Saturday, May 27, 2006

ಮೀಸಲಾತಿ ಕಕ್ಕುಲಾತಿ - ಬೇಡ ಈ ದುರ್ಗತಿ

ಹೊತ್ತಿ ಉರಿಯುತ್ತಿರುವ ಮೀಸಲಾತಿಯು ಭಾರತದ ಪ್ರಜಾತಾಂತ್ರಿಕತೆಯ ಕಣ್ಣರೆಪ್ಪೆ ಮುಚ್ಚದಂತೆ ಮಾಡುವಲ್ಲಿ ಯಶಸ್ವಿಯಾಗಿದೆ. ಕೋಮುಗಲಭೆ, ಜಾತಿಕಲಹ, ಭಾಷೆಕಲಹ ಇವಿಷ್ಟೇ ಕೆಲ ಮಹದ್ವಿಷಯಗಳು ನಮ್ಮ ದೇಶವನ್ನು ಜಾಗೃತಗೊಳಿಸಲು ಸಮರ್ಥವಾಗಿರುವುವು. ಶಿಕ್ಷಣದ ಬಗ್ಗೆ ಕಾಳಜಿ, ಭ್ರಷ್ಟಾಚಾರದ ವಿರುದ್ಧ ಹೋರಾಟ, ಆರ್ಥಿಕ ವ್ಯವಸ್ಥೆಯ ಬಗ್ಗೆ ಅಭಿಪ್ರಾಯ ಇತ್ಯಾದಿ ವಿಷಯಗಳಿಗೆ ಮನಸು, ತಲೆ ಕೆಡಿಸಿಕೊಳ್ಳುವಷ್ಟು ನಮಗೆ ವ್ಯವಧಾನವಿಲ್ಲ. ಜಾತಿ, ಭಾಷೆ, ಧರ್ಮಗಳ ಸತ್ವಗಳನೇ ಉಂಡು ಬೆಳೆದಿರುವ ನಮಗೆ ಆ ವಿಷಯಗಳಲ್ಲಿ ಮಾತ್ರ ಸ್ವಾಭಿಮಾನ ಕೆರಳುತ್ತದೆ. ಭ್ರಷ್ಟಾಚಾರಗಳಲ್ಲಿ ಒಂದಿಲ್ಲೊಂದು ರೀತಿ ನಾವೂ ಪಾಲುದಾರರಾಗಿರುವುದರಿಂದಲೋ ಏನೋ ನಮಗೆ ಅದರ ವಿರುದ್ಧ ಹೋರಾಡಲು ನೈತಿಕತೆ ಅಡ್ಡಬರುತ್ತದೆ. ಆದರೆ ಮೀಸಲಾತಿ, ಕೋಮುಗಲಭೆ, ಜಾತಿಕಲಹಗಳು ಕಾಡ್ಗಿಚ್ಚಿನಂತೆ ಎಲ್ಲೆಡೆ ಆವರಿಸುತ್ತದೆ. ರಾಜಕೀಯ ಪಕ್ಷಗಳು ಇವುಗಳನ್ನು ಉಪಯೋಗಿಸಿ ತಮ್ಮ ತಮ್ಮ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತ್ತವೆ.

ನಾನು ನನ್ನ ಬ್ಲಾಗ್‌ನಲ್ಲಿ ಮೀಸಲಾತಿ ವಿಷಯದ ಬಗ್ಗೆ ಬರೆಯುವಾಗ ನನ್ನ ಪೂರ್ವಾಗ್ರಹಗಳು ಮತ್ತು ಜಾತಿಯ ಪ್ರಭಾವವಲಯದಿಂದ ಹೊರಬಂದು ವಿಚಾರ ಮಾಡುವುದು ತುಸು ಕಷ್ಟವೇ ಆಯಿತು. ಮೀಸಲಾತಿಯು ಜಾತಿಯ ಭಾವನಾತ್ಮಕ ಪರಿಧಿಯೊಳಗೇ ಬರುವುದರಿಂದ ಅದರ ಬಗೆಗಿನ ಭಾವೋದ್ರೇಕಗಳು ಉತ್ತುಂಗದಲ್ಲಿರುವುದು ಸಹಜ. ಈ ಮೀಸಲಾತಿ ಪರ-ವಿರೋಧ ಪ್ರತಿಭಟನೆಗಳು ಮೇಲ್ನೋಟಕ್ಕೆ ಕೇವಲ ಅರ್ಹತೆ, ಪ್ರತಿಭೆ ಮೇಲೆ ಆಧಾರಿತವಾಗಿವೆ ಎಂದನಿಸಬಹುದು. ಆದರೆ ವಾಸ್ತವದಲ್ಲಿ ಈ ಪ್ರತಿಭಟನೆಗಳ (ಪರ ಮತ್ತು ವಿರೋಧ) ಹಿಂದೆ ಜಾತಿಯ ಪ್ರಭಾವ ದಟ್ಟವಾಗಿರುತ್ತದೆ.

ಓರ್ವ ವ್ಯಕ್ತಿ ಮೀಸಲಾತಿಯನ್ನು ವಿರೋಧಿಸಿದರೆ, ಅವನಿಗೆ ಹಿಂದುಳಿದವರ ಏಳಿಗೆ ಬಯಸದ ದುರಹಂಕಾರಿ, ಬನಿಯಾ ಎಂಬೆಲ್ಲಾ ಹಣೆಪಟ್ಟಿ ತಗುಲುತ್ತದೆ. ಒಂದು ವೇಳೆ ಮೀಸಲಾತಿಯನ್ನು ಸಮರ್ಥಿಸಿಕೊಂಡರೆ ಅವನು ಸ್ವಂತಕಾಲಿನಲ್ಲಿ ಮೇಲೇರುವಷ್ಟು ಬುದ್ಧಿಶಕ್ತಿ ಇಲ್ಲದ ತಿರುಕ ಎಂದನಿಸಿಕೊಳ್ಳುತ್ತಾನೆ. ಈ ವಿಷಯದ ಬಗ್ಗೆ ಯಾವುದಾದರೂ ಬ್ಲಾಗ್‌ನಲ್ಲಿ ಚರ್ಚೆಯಾದರೆ ಅಲ್ಲಿ ವ್ಯಕ್ತವಾಗುವ ಬಹಳಷ್ಟು ಪ್ರತಿಕ್ರಿಯೆಗಳು ಮತ್ಸರ, ಅಶ್ಲೀಲ, ತುಚ್ಛ ಭಾವನೆಗಳಿಂದ ಕೂಡಿರುವುದನ್ನು ನೀವು ನೋಡಬಹುದು.

