Friday, January 25, 2008

ಲಿಂಗುಸ್ವಾಮಿಯ ಭೀಮನೂ ಭಟ್ಟರ ಗಾಳಿಪಟವೂ...

ನಮ್ಮ ಹಲವಾರು ಮಂದಿಯ ಬಹುನಿರೀಕ್ಷೆಯ ಚಿತ್ರ 'ಗಾಳಿಪಟ'. ಭರ್ಜರಿ ಯಶಸ್ವಿ 'ಮುಂಗಾರು ಮಳೆ' ಚಿತ್ರದ ರೂವಾರಿಗಳಾದ ನಿರ್ದೇಶಕ ಯೋಗರಾಜ್ ಭಟ್ ಮತ್ತು ಆ ಚಿತ್ರದ ಹೀರೋ ಗಣೇಶ್ ಮತ್ತೊಮ್ಮೆ ಬೆರೆತ ಚಿತ್ರ ಗಾಳಿಪಟ. ಅದರ ನಿರ್ಮಾಪಕರು ತಮಿಳಿನ ಘಟಾನುಘಟಿ ಎ.ಎಂ.ರತ್ನಂ. ಚಿತ್ರ ಪೂರ ಮಲೆನಾಡಿನ ನಿಸರ್ಗ ಸೌಂದರ್ಯದ ರಮಣೀಯ ಹಿನ್ನೆಲೆ. ಇಷ್ಟು ಸಾಕಲ್ಲವೇ ಒಂದು ಚಿತ್ರದ ಬಗ್ಗೆ ಅಪಾರ ನಿರೀಕ್ಷೆ ಇರಿಸಿಕೊಳ್ಳಲು?

ಚೆನ್ನೈನಲ್ಲಿರುವ ನಮಗೆ 'ಗಾಳಿಪಟ' ಮೊದಲ ಬಾರಿಗೇ ನಿರಾಸೆ ತಂದಿತ್ತು. ಇಲ್ಲಿನ ಕ್ಯಾಸಿನೋ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತದೆಂದು ಮೂರು ವಾರಗಳ ಹಿಂದಿನಿಂದಲೇ ಪೇಪರಿನಲ್ಲಿ ಜಾಹೀರಾತು ಬರುತ್ತಿತ್ತು. ಬಿಡುಗಡೆ ದಿನ ಬಂದರೂ ಚೆನ್ನೈನಲ್ಲಿ ಎಲ್ಲಿಯೂ 'ಗಾಳಿಪಟ' ಹಾರಾಡಲಿಲ್ಲ. ಅಂತೂ ಬೆಂಗಳೂರಿಗೇ ದೌಡಾಯಿಸಿ ಚಿತ್ರವನ್ನು ನೋಡಬೇಕಾಯಿತು. ಚಿತ್ರಮಂದಿರದೊಳಗೆ ಆಗುತ್ತಿದ್ದ ಪ್ರೇಕ್ಷಕರ ಕಲರವ, ಉತ್ಸಾಹಗಳನ್ನು ಕಂಡು ಮನಸಿನೊಳಗೆ ಚಿತ್ರದ ಬಗ್ಗೆ ನೂರಾರು ಗಾಳಿಪಟಗಳು ಹಾರತೊಡಗಿದ್ದವು. ಚಿತ್ರ ಆರಂಭಗೊಂಡು ಒಂದೊಂದೇ ಸನ್ನಿವೇಶಗಳು ಸಂದುಹೋಗುತ್ತಿರುವಂತೆಯೇ ಮನಸಿನೊಳಗೆ ಹಾರಾಡುತ್ತಿದ್ದ ಗಾಳಿಪಟಗಳು ಒಂದೊಂದಾಗಿ ಕಿತ್ತುಹೋಗಿ ಶೂನ್ಯ ಸೇರಿಕೊಂಡವು. ಯೋಗರಾಜ್ ಭಟ್ಟರು 'ಮುಂಗಾರು ಮಳೆ' ಪ್ರಭಾ ವಲಯದಿಂದ ಹೊರಬರದೆ ಗಾಳಿಪಟ ಹಾರಿಸಿದರೆಯೇ? ಅಥವಾ ನನ್ನಂತಹ ಜನರು 'ಮುಂಗಾರು ಮಳೆ' ಯನ್ನು ಮನಸ್ಸಿನಿಂದ ಕಿತ್ತುಹಾಕದೆ ಗಾಳಿಪಟ ನೋಡಿದೆವೆಯೇ? ಆ 'ಮುಂಗಾರು ಮಳೆ' ಯಲ್ಲಿ ಸುರಿದಿದ್ದ ಸಂಭಾಷಣೆಗಳ ಮಳೆಯು ಹಿತಕರವಾಗಿದ್ದರೆ, 'ಗಾಳಿಪಟ'ದಲ್ಲಿ ಆಡಿಸಿದ್ದ ಸಂಭಾಷಣೆಗಳು ಶೀತ, ನೆಗಡಿ ತಂದವು.

