Wednesday, October 17, 2007

ಕಟ್ಟಾ ಸಿನೆಮಾ - ಕಟ್ರದು ತಮಿಳ್ MA

ಕಾಲೇಜೊಂದರಲ್ಲಿ ಆರಂಭಿಕ ತರಗತಿಯ ದೃಶ್ಯ -

ಉಪನ್ಯಾಸಕ: (ಓರ್ವ ವಿದ್ಯಾರ್ಥಿಯನ್ನುದ್ದೇಶಿಸಿ...) ಏನಪ್ಪಾ, ನೀನು ತಮಿಳು ಎಂ.ಎ.ಗೆ ಸೇರಿಕೊಂಡದ್ದು ಯಾಕೆ?
ವಿದ್ಯಾರ್ಥಿ: ಸಾರ್, ಊರಲ್ಲಿ ನಮ್ಮದು ಸ್ವಲ್ಪ ಜಮೀನು ಇದೆ. ಅದನ್ನು ಅಭಿವೃದ್ಧಿ ಮಾಡಲು ನಮಗೆ ಸಾಲ ಬೇಕಾಗಿದೆ. ಡಿಗ್ರಿ ಸರ್ಟಿಫಿಕೇಟ್ ಮೇಲೆ ಸುಲಭವಾಗಿ ಸಾಲ ಪಡೆಯಬಹುದು. ಬೇರೆಯವಕ್ಕಿಂತ ಆರ್ಟ್ಸ್ ವಿಭಾಗ ಪಾಸ್ ಆಗಲು ಸುಲಭವಿರುವುದರಿಂದ ಇಲ್ಲಿಗೆ ಸೇರಿದೆ.

ಉಪನ್ಯಾಸಕರು ಮತ್ತೋರ್ವ ವಿದ್ಯಾರ್ಥಿಗೂ ಇದೇ ಪ್ರಶ್ನೆ ಹಾಕುತ್ತಾರೆ. ಅದಕ್ಕೆ ಅವನ ಉತ್ತರ...
"ನಂಗೆ ಬೇರೆ ಯಾವುದೇ ವಿಭಾಗದಲ್ಲೂ ಸೀಟ್ ಸಿಗಲಿಲ್ಲ. ಅದಕ್ಕೆ ಇಲ್ಲಿ ಸೇರಿದೆ".

ಈ ಮೇಲಿನದು 'ಕಟ್ರದು ತಮಿಳ್ ಎಂ.ಎ.' ಎಂಬ ತಮಿಳು ಚಿತ್ರದ ಒಂದು ದೃಶ್ಯ. ಈ ದೃಶ್ಯವು ಕೇವಲ ತಮಿಳಷ್ಟೇ ಅಷ್ಟೇ ಅಲ್ಲ, ನಮ್ಮ ಕನ್ನಡದ ಸ್ಥಿತಿಗೂ ಒಂದು ಕೈಗನ್ನಡಿಯಾಗಿದೆ. ಈಗ ನಾನು ಹೇಳಹೊರಟಿರುವುದು ಈ ವಿಷಯವನ್ನಲ್ಲ. ಕೋಮಾವಸ್ಥೆಯಲ್ಲಿದ್ದ 'ಕನ್ನಡಸಾರಥಿ'ಯು ಬ್ಲಾಗ್ ಬರೆಯುವಷ್ಟು ದಿಢೀರ್ ಚೇತರಿಕೆ, ಸ್ಫೂರ್ತಿ ನೀಡಿದ 'ಕಟ್ರದು ತಮಿಳ್ ಎಂ.ಎ.' ಎಂಬ ತಮಿಳು ಸಿನೆಮಾ ಬಗ್ಗೆ ನನ್ನ ಒಂದಷ್ಟು ಅನಿಸಿಕೆಗಳು ಇಲ್ಲಿವೆ.