ಒಮ್ಮೆ ಒಂದು ವ್ಯವಸ್ಥೆ ರಚಿತವಾಯಿತೆಂದರೆ ಅದನ್ನು ಬಿಟ್ಟು ಹೊರಳಿ ನೋಡಲು ನಮಗೆ ಸಾಧ್ಯವಾಗದು. ಈ ಮೀಸಲಾತಿಯು ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿದೆ ಎಂಬುದನ್ನು ನೋಡುವಷ್ಟು ನಮಗೆ ವಿವೇಚನೆ ಇರುವುದಿಲ್ಲ. ಒಂದು ಸಿದ್ಧಾಂತಕ್ಕೆ ಕುರುಡರಾಗಿ ಬದ್ಧರಾಗಿಬಿಡುತ್ತೇವೆ. ನಮ್ಮ ಬದ್ಧತೆಗಳಿಗೆ ಅನುಗುಣವಾಗಿ ಸಿದ್ಧಾಂತಗಳನ್ನು ವಿಚಾರಗಳನ್ನು ಹೆಣೆಯುತ್ತಾ ಹೋಗುತ್ತೇವೆ.

ಎನ್‌ಡಿಟಿವಿ ಚಾನೆಲ್‌ನಲ್ಲಿ ನಡೆದ ಒಂದು ಚರ್ಚೆಯಲ್ಲಿ ಕೇಂದ್ರ ಸಚಿವ ಪಿ. ಚಿದಂಬರಂ ಅವರು ಮೀಸಲಾತಿ ಕುರಿತು ತಮ್ಮ ಅಭಿಪ್ರಾಯ ಮಂಡಿಸಿದ್ದರು. "ಕೇರಳ, ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶಗಳಲ್ಲಿ ಈಗಾಗಲೇ ಮೀಸಲಾತಿ ಪದ್ಧತಿಗಳು ರೂಢಿಯಲ್ಲಿದ್ದು ಪರಿಣಾಮಕಾರಿಯಾಗಿವೆ. ಪ್ರಸಕ್ತ ಪರಿಸ್ಥಿತಿಯಲ್ಲಿ ಮೀಸಲಾತಿಗಿಂತ ಉತ್ತಮವಾದ ಸಾಧನ ಬೇರೆ ಯಾವುದೂ ನನಗೆ ಕಂಡಿಲ್ಲ. ನಿಮಗೇನಾದರೂ ಅದು ತೋರಿದರೆ ದಯವಿಟ್ಟು ತಿಳಿಸಿ, ನಾವು ಪರಿಗಣಿಸುತ್ತೇವೆ" ಎಂದು ಚಿದಂಬರಂ ಅವರು ಸ್ಪಷ್ಟಪಡಿಸಿದ್ದರು. ಶಿಕ್ಷಣವು ಅರ್ಹತೆ (ಮೆರಿಟ್) ಆಧಾರಿತವಾಗಿರಬೇಕು ಎನ್ನುವವರು ಕ್ಯಾಪಿಟೇಶನ್ ಶುಲ್ಕದ ಬಗ್ಗೆ ಚಕಾರವೆತ್ತುವುದಿಲ್ಲ ಎಂದೂ ಕೆಲವರು ವಾದಿಸಿದ್ದರು. ಮೀಸಲಾತಿಯಿಂದ ಪ್ರವೇಶ ಗಿಟ್ಟಿಸುವವರಿಗೆ ತಕ್ಕ ಅರ್ಹತೆ ಇದೆ ಎಂದ ಮೇಲೆ ಮೀಸಲಾತಿ ಇಲ್ಲದೆಯೇ ಇತರರಂತೆ ಅವರೂ ಪ್ರಯತ್ನಿಸಬೇಕು ಎಂಬ ಧ್ವನಿಗಳೂ ಕೇಳಿಬಂದಿತ್ತು.

ಶತಮಾನಗಳಿಂದ ಸಮಾಜದ ಕೆಳಸ್ತರಗಳಲ್ಲೇ ಒದ್ದಾಡಿಕೊಂಡು ವಿದ್ಯೆಯ ಗಾಳಿ ಸೋಂಕದೇ ಉಳಿದುಕೊಂಡ ವರ್ಗಗಳಿವೆ. ಅಂಥವರಿಗೆ ಮೇಲೇರಲು ಅವಕಾಶದ ಸಹಾಯಹಸ್ತ ನೀಡುವುದೇ ಮೀಸಲಾತಿಯ ಮೂಲ ಉದ್ದೇಶವಾಗಿದೆ. ಈ ಉದ್ದೇಶವನ್ನು ಸಮರ್ಥವಾಗಿ, ಪರಿಪೂರ್ಣವಾಗಿ ಪೂರೈಸುವ ಏಕೈಕ ಸಾಧನ "ಶಿಕ್ಷಣ" ಎಂಬುದು ಎಲ್ಲರಿಗೂ ತಿಳಿದದ್ದೇ. ಪ್ರತಿಯೊಬ್ಬರಿಗೂ "ಸಮಾನ"ವಾದ ಶಿಕ್ಷಣ, "ಸಮಾನ"ವಾದ ಅವಕಾಶ ಸಿಕ್ಕರೆ ಮೀಸಲಾತಿಯ ರಗಳೆಗಳೇ ಇರುವುದಿಲ್ಲ. ಆದರೆ ಯಾರೂ ಈ "ಶಿಕ್ಷಣ" ಬೇಕು ಎಂದು ಹೋರಾಟ ಮಾಡುವುದಿಲ್ಲ, ಏಕೆಂದರೆ ಅದರಲ್ಲಿ ಜಾತಿ, ಧರ್ಮಗಳಂತಹ ಭಾವೋದ್ರೇಕಗಳಿರುವುದಿಲ್ಲವಲ್ಲ.

ಪ್ರತಿಯೊಬ್ಬರಲ್ಲೂ ಅವನದೇ ವೈಶಿಷ್ಟ್ಯಗಳಿವೆ. ಕಡುಬಡವರು ಅಥವಾ ಸಮಾಜದ ತೀರಾ ಕೆಳಸ್ತರದಲ್ಲಿ ಕೆಲಸ ಮಾಡುವವರಲ್ಲಿ ಇರುವ ಬುದ್ಧಿಶಕ್ತಿ ಯಾವುದೇ ಉನ್ನತ ಹುದ್ದೆಯಲ್ಲಿರುವನಷ್ಟೇ ಸಮಾನವಾಗಿರುತ್ತದೆ. ಇದು ಸುಳ್ಳು ಎಂದು ನಿಮಗನಿಸಿದರೆ ನೀವು ಓರ್ವ ಸಾಮಾನ್ಯ ವ್ಯಕ್ತಿಯಾಗಿ ಸಮಾಜದ ಕೆಳಸ್ತರದಲ್ಲಿ ಕೆಲ ದಿನಗಳನ್ನು ಕಳೆದು ನೋಡಿರಿ. ಸತ್ಯ ನಿಚ್ಚಳವಾಗಿ ಕಣ್ಣಿಗೆ ರಾಚುತ್ತದೆ.