ಯೋಗರಾಜ್ ಭಟ್ಟರಿಗೆ ಏನಾಯಿತು? 'ಮುಂಗಾರು ಮಳೆ' ಚಿತ್ರದ ಅಪೂರ್ವ ಗೆಲುವಿಗೆ ಯಾವ ಅಂಶ ಕಾರಣವಾಯಿತು ಎಂಬುದು ಈಗಲೂ ನನಗೆ ಅರ್ಥವಾಗುತ್ತಿಲ್ಲವೆಂದು ಯೋಗರಾಜ್ ಭಟ್ಟರು ಒಮ್ಮೆ ಹೇಳಿದ್ದರು. ಅದೇ ಗೊಂದಲ, ಜಿಜ್ಞಾಸೆಯಲ್ಲಿ ಭಟ್ಟರು ಆ ಚಿತ್ರದ ಯಶಸ್ವಿಗೆ ಯಾವ್ಯಾವ ಅಂಶಗಳು ಕಾರಣವಾದವೋ ಅವನ್ನೆಲ್ಲಾ ಗಾಳಿಪಟಕ್ಕೆ ಬಲವಂತವಾಗಿ ತೂರಿದಂತೆ ಕಾಣುತ್ತದೆ. ಮುಂಮಳೆಯಲ್ಲಿ ಸಂಭಾಷಣೆಗಳು ಸಾಂದರ್ಭಿಕವಾಗಿ ತಕ್ಕುವಾಗಿದ್ದು ಅದರ ಯಶಸ್ವಿಯಲ್ಲಿ ಪ್ರಮುಖ ಪಾತ್ರವಹಿಸಿದ್ದವು. ಈ ಅಂಶ ಅರಿತ ಯೋಗರಾಜ್ ಭಟ್ಟರು ಗಾಳಿಪಟಕ್ಕೆ ಸಂಭಾಷಣೆಗಳ ಮಳೆಯನ್ನೇ ಸುರಿಸುತ್ತಾರೆ. 'ಮುಂಮ'ದ ಸಂಭಾಷಣೆಗಳನ್ನೇ ಜಗ್ಗಿ ಜಗ್ಗಿ ಎಳೆದು ಗಾಳಿಪಟದ ಸೂತ್ರ ಕಿತ್ತುಬರುವಂತೆ ಮಾಡುತ್ತಾರೆ. ಅಲ್ಲಿಯೇ ಗಾಳಿಪಟ ಗೋತಾ ಹೊಡೆಯಲು ಆರಂಭವಾಗುವುದು. ಡಯಲಾಗ್‌ಗಳನ್ನು ಎಷ್ಟು ಬೇಕೊ ಅಷ್ಟು ಇಟ್ಟುಕೊಂಡಿದ್ದರೆ ಬಹುಶಃ ಗಾಳಿಪಟ ಒಂದು ಪಕ್ಕಾ ಮಕ್ಕಳ ಆಟವಾಗುತ್ತಿತ್ತೇನೊ (ಅಂದರೆ ಮನರಂಜಕವಾಗುತ್ತಿತ್ತು).

'ರಂಗ ಎಸ್ಎಸ್ಎಲ್‌ಸಿ' ಮತ್ತು 'ಮಣಿ' ಚಿತ್ರಗಳೆರಡು ಚೆನ್ನಾಗಿದ್ದೂ ನೆಲಕಚ್ಚಿದಾಗ ನಾನು ಭಯದಿಂದಲೇ 'ಮುಂಗಾರು ಮಳೆ' ಮಾಡಿದೆ. ಅದೇನೋ ಯಶಸ್ವಿಯಾಯಿತು. ಈಗ ಆ ಯಶಸ್ವಿಯನ್ನು ಬೆನ್ನಿಗೆ ಹಾಕಿಕೊಂಡು ಭಯದಿಂದಲೇ 'ಗಾಳಿಪಟ' ಮಾಡಿದ್ದೇನೆ ಎಂದು ಯೋಗರಾಜ್ ಭಟ್ಟರು ಗಾಳಿಪಟ ಹಾರಿಸುವ ಮುನ್ನ ಹೇಳಿಕೊಂಡಿದ್ದರು. ಗಾಳಿಪಟ ಗೋತಾ ಹೊಡೆಯಲು ಈ ಭಯವೇ ಕಾರಣವಾಯಿತೆ? ಈ ಭಯ ಎಂಬ ಪದ ಕೇಳಿದಾಗ ನನಗೆ ತಮಿಳಿನ ಲಿಂಗುಸ್ವಾಮಿ ಎಂಬ ನಿರ್ದೇಶಕ ನೆನಪಿಗೆ ಬರುತ್ತಾರೆ.

'ಗಾಳಿಪಟ' ಚಿತ್ರದ ನಿರ್ಮಾಪಕರೇ ಆದ ಎ.ಎಂ.ರತ್ನಂ ಅವರ ನಿರ್ಮಾಣದಲ್ಲಿ ವಿಕ್ರಮ್ ಎಂಬ ದೊಡ್ಡ ನಾಯಕನಟನಿರುವ 'ಭೀಮಾ' ಎಂಬ ಚಿತ್ರದ ನಿರ್ದೇಶಕ ಈ ಲಿಂಗುಸ್ವಾಮಿ. 'ಸಂಡೈಕೋಳಿ' ಯಂತಹ ಕೆಲವು ಅಮೋಘ ಚಿತ್ರಗಳನ್ನು ನಿರ್ದೇಶಿಸಿದ ಅಪ್ರತಿಮ ಪ್ರತಿಭಾವಂತ ನಿರ್ದೇಶಕ, ಸಂಭಾಷಣೆಕಾರ. ಇಂತಹ ವ್ಯಕ್ತಿಯು ಟಿವಿ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಭಯದ ಬಗ್ಗೆ ಪ್ರಸ್ತಾಪ ನಡೆಸಿದರು. 'ಭೀಮಾ' ಚಿತ್ರ ನಿರ್ಮಾಣವಾಗಲು ತಗುಲಿದ ಸುಮಾರು ಒಂದೂವರೆ ವರ್ಷಗಳಲ್ಲಿ ಪ್ರತಿಯೊಂದು ದಿನವನ್ನೂ ನಾನು ಭಯದಲ್ಲೇ ಕಳೆಯುತ್ತಿದ್ದೆ. ಕುಂತರೂ, ನಿಂತರೂ ನನಗೆ ಭೀಮನೇ ಕಣ್ಣಿಗೆ ಬರುತ್ತಿತ್ತು. ನೆಂಟರ ಮನೆಗಳಿಗೆ ಹೋಗಿ ಸಮಯ ಸವೆಸಿದರೆ ನಾನೆಲ್ಲಿ ಭೀಮನಿಗೆ ಅನ್ಯಾಯ ಮಾಡುತ್ತಿದ್ದೇನೆಯೋ ಎಂಬಂತಹ ಭಯದ ಭಾವನೆಗಳು ಉಂಟಾಗುತ್ತಿದ್ದುವು ಎಂದು ಲಿಂಗುಸ್ವಾಮಿ ಮನಸ್ಸು ಬಿಚ್ಚಿಕೊಂಡಿದ್ದರು. ಅಂತಹ 'ಭೀಮಾ' ಚಿತ್ರ ಇದೀಗ ಸಂಕ್ರಾಂತಿಯಲ್ಲಿ (ಅಂದರೆ ಪೊಂಗಲ್) ಬಿಡುಗಡೆಯಾಯಿತು. ವಿಶಿಷ್ಟ ಕಥಾವಸ್ತು, ವೇಗಭರಿತ ನಿರೂಪಣೆಯ ಚಾಕಚಕ್ಯತೆ ಹೊಂದಿರುವ ಪಕ್ಕಾ ಕಮರ್ಷಿಯಲ್ ನಿರ್ದೇಶಕ ಲಿಂಗುಸ್ವಾಮಿ ಅವರು 'ಭೀಮಾ' ಚಿತ್ರದಲ್ಲಿ ಎಡವಿದರು. ಯೋಗರಾಜ್ ಭಟ್ಟರು 'ಗಾಳಿಪಟ'ದಲ್ಲಿ ಸಂಭಾಷಣೆಗಳ ಬಾಲ ಹಿಡಿದರೆ, ಲಿಂಗುಸ್ವಾಮಿಯವರು 'ಭೀಮಾ'ದಲ್ಲಿ ಹೊಡೆದಾಟಗಳ ಹಾದಿಹಿಡಿದರು. ಹೀಗಾಗಿ ಸಂಭಾಷಣೆಗಳಿಂದಾಗಿ ಗಾಳಿಪಟದ ಬಾಲಂಗೋಚಿ ಕಿತ್ತುಹೋಯಿತು; ಹೊಡೆದಾಟಗಳಿಂದಾಗಿ ಭೀಮಾ ಶಕ್ತಿ ಕುಂದಿಹೋಯಿತು. ಹಾಗಿದ್ದರೆ ಯೋಗರಾಜ್ ಭಟ್ಟರು ಮತ್ತು ಲಿಂಗುಸ್ವಾಮಿಯವರು ಸೋಲಲು ಕಾರಣ ಅವರ ಮನಸ್ಸಿನೊಳಗೆ ಆವರಿಸಿದ್ದ ಭಯವೇ?