'ಕಟ್ರದು ತಮಿಳ್ ಎಂ.ಎ.' ಎಂಬುದರ ಅರ್ಥ 'ಓದಿದ್ದು ತಮಿಳ್ ಎಂ.ಎ.' ಅಂತ. ಈ ಚಿತ್ರದ ನಿರ್ದೇಶಕ ರಾಮ್ ಅವರಿಗೆ ಇದು ಮೊದಲ ಚಿತ್ರ ಎಂದರೆ ನಂಬಲು ಸಾಧ್ಯವೇ ಇಲ್ಲ ಎನ್ನುವಷ್ಟು ಚೆನ್ನಾಗಿದೆ. ತಮಿಳಿನಲ್ಲಿ ಸ್ನಾತಕೋತ್ತರ ಪದವಿ ಪಡೆದ ವ್ಯಕ್ತಿಯೋರ್ವನ ಬದುಕಿನ ಕರಾಳ ಮುಖದ ನೈಜ ಚಿತ್ರಣ ಈ ಸಿನೆಮಾದಲ್ಲಿದೆ. ನಿಜಜೀವನದಲ್ಲಿ ನಮ್ಮ, ನಿಮ್ಮೆಲ್ಲರ ಕಣ್ಣಿಗೆ ಬೀಳದೇ ಎಲೆಮರೆಯ ಕಾಯಿಯಂತೆ ಬೆಳೆದು ಉದುರಿಹೋಗಿರುವ ಮತ್ತು ಉದುರಿಹೋಗುತ್ತಿರುವ ಎಷ್ಟೋ ಜೀವನಗಳಿವೆ. ಅಂತಹ ಒಂದು ಜೀವನವೊಂದರ ಕತೆ 'ಕಟ್ರದು ತಮಿಳ್ ಎಂ.ಎ.'

ಚಿತ್ರದ ನಾಯಕ ಪ್ರಭಾಕರ ಚಿಕ್ಕಂದಿನಲ್ಲೇ ಕುಟುಂಬದ ಧಾರುಣ ಅಂತ್ಯ ಕಂಡವನು. ತಮಿಳು ಮಾಸ್ತರರೊಬ್ಬರ ನೆರಳಿನಲ್ಲಿ ಓದಿ ಬೆಳೆಯುವ ಪ್ರಭಾಕರ ತಮಿಳು ಸ್ನಾತಕೋತ್ತರ ಪದವಿ ಪಡೆದು ಉಪನ್ಯಾಸಕನೂ ಆಗುತ್ತಾನೆ. ಆದರೆ ಕೆಲವಾರು ದುರದೃಷ್ಟಕರ ಘಟನೆಗಳಿಂದಾಗಿ ಪೊಲೀಸರು ಪ್ರಭಾಕರನ ಹಿಂದೆ ಬೀಳುತ್ತಾರೆ. ತನ್ನ ಬಾಲ್ಯ ಗೆಳತಿ ಹಾಗೂ ಪ್ರೇಮಿಯಾದ ಆನಂದಿನಿಯ ಸುಳಿವು ಇಲ್ಲದೆ ಅದಾಗಲೇ ವ್ಯಗ್ರನಾಗಿದ್ದ ಪ್ರಭಾಕರ ಅನಿರೀಕ್ಷಿತ ಪ್ರಸಂಗವೊಂದರಲ್ಲಿ ನಿಜವಾಗಿಯೂ ಕೊಲೆಗಾರನಾಗಬೇಕಾಗುತ್ತದೆ. ಆನಂತರ ಆತ ದೂರದ ಪ್ರದೇಶವೊಂದಕ್ಕೆ ಓಡಿ ಹೋಗಿ ಅಲ್ಲಿ ಸಾಧುಗಳೊಂದಿಗೆ ಬೆರೆತುಹೋಗುತ್ತಾನೆ. ಸಾಧುಗಳಂತೆ ಮೀಸೆ ಗಡ್ಡಗಳನ್ನು ಬಿಟ್ಟು, ಅವರಂತೆ ಚುಟ್ಟಾ, ಭಂಗಿ ಮುಂತಾದ ಹವ್ಯಾಸಗಳನ್ನು ಕಲಿಯುತ್ತಾನೆ. ಕೆಲವು ವರ್ಷಗಳ ನಂತರ ಚೆನ್ನೈ ನಗರಕ್ಕೆ ವಾಪಸ್ಸು ಬರುವ ಪ್ರಭಾಕರ ಅದಾಗಲೇ ಸೈಕಿಕ್ ಆಗಿರುತ್ತಾನೆ. ಪುನಃ ಕೆಲವಾರು ಕೊಲೆಗಳನ್ನು ಎಸಗುವು ಆತ ತನ್ನ ಜೀವನದ ಸಂಪೂರ್ಣ ವಿವರಗಳನ್ನು ದಾಖಲೆ ಮಾಡಿ ಟಿವಿ ಚಾನಲ್‌ಗೆ ನೀಡುತ್ತಾನೆ. ತನ್ನ ಜೀವನದ ದುಃಸ್ಥಿತಿಗೆ ಮೂಲ ಕಾರಣನಾದ ಇನ್ಸ್‌ಪೆಕ್ಟರ್‌ನನ್ನು ಸಾಯಿಸಿದ ನಂತರ ಆತನು ಅಚಾನಕ್ ಆಗಿ ತನ್ನ ಪ್ರೇಯಸಿ ಆನಂದಿನಿಯನ್ನು ಪುನಃ ಸಂಧಿಸುತ್ತಾನೆ. ಅದಾಗಲೇ ಪೊಲೀಸರು ಪ್ರಭಾಕರನ ಹಿಂದೆ ಬೀಳುತ್ತಾರೆ. ಇನ್ನೇನು ಪೊಲೀಸರ ಕೈಗೆ ಸಿಕ್ಕಿಬೀಳಬೇಕು ಎನ್ನುವಷ್ಟರಲ್ಲಿ ಅವರಿಬ್ಬರು ಸ್ವಯಂ ಪ್ರಾಣ ಕಳೆದುಕೊಳ್ಳುತ್ತಾರೆ.