ಸಾಮಾಜಿಕ ವ್ಯವಸ್ಥೆಯ ಲೋಪದಿಂದ ಸೂಕ್ತ ವಾತಾವರಣದ ಕೊರತೆಯಿಂದ ಅಂತಹ ಕೋಟಿಗಟ್ಟಲೆ ಮಾನವಸಂಪನ್ಮೂಲಗಳು ವ್ಯರ್ಥವಾಗಿ ಹೋಗುತ್ತಿವೆ. ಇದೂ ಒಂದು ರೀತಿಯ 'Brain Drain'. ಭಾರತದ ಆರ್ಥಿಕ ವ್ಯವಸ್ಥೆ ಸಬಲಗೊಳ್ಳಬೇಕಾದರೆ ಎಲ್ಲಾ ಮಾನವ ಸಂಪನ್ಮೂಲಗಳು ಸಬಲವಾಗಿರಬೇಕು. ಬೆರಳೆಣಿಕೆ ಮಂದಿಯಿಂದ ಅಭಿವೃದ್ಧಿ ಸಾಧಿಸಲಾಗದು. ಕೆಳ ಸ್ತರದಲ್ಲಿರುವ ಮಂದಿ ಮೇಲೆ ಬರಲು ಸೂಕ್ತ ವಾತಾವರಣ ಮತ್ತು ಅವಕಾಶಗಳಿರಬೇಕು. ಹಾಗೂ ಅಂತಹ ಅಗಾಧ ಮಾನವ ಸಂಪತ್ತುಗಳನ್ನು ಸೂಕ್ತವಾಗಿ ಬಳಸಿಕೊಳ್ಳುವಂತಹ ಆರ್ಥಿಕ ಅಭಿವೃದ್ಧಿ ವ್ಯವಸ್ಥೆ ರಚಿತವಾಗಬೇಕು.

ಆಗಲೇ ಹೇಳಿದ ಹಾಗೆ ಕೆಳಸ್ತರದವರು ಮೇಲೆ ಏರಲು ಇರುವ ಪರಿಣಾಮಕಾರಿ ಸಾಧನವೆಂದರೆ "ಶಿಕ್ಷಣ". ಪ್ರತಿಯೊಬ್ಬರಿಗೂ ಶಿಕ್ಷಣ ತಲುಪಬೇಕು. ಹಾಗೆ ತಲುಪಬೇಕಾದರೆ ಶಿಕ್ಷಣ ಉಚಿತವಿರಬೇಕು. ಶಿಕ್ಷಣದ ಗುಣಮಟ್ಟ ಅತ್ಯುತ್ತಮವಿರಬೇಕು. ಎಲ್ಲಡೆ ಶಿಕ್ಷಣ ಸಮಾನವಾಗಿರಬೇಕು. ಇದರಿಂದ ಗುಣಮಟ್ಟದ ಏರುಪೇರು ತಪ್ಪುತ್ತದೆ. ಎಲ್ಲರಿಗೂ ಸಮಾನ ಅವಕಾಶ ಪ್ರಾಪ್ತವಾಗುತ್ತದೆ.

ಇದು ಕಾಲ್ಪನಿಕ ಅಥವಾ ಅವಾಸ್ತವ ಸಿದ್ಧಾಂತವಲ್ಲ. ಹಲವು ದೇಶಗಳಲ್ಲಿ ಉಚಿತ ಶಿಕ್ಷಣ ಜಾರಿಯಲ್ಲಿದೆ. ಈ ವ್ಯವಸ್ಥೆಗೆ ಅಪಾರ ಹಣ ವ್ಯಯವಾಗುತ್ತದಾದರೂ ಅದು ಭವಿಷ್ಯಕ್ಕೆ ನಾವು ಹಾಕುತ್ತಿರುವ ಬಂಡವಾಳದಂತಾಗುತ್ತದೆ. ಆದರೆ ನಮ್ಮ ರಾಜಕೀಯ ನೇತಾರರಿಗೆ ಇದನ್ನು ಆರಂಭಿಸುವ ಗಂಡೆದೆ ಇದೆಯೇ? ರಾಜಕಾರಣಿಗಳನ್ನು ಬಿಟ್ಟುಬಿಡಿ, ನಮ್ಮನಿಮ್ಮಲ್ಲಿ ಈ ಬಗ್ಗೆ ಆಸಕ್ತಿ ತೋರಿಸುವ (ಹೋರಾಟ ಮಾತು ಬೇರೆ) ಮಂದಿ ಯಾರಾದರೂ ಇದ್ದಾರೆಯೇ? ಆಸಕ್ತಿ ತೋರಿಸುವುದಿಲ್ಲ. ಏಕೆಂದರೆ ಅವರ ಭಾವನೆಗಳನ್ನು ಉದ್ರೇಕಿಸುವ ಶಕ್ತಿ ಇದಕ್ಕಿಲ್ಲ.

Monday, May 15, 2006

ಕನ್ನಡ-ಎಫ್ಎಂ ಅಪಚಾರ, ವಿಚಾರ

-ಬೆಂಗಳೂರಿನಲ್ಲಿ ಮುಂಚಿನಿಂದಲೂ ಕನ್ನಡಕ್ಕೆ ಹೀನಾಯ ಪರಿಸ್ಥಿತಿ ಇದೆ. ಕನ್ನಡಿಗರಿಗಿಂತ ಅನ್ಯ ಭಾಷಿಕರೇ ಪ್ರಾಬಲ್ಯ ಮೆರೆದಿದ್ದಾರೆ.

-ಬೆಂಗಳೂರಿನಲ್ಲಿ ವ್ಯಾಪಾರ ವಹಿವಾಟುವಿನಂತಹ ಪ್ರಮುಖ ಕ್ಷೇತ್ರಗಳಲ್ಲಿ ಕನ್ನಡಿಗರು ಹೇಳಹೆಸರಿಲ್ಲದಂತಾಗಿದ್ದಾರೆ.

-ಒಬ್ಬ ಸಾಮಾನ್ಯ ವ್ಯಕ್ತಿಯು ಕನ್ನಡದ ಅಆಇಈ ಗೊತ್ತಿಲ್ಲದೆಯೇ ತನ್ನ ಇಡೀ ಜೀವಮಾನವನ್ನು ಬೆಂಗಳೂರಿನಲ್ಲಿ ಕಳೆಯಬಲ್ಲ.

-ಬೆಂಗಳೂರಿನಲ್ಲಿ ಕನ್ನಡದ ಚಿತ್ರಗಳಿಗಿಂತ ತಮಿಳು, ತೆಲುಗು, ಹಿಂದಿ ಚಿತ್ರಗಳಿಗೆ ಹೆಚ್ಚು ಪ್ರೇಕ್ಷಕರು ಮುಗಿಬೀಳುತ್ತಾರೆ.

