Tuesday, April 17, 2007

ಸೊರಗಿದ ಚಿತ್ರಜಗತ್ತಿಗೆ 'ಮುಙ್ಗಾರು ಮಳೆ'

ಕನ್ನಡ ಸಾರಥಿ ಪುನರಾಗಮನ. ಇಷ್ಟು ದಿನ ಇವ ಎಲ್ಲಿ ಹೋಗಿದ್ದ ಅನ್ತ ಅಕಸ್ಮಾತ್ ಯಾರದ್ದಾದ್ರೂ ಪ್ರಶ್ನೆ ಇದ್ರೆ ಅದಕ್ಕೆ ನನ್ನ ಉತ್ತರ ಕೇವಲ ಮೌನ. ಕನ್ನಡ ಸಾರಥಿ ಅನ್ದರೆ ಚೆನ್ನೈನಲ್ಲಿ ಮಳೆಗಾಲದಲ್ಲಿ ಆಗಾಗ ಇಣುಕಿ ಹೋಗುವ ಮಳೆ ಇದ್ದ ಹಾಗೆ. ಒನ್ದು ಸಾಧಾರಣ ಮಳೆ ಬಿದ್ದರೆ ಇಡೀ ಚೆನ್ನೈ ನಗರವೇ ನೀರಲ್ಲಿ ಮುಳುಗುವನ್ತೆ ಕನ್ನಡ ಸಾರಥಿಯೂ ಕೂಡ. ಬ್ಲಾಗಲ್ಲಿ ಒನ್ದು ಪೋಸ್ಟು ಹಾಕಿಬಿಟ್ಟರೆ ಅದರಲ್ಲೇ ಮುಳುಗಿಹೋಗುವ ನಿಸರ್ಗದತ್ತ ಜಾಯಮಾನ ಆತನದ್ದು.

ಇಷ್ಟು ದಿನ ಬಿಟ್ಟು ಈಗ ದಿಢೀರನೇ ಮತ್ತೆ ಬ್ಲಾಗು ಪ್ರಾರಮ್ಭಿಸೋಕೆ ಕಾರಣ ಮುಙ್ಗಾರು ಮಳೆ. ಯಾವ ಮಳೆ? ಗೊನ್ದಲವಾಯಿತೆ? ಮೇಲೆ ನಾನು ಬರೆದವಲ್ಲಿನ ಕೆಲವು ಅಕ್ಷರಗಳ ಕೂಡಿಕೆ ಸ್ವಲ್ಪ ವ್ಯತ್ಯಾಸವಾಗಿಯೋ ಅಥವಾ ಅಭಾಸವಾಗಿಯೋ ನಿಮಗೆ ಕಾಣುತ್ತಿರಬಹುದು. ಕನ್ನಡದಲ್ಲಿ ಅನುಸ್ವಾರವಾದ 'ಅಂ' ಅನ್ನು ಬಳಸಬಾರದು. ಅದಕ್ಕೆ ಬದಲಾಗಿ ಅನುನಾಸಿಕ ಅಕ್ಷರಗಳಾದ 'ಙ', 'ಞ', 'ಣ', 'ನ' ಮತ್ತು 'ಮ' ಅಕ್ಷರಗಳನ್ನು ಬಳಸಬೇಕು ಎಮ್ಬ ಒನ್ದು ವಾದ ಆಗಾಗ ಇಣುಕಿ ಮರೆಯಾಗುತ್ತಿತ್ತು. ಸರಿಯೋ ತಪ್ಪೋ ಎಂಬ ತೀರ್ಮಾನಕ್ಕೆ ಬರದೆಯೇ ಈ ರೀತಿಯ ಬಳಕೆಯನ್ನು ಅನಿರ್ದಿಷ್ಟಿತ ಅವಧಿಯವರೆಗೆ ನನ್ನ ಬ್ಲಾಗಲ್ಲಿ ಬಳಸಿ ನೋಡಲು ತೀರ್ಮಾನಿಸಿಕೊಣ್ಡಿದ್ದೇನೆ.