ತುಣುಕು ಅನುಮಾನ: ಯೋಗರಾಜ್ ಭಟ್ಟರು ಮತ್ತೊಬ್ಬ ಉಪೇಂದ್ರ ಆಗಲಿದ್ದಾರೆಯೇ? ಉಪೇಂದ್ರ ಅವರು 'ಶ್', 'ಓಂ' ಮತ್ತು 'ಎ' ಚಿತ್ರಗಳನ್ನು ನಿರ್ದೇಶಿಸಿದಾಗ ಅವರೊಬ್ಬ ವಿಶಿಷ್ಟ ಹಾಗೂ ಸೃಜನಶೀಲ ನಿರ್ದೇಶಕ ಎಂದು ಹೆಸರು ಪಡೆದರು. ಆನಂತರ 'ಉಪೇಂದ್ರ' ಚಿತ್ರ ಮಾಡಿದರು. ಚಿತ್ರವೇನೋ ಭರ್ಜರಿ ಯಶಸ್ವಿಯಾಯಿತಾದರೂ ಎಲ್ಲೋ ಒಂದು ಕಡೆ ಉಪೇಂದ್ರರವರು ಸೃಜನಶೀಲತೆ ಕಳೆದುಕೊಂಡರೇನೋ ಎಂಬಂತೆ ಭಾಸವಾಯಿತು. 'ಆಪರೇಷನ್ ಅಂತ' ಬಂದ ನಂತರ ಇದು ಬಹುತೇಕ ಖಚಿತವಾಯಿತು. ಈಗ ಉಪೇಂದ್ರ ಅವರು ನಿರ್ದೇಶನದ ಗೊಡವೆಯೇ ಬಿಟ್ಟು ಮೈ ಬೆಳೆಸಿಕೊಂಡು ಹೀರೋ ಆಗಿಬಿಟ್ಟಿದ್ದಾರೆ. ಯೋಗರಾಜ್ ಭಟ್ಟರು ಉಪೇಂದ್ರರಂತೆಯೇ ಎಲ್ಲೋ ಸೃಜನಶೀಲತೆ ಕಳೆದುಕೊಳ್ಳುತ್ತಿದ್ದಾರೇನೋ ಎಂಬ ಸಣ್ಣ ಭಯ ನಮಗೆ ಕಾಡುತ್ತದೆ.

Labels: ,

Friday, January 18, 2008

ಚೆನ್ನೈ ಸಂಗಮಮ್ - ಒಂದು ವಿಹಂಗಮ

ಜಾನಪದ ನೃತ್ಯಪಟುಗಳು, ಶಾಸ್ತ್ರೀಯ ಸಂಗೀತಗಾರರು, ಸಂಗೀತ ವಾದಕರು ಸೇರಿದಂತೆ ಸಾವಿರಾರು ಕಲಾವಿದರು ನಗರದಲ್ಲಿ ಏಕಕಾಲಕ್ಕೆ ವಿವಿಧ ಸ್ಥಳಗಳಲ್ಲಿ ಏಳು ದಿನಗಳ ಕಾಲ ಕಾರ್ಯಕ್ರಮ ನೀಡುವ ಸಂಗತಿ ಹೇಗಿರುತ್ತದೆ? ಹಾಗೆಯೇ ಆ ಎಲ್ಲ ಸ್ಥಳಗಳಲ್ಲಿ ರಾಜ್ಯದ ಬೇರೆ ಬೇರೆ ಭಾಗಗಳ ವಿಶೇಷ ಭಕ್ಷ್ಯಗಳು ದೊರೆತರೆ ಹೇಗಿರುತ್ತದೆ? ಅಮೋಘ ಅಲ್ಲವೆ?