-ಇಂತಹ ಹತ್ತುಹಲವು ವೈಪರೀತ್ಯಗಳಿಂದಾಗಿ ಬೆಂಗಳೂರಿನ ಕನ್ನಡಿಗರಲ್ಲಿ ಅಭದ್ರತೆಯ ಭಾವನೆ ಬೇರೂರಿದೆ. ಈ ಅಭದ್ರತಾ ಭಾವನೆಗಳು ಅವರನ್ನು ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದೆ. ಅನ್ಯ ಭಾಷಿಕರ ವಿರುದ್ಧ ಒಳಗೊಳಗೆಯೇ ಅಸಹನೆ ಏರ್ಪಟ್ಟಿದೆ.

ಡಾ. ರಾಜ್‌ಕುಮಾರ್ ನಿಧನಾನಂತರ ನಡೆದ ಘಟನೆಗಳ ಬಗ್ಗೆ ಚನ್ನೈನ ಕೆಲವು ಮಂದಿ ನನ್ನೊಂದಿಗೆ ಚರ್ಚೆ ನಡೆಸಿದ್ದರು. ಮೇಲೆ ತಿಳಿಸಿರುವ ವಿಚಾರಗಳು ಅವರ ವಿಶ್ಲೇಷಣೆಯ ರೂಪವಷ್ಟೇ.

ರಾಷ್ಟ್ರದ ಸಾಫ್ಟ್‌ವೇರ್ ಅಡ್ಡೆಯಾಗಿರುವ ಬೆಂಗಳೂರು ಈಗೀಗ ಬೇರೆ ಬೇರೆ ಕಾರಣಕ್ಕೆ ಎಲ್ಲರ ಗಮನ ಸೆಳೆಯುತ್ತಿದೆ. ಬೆಂಗಳೂರಿನ ಟ್ರಾಫಿಕ್, ನಗರದ ಬೀದಿ ಕಾಳಗಗಳು, ಇತ್ತೀಚಿನ ಡಾ. ರಾಜ್ ನಿಧನಾನಂತರದ ಘಟನೆಗಳು ಇತ್ಯಾದಿಗಳಿಂಗಾಗಿ, ಹೊರಗಿನವರ ಕಣ್ಣುಗಳು ಬೆಂಗಳೂರನ್ನು ನೋಡುತ್ತಿರುವ ದೃಷ್ಟಿಯೇ ಬದಲಾಗಿದೆ.

ಬೆಂಗಳೂರಿನ ಜನ ಅಸಹಿಷ್ಣುಗಳು; ಅವರಿಗೆ ಟ್ರಾಫಿಕ್ ಸಮಸ್ಯೆಯ ಚಿಂತೆ ಇಲ್ಲ, ಆದರೆ ಕನ್ನಡದ ಬಗ್ಗೆ ದುರಭಿಮಾನ ಇದೆ... ಹೀಗೇ ಆರೋಪಗಳು, ಚರ್ಚೆಗಳು ನಡೆಯುತ್ತವೆ.

ಇವಿಷ್ಟೂ ನಮ್ಮನ್ನು ಚಿಂತೆಗೀಡು ಮಾಡುತ್ತದೋ, ವಿಚಾರಗಳಿಗೀಡು ಮಾಡುತ್ತದೋ, ಪ್ರತಿಭಟನೆಗೀಡು ಮಾಡುತ್ತದೋ ಗೊತ್ತಿಲ್ಲ. ಈ ಆರೋಪಗಳು ಎಷ್ಟು ಸತ್ಯವೋ ಮಿಥ್ಯವೋ ಎಂಬುದನ್ನು ಬೆಂಗಳೂರಿಗರೇ ನಿರ್ಧರಿಸಬೇಕು. ಇಷ್ಟು ದಿನ ಹೊರಗಿನವರಿಗೆ ತನ್ನ ತಾಯಿಮಡಿಲಿನ ಆಸರೆಗೆ ಅವಕಾಶ ಒದಗಿಸಿದ ಕನ್ನಡಿಗರೇ ಸಮಾಧಾನ ಚಿತ್ತಹೊಂದಿರಿ...

ಎಫ್ಎಂ-ಎಫ್ಎಂ: ಇದೇ ವಿಚಾರಗಳ ಗುಂಗಿನಲ್ಲಿರಬೇಕಾದರೆ ನನಗೊಂದು ಇ-ಮೇಲ್ ಬಂದಿತು. ಬೆಂಗಳೂರಿನ ಖಾಸಗಿ ಎಫ್ಎಂ ಸ್ಟೇಶನ್‌ಗಳಲ್ಲಿ ಕನ್ನಡದ ನಿರ್ಲಕ್ಷವನ್ನು ವಿರೋಧಿಸಿ ಸಹಿ ಸಂಗ್ರಹಿಸುವ ತಾಣವೊಂದರ ಲಿಂಕ್ ಅದರಲ್ಲಿತ್ತು. ಪ್ರಾಯಶಃ ನಿಮಗೂ ಆ ಇ-ಮೇಲ್ ತಲುಪಿರಬಹುದು. ಸಹಿ ಸಂಗ್ರಹ ನೋಡಲು ಅಥವಾ ಅದರಲ್ಲಿ ನೀವು ಭಾಗವಹಿಸಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿರಿ.

http://www.PetitionOnline.com/protstfm/

ಕೆಲ ತಿಂಗಳ ಹಿಂದೆ ಬೆಂಗಳೂರಿನಲ್ಲಿ ಈ ವಿಷಯದ ಬಗ್ಗೆ ಚರ್ಚೆ ನಡೆದಿದ್ದು ನೆನಪಿದೆ. ಬೆಂಗಳೂರು ಒಂದು ಕಾಸ್ಮೋಪೊಲಿಟನ್ ನಗರ; ಇಲ್ಲಿ ಎಲ್ಲಾ ಭಾಷೆಯ, ಎಲ್ಲಾ ವರ್ಗದ ಜನರೂ ಇದ್ದಾರೆ; ಅವರೆಲ್ಲರಿಗೂ ಅರ್ಥವಾಗುವ ಸಾಮಾನ್ಯ ಭಾಷೆ ಹಿಂದಿಯಾದ್ದರಿಂದ ಎಫ್ಎಂ ಚಾನೆಲ್‌ಗಳಲ್ಲಿ ಹಿಂದಿಗೆ ಒತ್ತುನೀಡುತ್ತಿದ್ದೇವೆ ಎಂದು ಖಾಸಗಿ ಎಫ್ಎಂ ಚಾನೆಲ್‌ಗಳ ವಿಚಾರ ಮುಂದಿಟ್ಟಿದ್ದವು.