ಮತ್ತೊಮ್ಮೆ ವಿಷಯಕ್ಕೆ ಬರುತ್ತೇನೆ. ಈ ಬ್ಲಾಗು ಮರುಪ್ರವೇಶಕ್ಕೆ ಕಾರಣ 'ಮುಙ್ಗಾರು ಮಳೆ' (ಮುಙ್ಗಾರು = ಮುಂಗಾರು). ಕನ್ನಡ ರಾಜ್ಯೋತ್ಸವ, ಕಾವೇರಿ ಬಿಕ್ಕಟ್ಟು ಸನ್ದರ್ಭಗಳಲ್ಲಿ ಇದ್ದ ಕಾವು ನಿನಗ್ಯಾವ ಸ್ಫೂರ್ತಿ ನೀಡಲಿಲ್ಲವೇ ಎನ್ದು ಕೇಳಬೇಡಿ. ಕನ್ನಡ ಚಿತ್ರರಙ್ಗದಲ್ಲಿ ಇದುವರೆಗೂ ಕಣ್ಡುಬರದ ಅದ್ಭುತ ಯಶಸ್ಸನ್ನು ಈ ಚಿತ್ರ ದಕ್ಕಿಸಿಕೊಣ್ಡಿದೆ. ಹೆಚ್ಚೂಕಡಿಮೆ ನೂರು ಸಿನೆಮಾ ಮನ್ದಿರಗಳಲ್ಲಿ ಶತದಿನೋತ್ಸವ ಆಚರಿಸಿರುವ 'ಮುಙ್ಗಾರು ಮಳೆ' ಈಗಲೂ ಬಹುತೇಕ ಎಲ್ಲಾ ಚಿತ್ರಮನ್ದಿರಗಳಲ್ಲಿ ತುಮ್ಬಿದ ಗೃಹದಲ್ಲಿ ಪ್ರದರ್ಶಿತವಾಗುತ್ತಿದೆ. ಆಗಾಧ ಮಾರುಕಟ್ಟೆಯ, ಅಪಾರ ಪ್ರೇಕ್ಷಕ ಸಮ್ಪತ್ತಿರುವ ತೆಲುಗು ಚಿತ್ರರಙ್ಗದಲ್ಲಿ ಕೆಲ ಚಿತ್ರಗಳು ಈ ಭಾಗ್ಯವನ್ನು ಪಡೆದುಕೊಣ್ಡಿವೆ. ಆದರೆ ಧಾರಾವಾಹಿ ನಟನಾಗಿ, ದೂರದರ್ಶನ ಕಾರ್ಯಕ್ರಮ ನಿರೂಪಕನಾಗಿಯಷ್ಟೇ ಜನರ ಮನದಲ್ಲಿ ಹೆಚ್ಚು ಮನೆಮಾಡಿದ್ದ ಗಣೇಶ್ ಎಮ್ಬ ನಟ ಈ ಚಿತ್ರದ ನಾಯಕ. ಆತ ನೋಡಲು ಸುರಸುನ್ದರನೂ ಅಲ್ಲ ಅಥವಾ ದೃಢಕಾಯದವನೂ ಅಲ್ಲ. ಈ ಚಿತ್ರದ ನಾಯಕಿಯೂ ಕೂಡ ಸುನ್ದರಿಯಲ್ಲ. ಆದರೂ ಚಿತ್ರಕ್ಕೆ ಈ ಅಪಾರ ಯಶಸ್ಸು ಪ್ರಾಪ್ತವಾಗಿದ್ದು ಹೇಗೆ?

ಚೆನ್ನೈನಲ್ಲಿದ್ದು ತೆಲುಗು, ತಮಿಳು ಮತ್ತು ಅಲ್ಪಸ್ವಲ್ಪ ಮಲಯಾಳ ಚಿತ್ರಗಳನ್ನು ನೋಡಿ ರೂಢಿಯಾಗಿರುವ ನನಗೆ ಕನ್ನಡ ಚಿತ್ರವೊನ್ದನ್ನು ವೀಕ್ಷಿಸುವಾಗ ತುಲನೆ ಮಾಡುವುದೂ ಕೂಡ ರೂಢಿಯಾಗಿಬಿಟ್ಟಿದೆ. ತಮಿಳು ಸಿನೆಮಾಗಳಲ್ಲಿ ಚಿತ್ರಕಥೆಗೆ ಹೆಚ್ಚು ಪ್ರಾಶಸ್ತ್ಯವಿರುತ್ತದೆ. ಸರಳ, ವಾಸ್ತವಿಕ ನಿರೂಪಣೆ, ಭರ್ಜರಿ ಸಾಹಸ, ಲಯಬದ್ಧ ನೃತ್ಯ ಮತ್ತು ಉಚ್ಚತಮ ಸಙ್ಗೀತಗಳಿಗೆ (ಸಂಗೀತ) ಹೆಚ್ಚು ಒತ್ತು ನೀಡಲಾಗುತ್ತದೆ. ಕನ್ನಡ ಸಿನೆಮಾಗಳಲ್ಲಿ ಇದರ ಕೊರತೆ ಎದ್ದುಕಾಣುತ್ತಿತ್ತು. ಕನ್ನಡ ಚಿತ್ರಮಾರುಕಟ್ಟೆಯ ಕೊರತೆ, ಅಕ್ಕಪಕ್ಕದ ಭಾಷೆಯವರ ಪೈಪೋಟಿ, ಬಣ್ಡವಾಳಕೊರತೆ ಇವೇ ಮುನ್ತಾದವು ಕನ್ನಡ ಚಿತ್ರರಙ್ಗದ ದುರವಸ್ಥೆಗೆ ಕಾರಣಗಳಾಗಿ ಗುರುತಿಸಲ್ಪಟ್ಟಿದ್ದವು. ಆದರೆ 'ಮುಙ್ಗಾರು ಮಳೆ' ಮತ್ತು 'ದುನಿಯಾ' ಇವೆಲ್ಲವನ್ನೂ ತಲೆಕೆಳಗು ಮಾಡಿಬಿಟ್ಟಿವೆ.