ಚೆನ್ನೈನಲ್ಲಿ ಈ ರೀತಿಯ ಒಂದು ಕಾರ್ಯಕ್ರಮ ಪೊಂಗಲ್ ಉತ್ಸವಕ್ಕಾಗಿ ಮೈದಳೆದು ಬೆಳೆಯುತ್ತಿದೆ. 'ಚೆನ್ನೈ ಸಂಗಮಮ್' ಎಂಬ ಈ ಕಾರ್ಯಕ್ರಮವನ್ನು ಒಂದು ಉತ್ಸವವೆಂದೇ ಹೇಳಬಹುದು. "ತಿರುವಿಳಾ ನಮ್ಮ ತೆರು ವಿಳಾ" ಎಂದು ಹೇಳಿಕೊಂಡು ಎರಡನೇ ವರ್ಷಕ್ಕೆ ಅಡಿಯಿಟ್ಟ ಚೆನ್ನೈ ಸಂಗಮಮ್ ಜನವರಿ 11 ರಿಂದ 18 ರವರೆಗೆ ಎಂಟು ದಿನಗಳ ಕಾಲ ಭರಪೂರವಾಗಿ ಪ್ರದರ್ಶನಗೊಂಡಿತು. ಚೆನ್ನೈನ ವಿವಿಧೆಡೆ ಹದಿನೆಂಟು ಸ್ಥಳಗಳಲ್ಲಿ ಒಂದು ವಾರ ಕಾಲ ಕಲಾವಿದರು ನೀಡಿದ ಪ್ರದರ್ಶನಕ್ಕೆ ಜನರ ಪ್ರತಿಕ್ರಿಯೆ ಕೂಡ ಉತ್ತಮವಾಗಿತ್ತು. ಕೊನೆಯ ದಿನ ಅಂದರೆ ಜನವರಿ 18 ರಂದು ಬೆಸೆಂಟ್ ನಗರದಲ್ಲಿರುವ ಎಲಿಸ್ ಬೀಚ್‌ನಲ್ಲಿ ಕಾರ್ಯಕ್ರಮದ ಸಮಾರೋಪ ರಮಣೀಯವಾಗಿತ್ತು. ವಿವಿಧ ಜಾನಪದ ನೃತ್ಯ, ಮಕ್ಕಳ ನೃತ್ಯಗಳು ಮನಸೆಳೆದವು. ಕಾರ್ಯಕ್ರಮವನ್ನು ತನ್ಮಯವಾಗಿ ವೀಕ್ಷಿಸುತ್ತಿರುವಾಗಲೇ ಆಗಸದಲ್ಲಿ ಚಿತ್ತಾರ ಮೂಡಿಸುವ ಪಟಾಕಿಗಳು ಸಿಡಿಯತೊಡಗಿದವು. ಇದು ಒಂದೆರಡು ನಿಮಿಷಗಳವೆರೆಗೆ ಖುಷಿಗಾಗಿ ಪಟಾಕಿ ಹಚ್ಚಿಸಿರಬಹುದೆಂಬ ನಿರೀಕ್ಷೆಯಲ್ಲಿ ನಾವಿದ್ದರೆ ಆಗ ನಡೆದಿದ್ದೇ ಬೇರೆ. ಅರ್ಧ ಗಂಟೆ ನಿರಂತರವಾಗಿ ಆಕಾಶದ ತುಂಬ ಬಣ್ಣ ಬಣ್ಣದ ವಿನ್ಯಾಸಗಳು ಕಾಣತೊಡಗಿದವು. ಆ ಪಟಾಕಿಯ ಸ್ಫೋಟ ಮತ್ತು ಅದು ಆಗಸದಲ್ಲಿ ಮೂಡಿಸುತ್ತಿದ್ದ ವಿವಿಧ ಆಕಾರಗಳ ಚಿತ್ತಾರಗಳಿಗೆ ನಾವು ಶಿಳ್ಳೆ ಹಾಕದೇ ಇರಲಾಗಲಿಲ್ಲ.

ಇದಷ್ಟೇ ಅಲ್ಲದೆ ಆ ಎಂಟು ದಿನಗಳೂ ಜನರಿಗೆ ತಮಿಳುನಾಡಿನ ವಿವಿಧ ಪ್ರದೇಶದ ಭೋಜನಗಳನ್ನು ಸವಿಯುವ ಅವಕಾಶ. ಮಧುರೈ, ವಿರುದನಗರ, ಕಾರೈಕ್ಕುಡಿ (ಚೆಟ್ಟಿನಾಡು), ಕನ್ಯಾಕುಮಾರಿ ಮುಂತಾದೆಡೆ ಸಿಗುವ ವಿಶೇಷ ತಿಂಡಿ, ತಿನಿಸುಗಳನ್ನು ದೊರೆತವು. ಸಾವಿರಕ್ಕೂ ಮೇಲ್ಪಟ್ಟ ಸಂಖ್ಯೆಯಲ್ಲಿ ಕಲಾವಿದರು ಜನರ ಮಧ್ಯೆ ಬೀದಿ ಬೀದಿಗಳಲ್ಲಿ ಪ್ರದರ್ಶನ ನೀಡುವಾಗ ಎಲ್ಲಿಯೂ ಗಲಭೆಗಳು, ಬೀದಿ ಕಾಳಗಗಳು ನಡೆಯಲಿಲ್ಲ.

ಕಳೆದ ವರ್ಷ ಚೆನ್ನೈ ಸಂಗಮಮ್‌ನ ಆರಂಭೋತ್ಸವವಾಗಿತ್ತು (ಫೆಬ್ರವರಿ 20, 2007 ರಂದು ಉದ್ಘಾಟನೆಗೊಂಡಿತು). ಆ ವರ್ಷ ಉತ್ಸವ ಇನ್ನೂ ಹೆಚ್ಚು ಮನಮೋಹಕವಾಗಿತ್ತು. ಜಾನಪದ ನೃತ್ಯ ಕಲಾವಿದರ ತಂಡವೊಂದು ನಿಮ್ಮ ಆಫೀಸು ಅಥವಾ ಮನೆಬೀದಿಯಲ್ಲಿ ದಿಢೀರನೇ ಪ್ರತ್ಯಕ್ಷಗೊಂಡು ಪ್ರದರ್ಶನ ನೀಡಿದರೆ ನಿಮಗೆ ಸಖೇದಾಶ್ಚರ್ಯವಾಗದೇ ಇರುತ್ತದೆಯೇ? ಕಳೆದ ವರ್ಷ ಹೀಗೆಯೇ ಜಾನಪದ ಕಲಾವಿದ ತಂಡಗಳು ನಗರದಲ್ಲಿರುವ ಹಲವಾರು ಸ್ಥಳಗಳಿಗೆ ದಿಢೀರ್ ಭೇಟಿ ನೀಡಿ ಸಾಂಸ್ಕೃತಿ, ಜಾನಪದ ನೃತ್ಯ ಕಾರ್ಯಕ್ರಮಗಳನ್ನು ನೀಡಿ ದಿಢೀರನೇ ಮಾಯವಾಗುತ್ತಿದ್ದವು.