ಈ ವಿಚಾರ ಏನೇ ಇರಲಿ, ಇವೇ ಖಾಸಗಿ ಚಾನೆಲ್‌ಗಳು ಚೆನ್ನೈನಲ್ಲೂ ಇದ್ದಾವೆ. ಆ ನಗರದಲ್ಲೂ ಅನ್ಯಭಾಷಿಕರು ಸಾಕಷ್ಟಿದ್ದಾರೆ. ಒಂದು ಲೆಕ್ಕದ ಪ್ರಕಾರ ಚೆನ್ನೈನಲ್ಲಿ ಶೇ 50 ಮಂದಿ ಹೊರಗಿನ ಮೂಲದವರೇ ಆಗಿದ್ದಾರೆ. ಇಂತಹ ಚೆನ್ನೈನಲ್ಲಿ ಎಲ್ಲಾ ಎಫ್ಎಂ ಚಾನೆಲ್‌ಗಳು ಬಹುತೇಕ ತಮಿಳು ಹಾಡುಗಳನ್ನೇ ಪ್ರಸಾರ ಮಾಡುತ್ತವೆ ಮತ್ತು ಕಾರ್ಯಕ್ರಮ ನಿರೂಪಣೆಯನ್ನು ತಮಿಳು ಭಾಷೆಯಲ್ಲೇ ಮಾಡುತ್ತವೆ. ಅವರ ಕಾರ್ಯಕ್ರಮ ನಿರೂಪಣೆಯಲ್ಲಿ ವಿವಿಧ ವೈಶಿಷ್ಟ್ಯಗಳ ಮಿಶ್ರಣವಿರುತ್ತದೆ. ಚೆನ್ನೈ ಆಡು ಭಾಷೆ, ವಿವಿಧ ಗ್ರಾಮ್ಯ ಸೊಗಡಿನ ತಮಿಳು ಭಾಷೆ, ಪರಿಶುದ್ಧ ತಮಿಳು ಭಾಷೆ ಹೀಗೆ ವಿಶಿಷ್ಟವಾಗಿರುವ ನಿರೂಪಣೆಯನ್ನು ಕೇಳುವುದಕ್ಕೆ ನನ್ನಂತಹ ಅನ್ಯಭಾಷಿಕನಿಗೇ ಖುಷಿಯಾಗುತ್ತದೆ. ತಮಿಳು ಎಂದು ನಾನು ಎಂದೂ ಮೂಗುಮುರಿದಿಲ್ಲ.

ಬೆಂಗಳೂರಿನ ಖಾಸಗಿ ಎಫ್ಎಂ ಚಾನೆಲ್‌ಗಳಿಗೆ ಕನ್ನಡದ ಅಲರ್ಜಿ ಏಕೆ ಎಂಬುದು ಅರ್ಥವಾಗುತ್ತಿಲ್ಲ. ಹಿಂದಿ ಭಾಷೆ ಬಗೆಗೆ ಕನ್ನಡಿಗರಿಗೆ ಇರುವ ವಿಶೇಷ ಒಲವು ಈ ಚಾನೆಲ್‌ಗಳಿಗೆ ಸುಗ್ರೇಸಾಗಿದೆ. ವಿಶಿಷ್ಟ ನಿರೂಪಣೆಯಿದ್ದರೆ ಅನ್ಯ ಭಾಷಿಕನು ಕೂಡ ಕನ್ನಡ ಹಾಡುಗಳನ್ನು ಕೇಳಿ ಆನಂದಿಸಬಲ್ಲ. ಕನ್ನಡದ ಹಾಡುಗಳನ್ನು ಕೇಳುವ ಶ್ರೋತೃಗಳು ಹೆಚ್ಚಾದಷ್ಟೂ ಕನ್ನಡ ಸಂಗೀತ ಕ್ಷೇತ್ರಕ್ಕೆ ಉತ್ತೇಜನ ದೊರೆತಂತಾಗುತ್ತದೆ.

ಈ ವಿಚಾರಗಳಲ್ಲಿ ನನಗೆ ಮೇಲ್ನೋಟಕ್ಕೆ ಕಂಡುಬಂದ ಅನಿಸಿಕೆಗಳಷ್ಟನ್ನೇ ಇಲ್ಲಿ ಯಥಾವತ್ತಾಗಿ ಬರೆದಿದ್ದೇನೆ. ಇದರ ಬಗೆಗೆ ಚರ್ಚೆ ನಡೆದಷ್ಟೂ ಒಳ್ಳೆಯದು ಎಂಬ ಅಭಿಪ್ರಾಯ ನನ್ನದು.

Friday, May 05, 2006

ಡಿಕೆಶಿ ರಾಜಕೀಯ ಪ್ರಸಂಗ; ಒಂದು ಸಂದರ್ಶನ

"ದೇವೇಗೌಡರು ನನ್ನನ್ನು ರಾಜಕೀಯವಾಗಿ ಮುಗಿಸಲು ಯತ್ನಿಸುತ್ತಿದ್ದಾರೆ" ಎಂದು ಕರ್ 'ನಾಟಕ'ದ 'ಹ್ಯಾಂಗ್ರೀ ಮ್ಯಾನ್' ಡಿ.ಕೆ. ಶಿವಕುಮಾರ್ ಅವರು ಮೇ 4ರಂದು ಚೆನ್ನೈನಲ್ಲಿ ಉದಯ ಟಿವಿಯೊಂದಿಗೆ ಪರಿತಪಿಸಿದ್ದಾರೆ. ಕೆಲ ವರ್ಷಗಳ ಹಿಂದೆ ವಿನ್ ವಿನ್ (ಕನ್ನಡದಲ್ಲಿ WIN TV ಸ್ಥಾಪನೆ) ಎಂದು ಹೇಳಿ ಹೇಳಿ ಶಿವಕುಮಾರ್ ಸುಸ್ತಾಗಿ ಕೊನೆಗೆ ವಿನ್ ಆಗದೆಯೇ ಸೋಲೊಪ್ಪಿದರು. ಇತ್ತ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವೂ ವಿನ್ ಆಗದೇ ಪತನಗೊಂಡಾಗ ಡಿಕೆಶಿ ಪರದೇಶಿ ಆಗಬೇಕಾಯಿತು. ಆದರೆ ತಮಿಳುನಾಡಿನಲ್ಲಿ ಕಾಂಗ್ರೆಸ್ಸನ್ನು ವಿನ್ ಮಾಡಲು ಶಿವಕುಮಾರ್ ಅವರನ್ನು ಛೂ ಬಿಟ್ಟಿರುವುದು ನಿಗೂಢವಾಗಿಯೇ ಇದೆ. ತಮಿಳುನಾಡಿನ ಚುನಾವಣೆಯಲ್ಲಿ ಕಲೈನಾರ್ ಮತ್ತು ಅಮ್ಮಗಳ ಆರ್ಭಟಗಳ ಮಧ್ಯೆ ಡಿಕೆಶಿ ಅವರ ವಿನ್ ವಿನ್ ಮಂತ್ರ ಕೇಳುವುದಿಲ್ಲ ಎಂಬ ಗಂಡೆದೆ ಭಂಡ ಧೈರ್ಯ ಕಾಂಗ್ರೆಸ್ಸಿಗೆ ಇದ್ದಿರಬಹುದು.