ಮೇಲೆ ಹೇಳಿದ ಕತೆ ಕೇಳಿದರೆ ನಿಮಗೆ ಚಿತ್ರ ಹೆಚ್ಚು ಕುತೂಹಲ ಮೂಡದಿರಬಹುದು. ಚಿತ್ರದ ಹೂರಣ, ರೂಪುರೇಷೆ, ಚಿತ್ರಕತೆ ಮತ್ತು ಪಾತ್ರಪೋಷಣೆಗಳೇ ಈ ಚಿತ್ರದ ಜೀವಾಳ. ಯುವನಟ ಜೀವ ನಾಯಕನಟನ ಜವಾಬ್ದಾರಿ ಹೊತ್ತಿದ್ದಾರೆ. ಆತನ ಪಾತ್ರ ನೀಜಕ್ಕೂ ತೀರಾ ಸಂಕೀರ್ಣ. ಅಂತಹ ಪಾತ್ರವನ್ನು ಇಷ್ಟು ಸಲೀಸಾಗಿ ನಟಿಸಿರುವ ಜೀವ ಪ್ರಸಕ್ತ ತಲೆಮಾರಿನ ಅಗ್ರಗಣ್ಯ ಪ್ರತಿಭೆಯಾಗಿ ಹೊರಹೊಮ್ಮಿದ್ದಾರೆ. ಕಾಲೇಜು ಹುಡುಗನಾಗಿ ಆತ ಸಹಜವಾಗಿ ಕಾಣುತ್ತಾನೆ. ಹಾಗೆಯೇ, ವಿಕಾರ ಮನೋಭಾವದ ಗಡ್ಡಧಾರಿ ಸಾಧುವಿನ ಪಾತ್ರಕ್ಕೂ ಆತ ಸಹಜವಾಗಿ ಒಪ್ಪುತ್ತಾನೆಂಬುದು ಅಶ್ಚರ್ಯ. ಚಿತ್ರನಾಯಕಿ ಆನಂದಿನಿ ಪಾತ್ರಕ್ಕೆ ಅಂಜಲಿ ಎಂಬ ಹೊಸ ನಟಿ ಸಂಪೂರ್ಣ ನ್ಯಾಯ ಒದಗಿಸುತ್ತಾಳೆ. ಆಕೆಯ ಮುಖಭಾವ, ರೂಪ ಎಲ್ಲವೂ ನಮ್ಮೆಲ್ಲರ ಜೀವನದಲ್ಲಿ ಬಂದುಹೋಗುವ ಹುಡುಗಿಯ ಪ್ರತಿಬಿಂಬವಾಗಿವೆ.