ರಾಜಕೀಯ: ವಾಸ್ತವಿಕವಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಚೆನ್ನೈ ಸಂಗಮಮ್ ಹೆಚ್ಚು ರಸವಸತ್ತಾಗಿರಲಿಲ್ಲ. ಕಾರಣ ರಾಜಕೀಯ. ಒಂದು ಒಳ್ಳೆಯ ಕೆಲಸಕ್ಕೆ ರಾಜಕೀಯ ಮೆತ್ತಿಕೊಂಡರೆ ಅದು ರಾಡಿಯಾಗುತ್ತದೆ ಎಂಬುದಕ್ಕೆ ಸಾಕ್ಷಿ ಚೆನ್ನೈ ಸಂಗಮಮ್. ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿಯವರ ಮುಂದಾಳತ್ವದಲ್ಲಿ ಡಿಎಂಕೆ ಪಕ್ಷದ ಪೋಷಣೆಯಲ್ಲಿ ಈ ಉತ್ಸವ ಚಾಲನೆಗೆ ಬಂತು. ಆರಂಭಗೊಂಡ ವರ್ಷದಲ್ಲಿ ಕಲಾವಿದರು ಬಲು ಉತ್ಸಾಹದಿಂದ ಪಾಲ್ಗೊಂಡರು. ಆದರೆ ಆ ಕಲಾವಿದರಿಗೆ ಸಲ್ಲಬೇಕಿದ್ದ ಸಂಭಾವನೆಗಳನ್ನು ಸರ್ಕಾರ ಸರಿಯಾಗಿ ನೀಡಲಿಲ್ಲ. ಇದರ ಫಲವಾಗಿ ಕಲಾವಿದರ ಉತ್ಸಾಹ ಕುಗ್ಗಿತಲ್ಲದೇ ಈ ವರ್ಷ ಅವದ್ದು ಕಡಿಮೆ ಸಂಖ್ಯೆಯಿತ್ತು. ಸರ್ಕಾರ ಈ ಉತ್ಸವಕ್ಕಾಗಿ ಸುಮಾರು 10 ಕೋಟಿ ರು ಖರ್ಚಿನ ಲೆಕ್ಕ ನೀಡುತ್ತದೆ. ಆದರೆ ವಾಸ್ತವವಾಗಿ ಖರ್ಚಾಗುವುದು 2 ಕೋಟಿ ರುಪಾಯಿಗಳಷ್ಟೇ. ಮಿಕ್ಕಿದ್ದು ಮಾಮೂಲಿಯಾಗಿ ಬೇರೆ ಬೇರೆ ಗುಡಾಣ ಹೊಟ್ಟೆಗಳಿಗೆ ಹೋಗುತ್ತದೆ.

ಚೆನ್ನೈ ನಗರದ ಮೇರು ಪ್ರದರ್ಶನವಾಗಬೇಕಿದ್ದ ಚೆನ್ನೈ ಸಂಗಮಮ್ ಇದೀಗ ಡಿಎಂಕೆಯ ಪ್ರದರ್ಶನವೆಂದು ಹೆಸರು ಪಟ್ಟಿ ಪಡೆದುಕೊಂಡಿದೆ. ಕರುಣಾನಿಧಿಯವರ ಪುತ್ರಿ ಕನಿಮೊಳಿ ಅವರು ಚೆನ್ನೈ ಸಂಗಮಮ್‌ನ ಸಂಚಾಲಕಿ. ಸ್ಟ್ಯಾಲಿನ್ ಹೆಚ್ಚೂ ಕಡಿಮೆ ಇದರ ಬೆಂಗಾವಲು. ಸರ್ಕಾರೇತರ ಸಂಸ್ಥೆಯಾದ ತಮಿಳ್ ಮೈಯಂ ಎಂಬುದು ಚೆನ್ನೈ ಸಂಗಮಮ್ ಉತ್ಸವದ ಉಸ್ತುವಾರಿ ನೋಡಿಕೊಳ್ಳುತ್ತದೆ. ಆದರೆ ತಮಿಳ್ ಮೈಯಂ ಸಂಸ್ಥೆಯ ಮುಖ್ಯಸ್ಥ ಜಗತ್ ಗ್ಯಾಸ್ಪರ್ ರಾಜ್ ಅವರು ಎಲ್‌ಟಿಟಿಇಯೊಂದಿಗೆ ಶಾಮೀಲಾಗಿದ್ದಾರೆಂಬುದು ಎಲ್ಲೆಡೆ ಇರುವ ವದಂತಿ. ಈ ಹಿನ್ನೆಲೆಯಲ್ಲಿ ಜಯಲಲಿತಾ ನೇತೃತ್ವದ ಏಐಏಡಿಎಂಕೆ ಪಕ್ಷದಿಂದ ಚೆನ್ನೈ ಸಂಗಮಮ್ ಉತ್ಸವಕ್ಕೆ ತೀವ್ರ ಆಕ್ಷೇಪವಿದೆ. ಕರುಣಾನಿಧಿ ಕೆಳಗಿಳಿದು ಅಮ್ಮಾ ಅಧಿಕಾರಕ್ಕೆ ಏರಿದರೆ ಖಂಡಿತ ಈ ಉತ್ಸವ ರದ್ದಾಗುತ್ತದೆ. ಉತ್ತಮ ಪರಿಕಲ್ಪನೆಯ ಒಂದು ಉತ್ಸವ ಇನ್ನು ಮುಂದೆ ನಿಷ್ಕಳಂಕವಾಗಿ ಇರುವಂತೆ ಮಾಡಲು ರಾಜಯಕೀಯ ಪಕ್ಷಗಳು ಸ್ವಹಿತಾಸಕ್ತಿಯನ್ನು ಬದಿಗೊತ್ತಿ ಕಾರ್ಯವಹಿಸಬೇಕು.

Labels: ,

Saturday, January 05, 2008

ಕನ್ನಡಿಗರಿಂದ ಕನ್ನಡದ ಕಗ್ಗೊಲೆಯಾಗಬೇಕೆ?