ಹಿನ್ನೆಲೆ: ಕರ್ನಾಟಕದ ಹಿಂದಿನ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಡಿ.ಕೆ.ಶಿ ಒಂದು ಹೂ-ಮುಳ್ಳು ಆಗಿದ್ದರು. ಇಂತಹ ಸುಂದರ ಹೂವನ್ನು ಕಿತ್ತು ದಾನ ಮಾಡುವಂಥ ಸತ್ಕಾರ್ಯಕ್ಕೆ ಓಲ್ಡ್ ಮ್ಯಾನ್ ದೇವೇಗೌಡರು ಕೈಹಾಕಿದ್ದರು. ಇಂತಹ ಸತ್ಕರ್ಮಿಯು ಹೂ ಕೀಳುವಾಗ ಅದರೊಂದಿಗಿದ್ದ ಮುಳ್ಳು ಚುಚ್ಚಿಬಿಟ್ಟರೆ ಏನಾಗಬೇಡ? ಮುಳ್ಳುಚುಚ್ಚಿದ ನೋವಿನಲ್ಲಿ ದೇವೇಗೌಡರು ಕಿಟಾರನೇ ಕಿರುಚಿದ ಶಬ್ದಕ್ಕೆ ಇಡೀ ಹೂದೋಟ ಮಾಲಿಕರು ಥರಥರ ನಡುಗಬೇಕಾಯಿತು. ಅಲ್ಲದೆ, 'ದೇವ'ರಿಗೇ ಬಂತಾ ವಿಪತ್ತು ಎಂದು ಕಂಗೆಟ್ಟ ದೇವೇಗೌಡ ಬೆಂ'ಬಲಿ'ಗರು ಹರಿಸಿದ ಕಟುನೀರಿನ ಕೋಡಿಗೆ ಹೂದೋಟವೇ ಮುಳುಗಿಹೋಗಿತ್ತು.

ಆದರೇನು, ಬಿಸಿಲಿನ ಝಳಕ್ಕೆ ಮುರುಟಿ ಹೋಗಲಿದ್ದ ಬಿಜೆಪಿಯ ಕಮಲ ಕೈಗೆ ಸಿಕ್ಕ ಮೇಲೆ ದೇವೇಗೌಡರು ನಿರುಮ್ಮಲರಾಗಿದ್ದಾರೆ. ಕಮಲದ ಹೂವಿನ ಅಡಿಯಲ್ಲಿ ಮುಳ್ಳಿರಬಹುದೆಂಬ ಸಂದೇಹದಲ್ಲಿ ಅದಕ್ಕೆ ಕೈ ಹಾಕುವ ಸಾಹಸಕ್ಕೆ ದೇವೇಗೌಡರು ಈವರೆಗೆ ಹೋಗಿಲ್ಲ. ಮುಂದೆ ಸತ್ಯದ ಅರಿವಾಗಿ ದೇವೇಗೌಡರು ಕಾರ್ಯಾಚರಣೆ ಕೈಗೊಳ್ಳುವಾಗ ಸಚಿತ್ರ ವರದಿ ಸಲ್ಲಿಸಲು ಕನ್ನಡಸಾರಥಿ ಬಳಗ ಕಾದು ಕುಳಿತಿದೆ.

ಮುಂದೆ: ಏನು ಸ್ವಾಮಿ 'ತಲೆ'ಬರಹದಲ್ಲಿ "ಡಿಕೆಶಿ ರಾಜಕೀಯ ಪ್ರಸಂಗ" ಅಂತ ಇದೆ, ನೀವು "ಡಿಜಿ(ದೇವೇಗೌಡ) ರಾಜಕೀಯ ಪ್ರಹಸನ" ಮಾಡುತ್ತಿದ್ದೀರಿ ಎಂದು ಕೇಳುತ್ತಿದ್ದೀರೇನು? ಡಿಕೆಶಿ ಹುಟ್ಟಿದ್ದೇ ದೇವೇಗೌಡರ ಬೇಟೆಗಾಗಿ ಎಂಬ ಸುದ್ದಿ ಊಹಾಪೋಹಗಳ ವೇಗವನ್ನೂ ಮೀರಿ ಹಬ್ಬತೊಡಗಿದ್ದನ್ನು ಹಲವರು ಕಲ್ಪಿಸಿಕೊಂಡಿದ್ದಾರೆ.

ಕನ್ನಡದ ಖ್ಯಾತ ಬ್ಲಾಗಿಗರಾದ ಶ್ರೀರಾಮ್ ಅವರು ತಮ್ಮ ಬ್ಲಾಗ್‌ನಲ್ಲಿ ನರ್ಮದಾ ಬಚಾವೋ ಆಂದೋಲನದ ನಾಯಕಿ ಮೇಧಾ ಪಾಟ್ಕರ್ ಅವರ ಹೋರಾಟದ ಭವಿಷ್ಯದ ಬಗ್ಗೆ ಸಂದೇಹ ತೋರ್ಪಡಿಸಿದ್ದರು. ಹಾಗೆಯೇ ನಮ್ಮ ಡಿಕೆಶಿ ಅವರು ದೇಗೌ ವಿರೋಧಿ ಆಂದೋಲನದ ನಂತರ ಮುಂದೇನು ಮಾಡುವರು ಎಂಬ ಬಗ್ಗೆ ನಮಗೆ ಜಿಜ್ಞಾಸೆ ಏರ್ಪಟ್ಟಿತು.

ಸರಿ ಹೇಗಿದ್ದರೂ ಡಿಕೆಶಿ ಅವರು ಚೆನ್ನೈನಲ್ಲೇ ಬಿಡಾರ ಹೂಡಿದ್ದಾರೆ, ಹೋಗಿ ಮಾತನಾಡಿಸೋಣ ಎಂದು ಸಕಲ ಕಲ್ಪನಾ ವಿಳಾಸಗಳೊಂದಿಗೆ ಡಿಕೆಶಿ ಭೇಟಿಯಾದೆವು. ಅದರ ವರದಿ ಇಂತಿದೆ...


ಕಸಾ: "ದೇವೇಗೌಡರು ನನ್ನನ್ನು ರಾಜಕೀಯವಾಗಿ ಮುಗಿಸಲು ಯತ್ನಿಸುತ್ತಿದ್ದಾರೆ" ಎಂದು ನೀವು ಇನ್ನೂ ದೂರುತ್ತಿದ್ದೀರಿ. ಅದರ ಬಗ್ಗೆ ವಿವರಣೆ ನೀಡುತ್ತೀರಾ?