ಚಿತ್ರದಲ್ಲಿ ನಿಮ್ಮನ್ನು ಯೋಚನೆಗೀಡು ಮಾಡುವ ಹಲವಾರು ದೃಶ್ಯಗಳಿವೆ. ನಾಯಕ ಪ್ರಭಾಕರನು ಸ್ನಾತಕೋತ್ತರ ಪದವಿಯ ನಂತರ 2 ಸಾವಿರ ರೂಪಾಯಿಯ ಸಂಬಳಕ್ಕೆ ಮಾಸ್ತರನ ಕೆಲಸಕ್ಕೆ ಸೇರಿಕೊಳ್ಳುತ್ತಾನೆ. ಅ ಸಂದರ್ಭದಲ್ಲೇ ಆತನ ಬಾಲ್ಯ ಸ್ನೇಹಿತನೊಬ್ಬನನ್ನು ಸಂಧಿಸುತ್ತಾನೆ. ಅಮೆರಿಕದಲ್ಲಿದ್ದು ಇದೀಗ ಚೆನ್ನೈಗೆ ಬಂದಿದ್ದ ಆತನ ಆ ಸ್ನೇಹಿತ ಐಟಿ ಕಂಪನಿಯೊಂದರಲ್ಲಿ ಕೆಲಸದಲ್ಲಿರುತ್ತಾನೆ. ಆತನಿಗೆ ಪ್ರತೀ ಮಾಸ 2 ಲಕ್ಷ ರೂಪಾಯಿ ಸಂಬಳ. ಸ್ನೇಹಿತನ ಆಫೀಸಿನಲ್ಲೇ ಸ್ವಯಂ ಈ ವಿಷಯ ತಿಳಿದಾಗ ಪ್ರಭಾಕರನಿಗೆ ಪರಮಾಶ್ಚರ್ಯವಾಗುತ್ತದೆ. ಏಕೆಂದರೆ ಆ ಸ್ನೇಹಿತ ಬಾಲ್ಯದಲ್ಲಿ ಓದುವುದರಲ್ಲಿ ಪ್ರಭಾಕರನಿಗಿಂತ ಬಹಳ ಹಿಂದಿದ್ದ. ತಾನು ಅವನಿಗಿಂತಲೂ ಚೆನ್ನಾಗಿ ಓದಿದ್ದರೂ ತನಗೆ 2 ಸಾವಿರ ಸಂಬಳ, ಆತನಿಗೆ 2 ಲಕ್ಷ ರೂ ಸಂಬಳ ಎಂಬ ವಿಷಯವನ್ನು ಜೀರ್ಣಿಸಿಕೊಳ್ಳಲು ಪ್ರಭಾಕರನಿಗೆ ಸಾಧ್ಯವಾಗುವುದಿಲ್ಲ. ಆತ ಅಲ್ಲಿ ತನ್ನ ಸ್ನೇಹಿತನನ್ನು ಹಂಗಿಸಿ ಮಾತನಾಡುತ್ತಾನೆ. ಮೊದಮೊದಲು ಈ ದೃಶ್ಯದಲ್ಲಿ ನಾಯಕನ ಹುಚ್ಚಾಟ ಅತಿಯಾಯಿತೆನಿಸಿದರೂ ನಂತರ ಆತನ ನೆಲೆಯಲ್ಲಿ ನಿಂತು ಯೋಚಿಸಿದಾಗ ಅವನು ಮಾಡಿದ್ದು ಅಸಹಜ ಎಂಬಂತೆ ತೋರುವುದಿಲ್ಲ. ಕಡಿಮೆ ಪ್ರತಿಭೆಯಿದ್ದರೂ ಐಟಿ, ಬಿಪಿಓ ಎಂದು ಸೇರಿ ಲಕ್ಷಗಟ್ಟಲೆ ಸಂಪಾದಿಸುವ ಜನರಿಂದಾಗಿ ಇನ್ನುಳಿದ ಮಂದಿಯ ಜೀವನಕ್ಕೆ ಮಾರುಪೆಟ್ಟು ಬಿದ್ದಿದೆ ಎಂಬ ಅಂಶದ ಬಗ್ಗೆ ನೀವು ಒಮ್ಮೆಯಾದರೂ ಚಿಂತಿಸುತ್ತೀರಿ.