ಬೆಙ್ಗಳೂರಿನಲ್ಲಿ 'ಮುಙ್ಗಾರು ಮಳೆ' ಮತ್ತು 'ದುನಿಯಾ' ಚಿತ್ರ ನೋಡಲು ಕನ್ನಡಿಗರಷ್ಟೇ ಅಲ್ಲದೇ ಅನ್ಯ ಭಾಷಿಕರೂ ಕೂಡ ಮುಗಿಬಿದ್ದಿರುವುದು ನಿಜಕ್ಕೂ ಸಖೇದಾಶ್ಚರ್ಯದ ವಿಷಯ. ಕಡಿಮೆ ಬಣ್ಡವಾಳವಿದ್ದರೂ ಒಂದು ಒಳ್ಳೆಯ ಚಿತ್ರ ಮಾಡಬಹುದು ಮತ್ತು ಬೇರೆ ಭಾಷೆಯ ಚಿತ್ರಗಳೊನ್ದಿಗೆ ಸ್ಪರ್ಧಿಸಬಹುದು ಎಮ್ಬುದಕ್ಕೆ ಈ ಎರಡು ಚಿತ್ರಗಳು ಒಳ್ಳೆಯ ಉದಾಹರಣೆಗಳಾಗಿವೆ.

ನಿಜವಾಗಿ, 'ಮುಙ್ಗಾರು ಮಳೆ' ಒನ್ದು ಅದ್ಭುತ ಚಿತ್ರವಲ್ಲ ಅಥವಾ ಪರಿಪೂರ್ಣ ಚಿತ್ರವೂ ಅಲ್ಲ. ನಿರ್ದೇಶಕ ಯೋಗೇಶ್ ಭಟ್ ಅವರ ನವ್ಯ ನಿರೂಪಣೆ ಶೈಲಿ, ಹಾಗೂ ಗಣೇಶ್ ಅವರ ಹಗುರೆನಿಸುವ ನಟನೆ ಈ ಚಿತ್ರದ ಜೀವಾಳ. ಕಥೆ ಹೇಗೇ ಇದ್ದರೂ ಚಿತ್ರವನ್ನು ಗೆಲ್ಲಿಸುವುದು ಸೋಲಿಸುವುದು ಚಿತ್ರಕಥೆ. ಇದನ್ನು ತಮಿಳು, ತೆಲುಗು ಮತ್ತು ಮಲಯಾಳ ಚಿತ್ರೋದ್ಯಮಿಗಳು ಚೆನ್ನಾಗಿ ಅರಿತ್ತಿದ್ದಾರೆ. 'ಮುಙ್ಗಾರು ಮಳೆ' ಮತ್ತು 'ದುನಿಯಾ' ಚಿತ್ರಗಳು ಸೊರಗಿರುವ ಕನ್ನಡ ಚಿತ್ರೋದ್ಯಮಕ್ಕೆ ಹೊಸ ಪಾರಿಭಾಷ್ಯಕ್ಕೆ ಮುನ್ನುಡಿಯಾಗಿವೆಯೇ ಎಮ್ಬುದು ಮುನ್ದಿನ ದಿನಗಳಲ್ಲಿ ಮನದಟ್ಟಾಗುತ್ತದೆ.

Labels:

5 Comments:

Blogger Anveshi said...

ಅಬ್ಬಾ.... ಕಂನಡ ಸಾರಥಿಯಂನು ಎಲ್ಲೆಂದರಲ್ಲಿ ಹುಡುಕಾಡಿ ಸುಸ್ತಾದಂತಾಯಿತು. ಎಂಥ ಸ್ವಾಮೀ... ಎಲ್ಲಿಗೆ ಹೋಗಿದ್ರೀ....?