ಹಲವಾರು ಕಂಪನಿಗಳು ತಮ್ಮ ಉತ್ಪನ್ನಗಳನ್ನು ಮತ್ತು ಅವುಗಳ ಜಾಹೀರಾತುಗಳನ್ನು ಸ್ಥಳೀಯ ಭಾಷೆಗಳಲ್ಲಿ ನಡೆಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಸಹಜವಾಗಿಯೇ ಕನ್ನಡದಲ್ಲಿಯೂ ಸಾಕಷ್ಟು ಸರಕುಗಳು ತಯಾರಾಗುತ್ತಿವೆ. ಅಂದರೆ, ಕನ್ನಡದ ಬಳಕೆ ಹಿಂದೆಂದಿಗಿಂತಲೂ ವ್ಯಾಪಕವಾಗುತ್ತಿದೆ. ಈ ಸ್ಥಿತಿಗೆ ಕನ್ನಡ ಭಾಷೆ ಸಿದ್ಧವಿದೆಯೇ ಅಥವಾ ಕನ್ನಡಿಗರು ಇದಕ್ಕೆ ಸನ್ನದ್ಧರಾಗಿದ್ದಾರೆಯೇ? ಉತ್ತರ ಸ್ವಲ್ಪ ಕಷ್ಟವೇ. ಕನ್ನಡ ಭಾಷೆಯೇನೋ ಸಿದ್ಧವಿದೆ. ಆದರೆ ಕನ್ನಡ ಭಾಷೆಗೆ ಸಾಕಷ್ಟು ಕನ್ನಡಿಗರು ಸಿದ್ಧರಿಲ್ಲವೆನ್ನುವುದು ಸತ್ಯ.

ಆಂಗ್ಲ ಭಾಷೆಯಿಂದ ಬಹಳಷ್ಟು ವಿಷಯಗಳು ಕನ್ನಡಕ್ಕೆ ಭಾಷಾಂತರಗೊಳ್ಳುತ್ತಿವೆ. ಇವುಗಳಲ್ಲಿ ತಂತ್ರಜ್ಞಾನ, ಕಾನೂನು, ಕಂಪನಿ ವ್ಯವಹಾರ ಮುಂತಾದ ಕ್ಷೇತ್ರಗಳ ವಿಷಯಗಳೇ ಹೆಚ್ಚಾಗಿವೆ. ದುರದೃಷ್ಟವಶಾತ್, ನಮ್ಮಲ್ಲಿ ಈ ಕ್ಷೇತ್ರಗಳಿಗೆ ಸಂಬಂಧಿಸಿದ ಸಾಹಿತ್ಯ ಬೇಕಷ್ಟಿಲ್ಲ. ಜೊತೆಗೆ ನುರಿತ ಅನುವಾದಕರ ಅತೀವ ಕೊರತೆ ಕಾಡುತ್ತಿದೆ. ಆಂಗ್ಲ ಭಾಷೆ ಮತ್ತು ಕನ್ನಡ ಭಾಷೆ ಎರಡೂ ಸರಿಯಾಗಿ ತಿಳಿಯದ ಹಾಗೂ ಭಾಷಾಂತರ ಎಂದರೇನೆಂದೇ ಅರಿಯದ ವ್ಯಕ್ತಿಗಳ ಕೈಯಲ್ಲಿ ಕನ್ನಡ ನಲುಗುತ್ತಿದೆ.

ಕೆಲವು ವರ್ಷಗಳ ಹಿಂದೆ ಮೈಕ್ರೋಸಾಫ್ಟ್ ಕಂಪನಿಯವರು ತಮ್ಮ ವಿಂಡೋಸ್ ಸಾಫ್ಟ್‌ವೇರ್‌ನ ಒಂದು ಆವೃತ್ತಿಯನ್ನು ಕನ್ನಡವೂ ಸೇರಿದಂತೆ ಭಾರತೀಯ ಭಾಷೆಗಳಲ್ಲಿ ತರಲು ಮುಂದಾಗಿತ್ತು. ಆದರೆ ಅದರ ಕನ್ನಡ ಆವೃತ್ತಿಯ ಕೆಟ್ಟ ಗುಣಮಟ್ಟ ಬೆಳಕಿಗೆ ಬಂದು ಒಂದು ವಿವಾದವೇ ಸೃಷ್ಟಿಯಾಗಿತ್ತು. ಮೈಕ್ರೋಸಾಫ್ಟ್ ವಿರುದ್ಧ ಟೀಕಾ ಪ್ರಹಾರ ನಡೆದವು. ಆಗ ಕರ್ನಾಟಕದಲ್ಲಿ ಮಾಹಿತಿ ತಂತ್ರಜ್ಞಾನ ಅಳವಡಿಕೆಗೆ ಮೈಕ್ರೋಸಾಫ್ಟ್‌ವೊಂದಿಗೆ ಕರ್ನಾಟಕ ಸರ್ಕಾರ ಒಪ್ಪಂದ ಮಾಡಿಕೊಳ್ಳಲು ಮುಂದಾಗಿತ್ತಾದ್ದರಿಂದ ಕರ್ನಾಟಕ ಸರ್ಕಾರದ ವಿರುದ್ಧವೂ ಪ್ರತಿಭಟನೆ ನಡೆಸಲಾಯಿತು. ಕೊನೆಗೆ, ಮೈಕ್ರೋಸಾಫ್ಟ್ ತನ್ನ ವಿಂಡೋಸ್‌ನ ಕನ್ನಡ ಆವೃತ್ತಿಯ ಬಿಡುಗಡೆಯನ್ನು ರದ್ದುಗೊಳಿಸಿತು.