ಚಿತ್ರದ ಒಂದು ದೃಶ್ಯದಲ್ಲಿ ಅದಾಗಲೇ ಮಾನಸಿಕವಾಗಿ ವ್ಯಗ್ರನಾಗಿ ಹಲವಾರು ಕೊಲೆಗಳನ್ನು ಮಾಡಿದ್ದ ನಾಯಕ ಪ್ರಭಾಕರನು ಒಂದು ಮಾತು ಹೇಳುತ್ತಾನೆ. ಕೊಲೆಗಾರರ ಕೊಲೆಗಳೆಲ್ಲವಕ್ಕೂ ಕಾರಣ ಅಥವಾ ತರ್ಕಗಳು ಇರುತ್ತವೆ ಎಂಬುದು ಸುಳ್ಳು. ವಿನಾಕಾರಣವಾಗಿ ಕೊಲೆ ಮಾಡುವವರ ಸಂಖ್ಯೆ ಹೆಚ್ಚು ಎಂದು ಆತ ಒಂದು ಭಯಾನಕ ಸತ್ಯವನ್ನು ನಮಗೆ ತೆರೆದಿಡುತ್ತಾನೆ. ಇದಕ್ಕೆ ಸ್ವತಃ ಆತನದ್ದೇ ಉದಾಹರಣೆಗಳನ್ನು ನೀಡುತ್ತಾನೆ. ಚೆನ್ನೈನ ಬೀಚೊಂದರಲ್ಲಿ ಪ್ರೇಮದ ಅಪ್ಪುಗೆಯಲ್ಲಿದ್ದ ಪ್ರೇಮಿಗಳನ್ನು ಸಹಿಸಲಾಗದೆ ನಾಯಕನು ಅವರಿಬ್ಬರನ್ನೂ ಗುಂಡಿಕ್ಕಿ ಸಾಯಿಸುವುದು ಅವನಿತ್ತ ಒಂದು ಉದಾಹರಣೆ.