ನಿಮ್ಮ ಮೂಗಿಗೆ ಎಂತ ಆಯಿತು? ಎಲ್ಲಾ ಮೂಗ್ನಲ್ಲೇ ಮಾತಾಡ್ತಾ ಇದ್ದೀರಿ... ಬ್ಲಾಗಲ್ಲಿ ಮುಳುಗಿ ಶೀತಮ್ಮ ಹಿಡ್ಕಂಡಿರ್ಬೇಕೂಂತ ಕಾಣಿಸುತ್ತೆ. ಅಥ್ವಾ ಯಾರಾದ್ರೂ ಕುತ್ತಿಗೆ ಒತ್ತಿ ಹಿಡಿದ್ರಾ...? ಮೂಗ್ನಲ್ ಕಂನಡ್ ಪದವಾಡ್ತೀನಿ ನಂ ಮನಸಂ ನೀ ಕಾಣೆ ಅಂತ ರತ್ನ ಹೇಳಿದ್ದು ನೆಂಪಿಸಿಕೊಂಡ್ರಾ?
ಎರಡು ಅಕ್ಷರ ತಪ್ಪು ಬರ್ದಿದ್ದೀರಿ..... ಅದು ಹೀಗೆ ಆಗ್ಬೇಕಿತ್ತು:
(ಮುಙ್ಗಾರು = ಮುಙ್ಗಾರು)
ಮತ್ತು
ಸಙ್ಗೀತಗಳಿಗೆ (ಸಙ್ಗೀತ)
ತಪ್ಪಿದ್ದನ್ನು ತಿದ್ದಿಕೊಳ್ಳಿ, ಉಪ್ಪಿದ್ದಲ್ಲಿ ನೆಕ್ಕಿಕೊಳ್ಳಿ.

3:08 PM  
Blogger Sarathy said...

ಯಾಕೆ ಸ್ವಾಮಿ ಕಾಲೆಳೀತ್ತೀರಿ? ಬಾಯಲ್ಲಿ ಮಾತಾಡಿದ್ದನ್ನು ಅಕ್ಷರದಲ್ಲಿ ಬರೆಯುವ ಅನ್ತ ಪ್ರಯತ್ನಪಟ್ಟೆ. ನೀವು ಸೊನ್ನೆ ಅಙ್ಕ ಕೊಡೋಕೆ ನೋಡ್ತೀರಿ. ಮುಙ್ಗಾರು ಅನ್ತ ನೀವು ಹೇಳೋದನ್ನ ನಾನು ಮುಙ್ಗಾರು ಅನ್ಥಾನೇ ಬರೀತಿದ್ದೇನೆ. ನೀವು ಸಞ್ಗೀತ ಅನ್ಥ ಕೇಳೋದನ್ನ ನಾನು ಸಞ್ಗೀತ ಅನ್ಥಾನೇ ಬರೀತಿದ್ದೇನೆ. ಅದು ಸರಿಯೇ, ನೀವು "ಕಂನಡ" ಭಕ್ತರೇ?

2:09 PM  
Blogger Unknown said...

ಅರೆ ಸಾರಥಿ, ಚೆನ್ನೈಗೆ ಮುಂಗಾರು ಮಳೆ ಚಿತ್ರ ಬಂದಿರೊ ನ್ಯೂಸ್ ನ ಸುದ್ದಿ ಮಾಡ್ರಿ ಸ್ವಾಮಿ.

7:38 PM  
Blogger Sarathy said...

ನಮಸ್ಕಾರ ಪ್ರಸಾದ್ ಅವರಿಗೆ, ನೀವು ಕನ್ನಡ ಪ್ರಸಾದ್ ತಾನೇ? ಚೆನ್ನೈನಲ್ಲಿನ ಮುಂಗಾರು ಮಳೆ ಅನುಭವದ ಬಗ್ಗೆ ಬರೀಲೀಲ್ಲಾಂದ್ರೆ ಇನ್ಯಾವುದರ ಬಗ್ಗೆ ಬರೆಯೋಕ್ಕಾಗುತ್ತೆ.....ಬಿಡುಗಡೆಯಾಗಿ ಮೂವತ್ತಕ್ಕೂ ಹೆಚ್ಚು ವಾರಗಳಾದರೂ ಇನ್ನೂ ಜನಸಮೂಹವನ್ನು ಸೆಳೆಯುತ್ತಿರುವ ಈ ಚಿತ್ರ ಒಂದು ಪವಾಡವೇ....

7:38 PM  
Anonymous Anonymous said...

ಕರ್ನಾಟಕ ರಕ್ಷಣಾ ವೇದಿಕೆಯ ಕನ್ನಡಪರ ಹೋರಾಟವನ್ನು ಬೆಂಬಲಿಸಿ

http://karave.blogspot.com/

www.karnatakarakshanavedike.org

2:10 PM  

Post a Comment

<< Home