ಮೈಕ್ರೋಸಾಫ್ಟ್, ಯಾಹೂ, ಗೂಗಲ್ ಮೊದಲಾದ ಪ್ರತಿಷ್ಠಿತ ಕಂಪನಿಗಳ ಜನಪ್ರಿಯತೆಯಿಂದಾಗಿ ಜನರು ಅವುಗಳಿಂದ ಅತ್ಯುತ್ತಮ ಗುಣಮಟ್ಟದ ಉತ್ಪನ್ನಗಳನ್ನು ನಿರೀಕ್ಷಿಸುತ್ತಾರೆ. ಅದರ ಮೂಲ ಸಾಫ್ಟ್‌ವೇರ್ ಆಗಲೀ ಅಥವಾ ಅದರ ಸ್ಥಳೀಯ ಭಾಷಾ ಆವೃತ್ತಿಯಾಗಲೀ ಜನರಿಗೆ ಆ ಕಂಪನಿಗಳ ಬ್ರ್ಯಾಂಡ್ ಅಷ್ಟೇ ಕಣ್ಮುಂದೆ ಇರುತ್ತದೆ. ಹಾಗಾಗಿ, ಮೈಕ್ರೋಸಾಫ್ಟ್‌ನಿಂದ ಅತ್ಯುಚ್ಚ ಕನ್ನಡ ಆವತ್ತಿಯನ್ನು ನಿರೀಕ್ಷಿಸುವ ಜನರು ಇದಕ್ಕೆ ಬದಲಾಗಿ ಕಳಪೆ ಗುಣಮಟ್ಟ ಕಂಡಾಗ ಅತೀವ ನಿರಾಶೆಗೊಳ್ಳುವುದು ಸಹಜವೇ.

ಮೈಕ್ರೋಸಾಫ್ಟ್ ಕಂಪನಿಯು ಕನ್ನಡ ಅರಿಯದ ಒಂದು ಕಂಪನಿ ಎಂದು ನಾವು 'ಹೋಗಲಿ, ಪರವಾಗಿಲ್ಲ' ಎನ್ನಬಹುದು. ಕನ್ನಡಿಗರದ್ದೇ ಆದ ಕರ್ನಾಟಕ ಸರ್ಕಾರವೇ ಕನ್ನಡದ ಬಗ್ಗೆ ದಿವ್ಯ ನಿರ್ಲಕ್ಷ್ಯ ತೋರುವುದು ಎಷ್ಟು ಸರಿ?! ಸರ್ಕಾರದ ಉಸ್ತುವಾರಿಯಲ್ಲಿ ನಡೆಯುವ ಶಾಲೆ, ಕಾಲೇಜುಗಳ ಕನ್ನಡ ಪಠ್ಯ ಪುಸ್ತಕಗಳು ಸಾಕಷ್ಟು ಉತ್ತಮ ಗುಣಮಟ್ಟದಲ್ಲಿರುತ್ತವೆ ಎಂಬುದು ಒಪ್ಪಬೇಕಾದ ಮಾತು. ನುಡಿ ಮುಂತಾದ ಸರ್ಕಾರೀ ಪ್ರಾಯೋಜಿತ ತಂತ್ರಾಂಶಗಳಲ್ಲಿಯೂ ಕನ್ನಡದ ಗುಣಮಟ್ಟ ತಕ್ಕಮಟ್ಟಿಗೆ ಪರವಾಗಿಲ್ಲವೆಂದೇ ಹೇಳಬಹುದು. ಆದರೆ ಇತ್ತೀಚಿನ ಮಾಹಿತಿ ತಂತ್ರಜ್ಞಾನದ ಭರಪೂರದಲ್ಲಿ ಕನ್ನಡವನ್ನು ಹಿಡಿದಿಡಲು ಸರ್ಕಾರ ವಿಫಲವಾಗುತ್ತಿದೆ ಅಥವಾ ನಿರ್ಲಕ್ಷ್ಯ ತೋರುತ್ತಿದೆ. ಇದಕ್ಕೆ ಉದಾಹರಣೆಗಳು ಸಾಕಷ್ಟಿವೆ. ರಾಷ್ಟ್ರೀಯ ಜ್ಞಾನ ಆಯೋಗದ (National Knowledge Commission) ವೆಬ್‌ಸೈಟ್‌ನ ಕನ್ನಡ ಆವತರಣಿಕೆಗೆ (http://knowledgecommission.gov.in/kannada/default.asp) ಒಮ್ಮೆ ಭೇಟಿಕೊಟ್ಟು ನೋಡಿ.

ರಾಷ್ಟ್ರೀಯ ಜ್ಞಾನ ಆಯೋಗವು ಭಾಷೆಯ ಅವಶ್ಯಕತೆ ಕುರಿತು ಭಾರತೀಯ ಪ್ರಧಾನಿಗೆ ಬರೆದ ಪತ್ರವೊಂದರ ಕನ್ನಡ ತರ್ಜುಮೆಯನ್ನು ನೀವು ಆ ವೆಬ್‌ಸೈಟ್‌ನಲ್ಲಿ ನೋಡಬಹುದು. ಹಾಗೆಯೇ ಆಂಗ್ಲ ಅವತರಣಿಕೆಗೆ http://knowledgecommission.gov.in/downloads/recommendations/TranslationLetterPM.pdf ಗೆ ಹೋಗಿ ಎರಡನ್ನೂ ಹೋಲಿಸಿ ನೋಡಿ. ಇಲ್ಲಿರುವ ಕನ್ನಡ ಭಾಷಾಂತರ ತೀರಾ ಹೇಸಿಗೆ ಎನಿಸುತ್ತದೆ.

ಉದಾಹರಣೆಗೆ ಕೆಳಗಿರುವ ಪಠ್ಯವನ್ನು ಓದಿರಿ....

"ಭಾಷಾಂತರಕ್ಕೆ ಹಲವಾರು ಸಲಕರಣೆಗಳನ್ನು ಸೃಷ್ಠಿಸುವುದು ಮತ್ತು ಉಳಿಸಿಕೊಳ್ಳುವುದು, ಈ ಕೆಳಗಿನ ಅಂಕೀಯ ಸಲಕರಣೆಗಳು ಒಳಗೊಂಡಂತೆ, ಸಮಾನಾರ್ಥಕ ಮತ್ತು ವಿರುದ್ಧಾರ್ಥಕ ಪದಕೋಶ, ದ್ವಿಭಾಷಾ ಪದಕೋಶಗಳು ಮತ್ತು ಭಾಷಾಂತರಕ್ಕೆ ಮೆದುಸರಕು. ಇದರೊಟ್ಟಿಗೆ ಯಂತ್ರ ಭಾಷಾಂತರ ಸನ್ನೆ ಬಳಕೆಯ ಹೊರಹೊಮ್ಮುತ್ತಿರುವ ತಂತ್ರಜ್ಞಾನವನ್ನು ತುಲನಾತ್ಮಕವಾದ ಕಡಿಮೆ ದರದಲ್ಲಿ ವೇಗವಾದ ಮತ್ತು ಬೃಹತ್ ಭಾಷಾಂತರ ಸಂಪುಟಗಳನ್ನು ಒದಗಿಸುವ ಉದ್ದೇಶದಿಂದ ಬೆಂಬಲಿಸುವುದು."