ಡಿಕೆಶಿ: ರಾಮಕೃಷ್ಣ ಹೆಗಡೆ, ಜೆಎಚ್ ಪಟೇಲ್, ಸಿದ್ಧರಾಮಯ್ಯ ಮೊದಲಾದವರ ರಾಜಕೀಯ ಪುಟವನ್ನು ಮುಚ್ಚಿಹಾಕಿದ ದೇವೇಗೌಡರು ಈಗ ನನ್ನ ಮೇಲೆ ಕಣ್ಣಿಟ್ಟಿದ್ದಾರೆ. ನಾನು.....


ಕಸಾ: ಆದರೆ... ಹೆಗಡೆ, ಪಟೇಲರಂಥವರ ರಾಜಕೀಯ ಜೀವನವನ್ನೇ ಅಂತ್ಯಗೊಳಿಸಿದ ದೇವೇಗೌಡರು ಈಗಾಗಲೇ ನಿಮ್ಮ ರಾಜಕೀಯ ಅಧ್ಯಾಯವೊಂದನ್ನು ಮುಕ್ತಾಯ ಮಾಡಿದ್ದಾರಲ್ಲ, ಇನ್ನು ಮತ್ತೆ ಮುಗಿಸುವುದೆಂತು?

ಡಿಕೆಶಿ: ಕೆಕ್ಕರಿಸುತ್ತಾ... ನಿಮ್ಗೆ ರಾ ಜ ಕೀ ಯ ಗೊತ್ತೇನ್ರೀ... ಹೆಗ್ಡೆ, ಪಟೇಲ್ರೂ ಅವರ್ನೆಲ್ಲಾ ಮುಗ್ಸಿದ್ದು ಆ ಗೌಡ ಅಲ್ಲ, ಅವ್ರೆಲ್ಲಾ ಆಗ್ಲೇ ಮುಗ್ದುಹೋಗಿದ್ರು... ಇವ್ರು ಕಿತ್ತಾಕಿದ್ದು ಏನೂ ಇಲ್ಲ...


ಕಸಾ: ಸರಿ, ದೇವೇಗೌಡರ ಮೇಲೆ ನಿಮ್ಮ ಮುಂದಿನ ಹೋರಾಟ ಹೇಗೆ?

ಡಿಕೆಶಿ: ಗೌಡ ಎಂಬ ರಾವಣನನ್ನು ಸಂಹಾರ ಮಾಡೋಕ್ಕಾಗಿ ಈ ಶಿವ ಹುಟ್ಟವ್ನೇ. ಗೌಡ್ರು ಇವತ್ತು ನಂಗೆ ಹೊಡ್ದಿರಬಹುದು. ಆದ್ರೆ ನಾನು ರಾವಣ ಇದ್ದಂಗೆ... ಒಂದು ತಲೆ ಹೋದ್ರೆ ಇನ್ನೂ ಬೇಜಾನ್ ತಲೆಗಳಿರ್ತವೆ....


ಕಸಾ: ಸಾರ್, ರಾವಣನ್ನ ಕೊಂದಿದ್ದು ಶಿವನೋ ರಾಮನೋ ಸ್ವಲ್ಪ ಕನ್ ಫ್ಯೂಸ್ ಆಗ್ತಿದೆ... ಹೋಗ್ಲಿ... ನೀವು ರಾವಣನ್ನ ಸಂಹಾರ ಮಾಡಕ್ಕೆ ಹುಟ್ಟಿದ್ದೀನಿ ಅಂದ್ರಿ, ಮತ್ತೆ ನಾನು ರಾವಣ ಇದ್ಹಂಗೆ ಅಂತೀರೀ... ಅರ್ಥ ಆಗ್ತಾನೇ ಇಲ್ಲ?

ಡಿಕೆಶಿ: ಅದ್ಕೆ ನಾನ್ ಹೇಳಿದ್ದು ನಿಮ್ಗೆ ರಾಜಕೀಯ ಅರ್ಥ ಆಗೊಲ್ಲ ಅಂತ... ನಿಮ್ಜೊತೆ ಬಡ್ಕೊಳ್ಳೋಕೆ ನಂಗೆ ಪುರುಸೊತ್ತಿಲ್ಲ. ಅಮ್ಮಾವ್ರ ಜೊತೆ ಮಾತಾಡ್ಬೇಕು...


ಕಸಾ: ಅಯ್ಯೋ, ನೀವು ಚೆನ್ನೈಗೆ ಕಾಂಗ್ರೆಸ್ ಪರ ಪ್ರಚಾರಕ್ಕೆ ಬಂದಿದೀರೋ ಇಲ್ಲಾ ಅಮ್ಮಾವ್ರ(ಜಯಲಲಿತಾ) ಪರ ಪ್ರಚಾರಕ್ಕೆ ಬಂದಿದೀರೋ ಗೊತ್ತಾಗ್ತಿಲ್ವೇ...

ಡಿಕೆಶಿ: ಅಮ್ಮಾವ್ರು(ಸೋನಿಯಾ) ಅಂದ್ರೆ ಕಾಂಗ್ರೆಸ್ಸು, ಕಾಂಗ್ರೆಸ್ಸಂದ್ರೆ ಅಮ್ಮಾವ್ರು... ಅಷ್ಟೂ ತಿಳೀದೇ ಇರೋ ಗುಗ್ಗು ಅಲ್ರೀ ನೀವು...


ಕಸಾ: ಸಾರ್ ಅಮ್ಮಾವ್ರು ಏಐಡಿಎಂಕೆ ಪಾರ್ಟಿ ಅಂತ ಸ್ವಲ್ಪ ನೆನಪಿದ್ದ ಹಾಗಿದೆ... ಅದ್ರೇ ಕನ್ ಫ್ಯೂಸು...

ಡಿಕೆಶಿ: ಆ ದೊಡ್ಡಮ್ಮಾವ್ರ ಮುಂದೆ ಈ ಚಿಕ್ಕವ್ವನ್ನ ಸುದ್ಧಿ ಎತ್ತುತ್ತೀಯಲ್ಲೋ ಪೆಕ್ರಾ.


ಡಿಕೆಶಿ ಗುಡುಗಿದ ಸದ್ದಿಗೆ ನರಗೆಟ್ಟು ಓಟ ಕೀಳಬೇಕಾಯಿತು.....