ನಾಯಕನು ಚಹಾದಂಗಡಿಯಲ್ಲಿ ಸಿಗರೇಟು ಸೇದುವಾಗ ಪೊಲೀಸರು ಆತನನ್ನು ಸ್ಟೇಷನ್ನಿಗೆ ಕರೆದುಕೊಂಡು ಹೋಗುತ್ತಾರೆ. ಪೊಲೀಸ್ ರೆಜಿಸ್ಟ್ರಿ ಪುಸ್ತಕದಲ್ಲಿ ಆತನ ಹೆಸರು ಮತ್ತು ವಿಳಾಸಗಳನ್ನು ದಾಖಲಿಸಿಕೊಳ್ಳುತ್ತಾರೆ. ಏಕೆಂದರೆ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ನಿಷಿದ್ಧ. ಈ ಘಟನೆಯಲ್ಲಿ ಅಂತಹ ವಿಶೇಷತೆ ಏನಿದೆ ಎಂಬ ಪ್ರಶ್ನೆ ಎದುರಾಯಿತೆ? ಚಿತ್ರದ ತಿರುವಿಗೆ ಈ ಘಟನೆಯೇ ಕಾರಣ ಎಂಬ ವಿಷಯವನ್ನು ಹಿಡಿದು ನಾನು ಬರೆಯತೊಡಗಿದರೆ ಇನ್ನೊಂದು ವಿಮರ್ಶೆ ಬೇಕಾಗುತ್ತದೆ. ಈ ಘಟನೆಯು ನನ್ನ ಸ್ವಂತ ಅನುಭವವನ್ನು ಹೋಲುತ್ತದೆ. ನಾನು ಚೆನ್ನೈಗೆ ಬಂದ ಹೊಸತರಲ್ಲಿ ಸಾರ್ವಜನಿಕ ಧೂಮಪಾನ ನಿಷೇಧದ ಅರಿವಿಲ್ಲದೆಯೇ ಒಮ್ಮೆ ಪೊಲೀಸ್ ಸ್ಟೇಷನ್‌ವೊಂದರ ಎದುರಿಗೆ ರಾಜಾರೋಷವಾಗಿ ಸಿಗರೇಟು ಸೇದಿಕೊಂಡು ಹೋಗುತ್ತಿದ್ದೆ. ಪೊಲೀಸನೊಬ್ಬ ನನ್ನನ್ನು ಕೈಬೀಸಿ (ಹೊಡೆತವಲ್ಲ, ರಸ್ತೆಯ ಆ ಪಕ್ಕದಿಂದ) ಕರೆದ. ಇಂಡಿಯನ್ ಎಕ್ಸ್‌ಪ್ರೆಸ್ ಗ್ರೂಪ್‌ನಲ್ಲಿ ಕೆಲಸ ಮಾಡುತ್ತಿದ್ದುದರಿಂದ ಒಣಜಂಬ ಮತ್ತು ಧೈರ್ಯವಿತ್ತು. ನಾನು ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದುದು ಹೇಗೋ ತಿಳಿದಿರಬೇಕು ಎಂಬ ಅಜ್ಞಾನ ಅರಿವು ಸುಳಿದಿತ್ತು. ಆದರೆ ಆ ಪೊಲೀಸನು ಒಳಗೆ ಕರೆದುಕೊಂಡುಹೋಗಿ ರೆಜಿಸ್ಟರಿ ಪುಸ್ತಕದಲ್ಲಿ ನನ್ನ ಹೆಸರು ಮತ್ತು ವಿಳಾಸಗಳನ್ನು ದಾಖಲಿಸುವಂತೆ ಆಜ್ಞಾಪಿಸಿದ. ನಾನು ಆಕ್ಷೇಪಿಸಿ, ಯಾಕೆ ಎಂದು ಕೇಳಿದಾಗ ಆತ ಆಗ ಧೂಮಪಾನ ನಿಷೇಧದ ಬಗ್ಗೆ ಹೇಳಿ ನನ್ನನ್ನು ಒಂದಷ್ಟು ಬಯ್ದ. ಅವನಿಗೆ 50 ರೂಪಾಯಿ ದಂಡ ತೆತ್ತು ಮರಳಬೇಕಾಯಿತು.

ಗಂಭೀರವಾದ ಚಿತ್ರವೊಂದರ ಬಗ್ಗೆ ಬರೆಯುವಾಗ ನನ್ನ ಸ್ವಂತ ಅನುಭವಗಳನ್ನು ಹೇಳಿಕೊಂಡದ್ದು ಸ್ವಲ್ಪ ಬಾಲಿಶವೇ ಇರಬಹುದು. ಇದಿರಲಿ ಬಿಡಿ, ಈಗ ಒಂದು ಕೊನೆಯ ಮಾತು - ಪಕ್ಕಾ ಸಿನೆಮಾ ಪ್ರೇಮಿಗಳು ಕಡ್ಡಾಯವಾಗಿ ನೋಡಲೇಬೇಕಾದ ಚಿತ್ರ ಈ 'ಕಟ್ರದು ತಮಿಳ್ ಎಂ.ಎ.'