ಏನಾದರೂ ಅರ್ಥವಾಯಿತೆ? ಇದನ್ನು ಓದುವುದು ಅರ್ಥವಿಲ್ಲದ್ದು ಎಂದು ಮಾತ್ರ ನಿಮಗೆ ಅರ್ಥವಾಗಿರಬೇಕು. ಆ ಪಠ್ಯದ ಮೂಲ ಆಂಗ್ಲ ಪಠ್ಯ ಇಲ್ಲಿದೆ ಓದಿ....

"Create and maintain various tools for translation, including digital tools like Thesauri, Bilingual Dictionaries and software for translation. In addition, promote machine translation, leveraging emerging technologies to provide rapid and large volume of translation at a relatively low cost."

ಕನ್ನಡದಲ್ಲಿ ಇಂತಹ ಕಚಡ ಸರಕುಗಳನ್ನು ತುರುಕುವ ಬದಲು ಹಾಗೆಯೇ ಆಂಗ್ಲ ಭಾಷೆಯಲ್ಲಿಯೇ ಬಿಟ್ಟರೆ ಒಳ್ಳೆಯದಲ್ಲವೆ! ಮೊದಲನೆಯ ವಾಕ್ಯದಲ್ಲಿ ಅಲ್ಪವಿರಾಮದ ನಂತರ ಬರುವ ಪಠ್ಯವನ್ನು ತೀರಾ ಬಾಲಿಶ ಎಂದು ಹೇಳಬಹುದು. 'software' ಪದಕ್ಕೆ 'ಮೆದುಸರಕು' ಎಂದು ಯಥಾವತ್ ಅನುವಾದ ಮಾಡಿ ಕನ್ನಡಾಭಿಮಾನ ಮೆರೆದ ಅನುವಾದಕರನ್ನು ಕೊಂಡಾಡಬೇಕು. ಎರಡನೇ ವಾಕ್ಯದ ಬಗ್ಗೆ ಏನೂ ಹೇಳದಿರುವುದೇ ಲೇಸು. ಜ್ಞಾನ ಆಯೋಗದ ಈ ಅಜ್ಞಾನಕ್ಕೆ ಏನೆಂದು ಹೇಳುವುದು?

ಕನ್ನಡ ಅನುವಾದಕರಾಗಿ ಕೆಲಸ ಮಾಡುವ ಮಂದಿ ತಾವು ಕನ್ನಡಕ್ಕಾಗಿ ಕೆಲಸ ಮಾಡುತ್ತಿದ್ದೇವೆ ಎಂದು ನೆನಪಿಟ್ಟುಕೊಂಡರೆ ಒಳ್ಳೆಯದು. ಅವರು ಬಳಸುವ ಕನ್ನಡವೇ ಮುಂದಿನ ಪೀಳಿಗೆಯ ಕನ್ನಡಿಗರಿಗೆ ಮಾದರಿಯಾಗುವ ಸಾಧ್ಯತೆಗಳೂ ಇವೆ. ಪಠ್ಯ ಪುಸ್ತಕ, ಬಳಕೆದಾರ ಕೈಪಿಡಿಗಳು, ತಂತ್ರಾಂಶಗಳು ಇತ್ಯಾದಿಗಳೆಡೆಯಲ್ಲಿ ಬಳಸಲಾಗುವ ಕನ್ನಡದ ಗುಣಮಟ್ಟವನ್ನು ಪರಿಶೀಲಿಸಲು ಒಂದು ಮಾನದಂಡ ನಿರ್ಮಾಣವಾಗಬೇಕು. ತಮಿಳು, ಮಲಯಾಳಂ ಮತ್ತು ತೆಲುಗು ಭಾಷೆಗಳಲ್ಲಿ ಕಾನೂನು, ತಂತ್ರಜ್ಞಾನ, ತಂತ್ರಾಂಶ ಇತ್ಯಾದಿ ಕ್ಷೇತ್ರಗಳ ಬಗ್ಗೆ ಸಾಕಷ್ಟು ಸಾಹಿತ್ಯಗಳಿವೆ. ಆದರೆ ಕನ್ನಡದಲ್ಲಿ ಇವು ತೀರಾ ದುರ್ಲಭ. ಕತೆ ಕವನ, ಕಾದಂಬರಿ, ವಿಮರ್ಶೆ, ಗ್ರಂಥ ಮೊದಲಾದ ವಿಷಯಗಳಲ್ಲಿ ನಾವು ಸಾಕಷ್ಟು ಹಾಗೂ ಉಚ್ಚತಮ ಸಾಹಿತ್ಯಗಳನ್ನು ಸೃಷ್ಟಿಸುತ್ತಿದ್ದೇವೆ. ಆದರೆ ಮೇಲೆ ಹೇಳಿದ ಪರ್ಯಾಯ ಸಾಹಿತ್ಯಗಳು ಮುಂದಿನ ತಲೆಮಾರನ್ನು ಪ್ರಭಾವಿಸುವ ಶಕ್ತಿಹೊಂದಿರುವುದರಿಂದ ಅವುಗಳತ್ತ ಸಾಹಿತ್ಯ ಹಾಗೂ ತಂತ್ರಜ್ಞಾನ ನುರಿತರ ಮುತುವರ್ಜಿ ಬಿದ್ದರೆ ಒಳ್ಳೆಯದು. ಇಲ್ಲದಿದ್ದರೆ ಕನ್ನಡದ ಕಗ್ಗೊಲೆಯನ್ನು ಕನ್ನಡಿಗರೇ ಮಾಡುವಂತಾಗುತ್ತದೆ.

Labels: ,