Tuesday, May 02, 2006

ಬ್ರಾ ಬ್ರಾ ಬ್ರಾ ಸೈಪ್ರಸ್ 'ಬ್ರಾ'ಖಲೆ


ಸೈಪ್ರಸ್ ದ್ವೀಪದ ಮಹಿಳೆಯರು 1 ಲಕ್ಷದ 15 ಸಾವಿರ ಬ್ರಾಗಳನ್ನು ಕಲೆಹಾಕಿ ವಿಶ್ವದಾಖಲೆ ಮಾಡಿದ್ದಾರಂತೆ. ಆ ಬ್ರಾಗಳು ಒಟ್ಟು 111 ಕಿಲೋಮೀಟರು ಉದ್ದವಿವೆಯಂತೆ. ಮಹಿಳೆಯರ ಮಾನಮಿಡಿಯುವ ಈ ಬ್ರಾಖಲೆಯ ಆಮೋಧ ದೃಶ್ಯವನ್ನು ನೋಡಲು ಎಷ್ಟು ಸಂಖ್ಯೆಯಲ್ಲಿ ಗಂಡಸರು ದಾಪುಗಾಲು ಹಾಕುತ್ತಿದ್ದಾರೆಂಬುದನ್ನು ಇನ್ನೂ ಪತ್ತೆಹಚ್ಚಲಾಗಿಲ್ಲ.

ಒಂದು ಮೂಲದ ಪ್ರಕಾರ, ಬ್ರಾಗಳನ್ನು ತ್ಯಜಿಸಿ ವಿಬ್ರಾವಸ್ತ್ರಿತರಾದ ಅಂಗನೆಯರನ್ನು ನೋಡಿ ಪಾವನರಾಗುವ ಹೆಬ್ಬಯಕೆಯಿಂದ ವಿಶ್ವಾದ್ಯಂತದಿಂದ ಗಂಡಸರು ಆ ಬ್ರಾವನದತ್ತ ಓಡೋಡಿಬರುತ್ತಿದ್ದಾರೆನ್ನಲಾಗಿದೆ. ಪ್ರವಾಸಿಗಳ ಬರದಿಂದ ತತ್ತರಿಸುತ್ತಿದ್ದ ಸೈಪ್ರಸ್ ದ್ವೀಪ ಒಮ್ಮಿಂದೊಮ್ಮೆಲೇ ಕಳೆಗಟ್ಟಿ ನಿಂತಿದೆ ಎಂದು ಬ್ರಾದರ್ಶಿಗಳು ಹೇಳಿರುವುದು ವರದಿಯಾಗಿದೆ.

ಸ್ತನ ಕ್ಯಾನ್ಸರ್ ವಿರುದ್ಧದ ಪ್ರಚಾರಕ್ಕಾಗಿ ಈ ಬ್ರಾ ದಾಖಲೆಯನ್ನು ಮಾಡಲಾಯಿತೆಂದು ನೈಜ ವರದಿ ಹೇಳಿರುವುದಾದರೂ ಅನೈಜ ವರದಿಗಳಿಂದ ಬೇರೊಂದು ಸಂಗತಿ ಬೆಳಕಿಗೆ ಬಂದಿದೆ. ಆ ದ್ವೀಪದಲ್ಲಿನ ಗಂಡಸರೆಲ್ಲರೂ ವಿ'ಬ್ರಾ'ವಿತ ಹೆಣ್ಣುಗಳನ್ನು ಹ(ಅ)ರಸುವ ಕೆಲಸದಲ್ಲೇ ನಿರತವಾಗಿ ಕಾಲಹರಣ ಮಾಡುತ್ತಿದ್ದುದರಿಂದ ದೇಶದ (ಹಾಗೂ ಕುಟುಂಬದ) ಉತ್ಪಾದನಾ ವಲಯಕ್ಕೆ ತೀವ್ರ ಧಕ್ಕೆ ಒದಗಿಬಂದಿತ್ತಂತೆ. ಅದಕ್ಕಾಗಿ ಅಲ್ಲಿನ ಸರಕಾರ ಮತ್ತು ಮಹಿಳೆಯರ ನಡುವೆ ಮಾತ'ಕತೆ' ನಡೆದು ಒಂದು ತೀರ್ಮಾನಕ್ಕೆ ಬಂದರೆನ್ನಲಾಗಿದೆ. ಆ ತೀರ್ಮಾನದ ಪ್ರಕಾರ ಮಹಿಳೆಯರು ತಮ್ಮ ತೀರಾ ಮಾನವನ್ನು ಕೊಂಚ ಕಡಿತಗೊಳಿಸುವ ಮೂಲಕ, ಅಂದರೆ, ತಮ್ಮ ಬ್ರಾ ಅನ್ನು ತ್ಯಜಿಸುವ ಮೂಲಕ ವಿ'ಬ್ರಾ'ವಿತರಾಗಬೇಕು. ಇದರಿಂದ ಕಂಡಕಂಡಲ್ಲಿ ವಿಬ್ರಾಂಗನೆಯರು ಸಿಗುವುದರಿಂದ ಪುರುಷರು ವಿಬ್ರಾಂಗನೆಯರನ್ನು ಕಷ್ಟಪಟ್ಟು ಹುಡುಕುವ ಕೆಲಸ ತಪ್ಪುತ್ತದೆ.

ಬ್ರಾವನ ವೀಕ್ಷಿಸಲು ಬರುತ್ತಿರುವ ಕಾಮ'ಕೋಟಿ' ಗಂಡಸರನ್ನು ಮಾತನಾಡಿಸಿದಾಗ, ಇಂತಹ ಅಪ'ರೂಪ'ದ ದಾಖಲೆಯನ್ನು ನಿರ್ಮಿಸಿದ ಮಾನಿನಿಯರಿಗೆ ಪ್ರೋತ್ಸಾಹ ನೀಡಲು ಬಂದಿರುವುದಾಗಿ ತಿಳಿಸಿದ್ದಾರೆ. ತಮ್ಮ ದೇಶಗಳಲ್ಲಿ ತೊಟ್ಟುಕೊಳ್ಳಲು ಬ್ರಾ ಇಲ್ಲದೆ ಮಾನಕಳೆದುಕೊಂಡಿದ್ದ ಹೆಣ್ಣು ಮಕ್ಕಳಿಗಾಗಿ ಬ್ರಾಗಳನ್ನು ಕೊಂಡೊಯ್ಯುವುದಾಗಿ ಹೇಳಿದ್ದಾರೆ. ಅಲ್ಲದೆ ತಮ್ಮ ದೇಶದ ಅನೇಕ ಹೆಂಗಸರು ಮೇಲ್ವಸ್ತ್ರ ಕೊಳ್ಳಲು ಕಾಸಿಲ್ಲದೆ ಚಿಂದಿ ಬಟ್ಟೆ ಉಟ್ಟೇ ಮಾನ ಮುಚ್ಚಿಕೊಳ್ಳುತ್ತಿದ್ದಾರೆ. ಅವರಿಗೋಸ್ಕರ ನೀವುಗಳು ಮೇಲ್ವಸ್ತ್ರಗಳನ್ನೂ ತ್ಯಜಿಸಿ ದಾನ ಮಾಡಬೇಕೆಂದು ಸೈಪ್ರಸ್ ದ್ವೀಪದ ಹೆಂಗಳೆಯರಿಗೆ ಕೋರಿಕೆ ಸಲ್ಲಿಸುವುದಾಗಿಯೂ ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.