post a Comment

<< Home